ಸರ್ಕಾರದ ಎಡಬಿಡಂಗಿ ನಿರ್ಧಾರದಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರ: ಬೋರ್ಡ್ ಪರೀಕ್ಷೆ ಕುರಿತು ಆರ್.ಅಶೋಕ್ ಕಿಡಿ.

ಬೆಂಗಳೂರು,ಮಾರ್ಚ್,19,2024(www.justkannada.in): 5, 8, 9ನೇ ತರಗತಿಗಳ ಪಬ್ಲಿಕ್ ಪರೀಕ್ಷೆಗೆ ತಡೆಯಾಜ್ಞೆ ನೀಡಲಾಗಿದ್ದು ಈ ಸಂಬಂಧ ಮೇಲ್ಮನವಿ ವಿಚಾರಣೆ ನಡೆಸಿರುವ ಹೈಕೋರ್ಟ್ ತೀರ್ಪನ್ನ ಕಾಯ್ದಿರಿಸಿದೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಗೊಂದಲದಲ್ಲಿದ್ದು ಈ ಕುರಿತು ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ಆರ್.ಅಶೋಕ್ ಅವರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಈ ಸಂಬಂಧ ಟ್ವಿಟ್ ಮಾಡಿರುವ ಆರ್.ಅಶೋಕ್, 5, 8, 9 and 11 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತೇವೆ ಎಂದು ಯಾವುದೇ ಪೂರ್ವಸಿದ್ಧತೆ, ಮುಂದಾಲೋಚನೆ ಇಲ್ಲದೆ ಧಿಡೀರ್ ಆದೇಶ ಹೊರಡಿಸಿದ ಕಾಂಗ್ರೆಸ್ ಸರ್ಕಾರದ ಎಡಬಿಡಂಗಿ ನಿರ್ಧಾರದಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದ್ದು, ಪರೀಕ್ಷೆಗಳ ದಿನಾಂಕ ಪದೇ ಪದೇ ಬದಲಾಗುತ್ತಿರುವುದರಿಂದ ಪೋಷಕರು ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.

ಶಿಕ್ಷಣ ಇಲಾಖೆ ಇಷ್ಟೊಂದು ದೊಡ್ಡ ಗೊಂದಲದ ಗೂಡಾಗಿರುವ ಸಂದರ್ಭದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿ ಪೋಷಕರಿಗೆ, ವಿಧ್ಯಾರ್ಥಿಗಳಿಗೆ ಧೈರ್ಯ ತುಂಬುವುದು ಬಿಟ್ಟು, ಸಹೋದರಿಯ ಚುನಾವಣೆಯಲ್ಲಿ ಸಂಪೂರ್ಣ ಮಗ್ನರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಮುಂದುವರೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ನಿಮಗೆ ರಾಜ್ಯದ ಮಕ್ಕಳ ಭವಿಷ್ಯಕ್ಕಿಂತ ಚುನಾವಣೆಯೇ ಮುಖ್ಯವಾದರೆ ಶಿಕ್ಷಣ ಸಚಿವರಿಂದ ರಾಜೀನಾಮೆ ಪಡೆದು ಫುಲ್ ಟೈಮ್ ಪಕ್ಷದ ಕೆಲಸ ಮಾಡಲು ಹೇಳಿ. ಕಳೆದ 9 ತಿಂಗಳಿನಿಂದ ಪದೇ ಪದೇ ಎಡವಟ್ಟುಗಳ ಮೇಲೆ ಎಡವಟ್ಟುಗಳನ್ನು ಮಾಡುತ್ತಿದ್ದರೂ ಶಿಕ್ಷಣ ಸಚಿವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗದ ನಿಮ್ಮ ಪರಿಸ್ಥಿತಿ ನೋಡಿದರೆ ತಾವು ಅಸಹಾಯಕರಾಗಿದ್ದೀರಿ ಅನ್ನಿಸುತ್ತಿದೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Key words: 5 8,9th class-exam-government-decision- R.Ashok