ನಾಳೆ ಕೆಎಸ್ ಆರ್ ಟಿಸಿ ಬಳಗಕ್ಕೆ ಸೇರಲಿವೆ ‘ಪಲ್ಲಕ್ಕಿ ಉತ್ಸವ’  ಬ್ರ್ಯಾಂಡ್ ನ 40 ಹೊಸ ಐಶಾರಾಮಿ ಬಸ್ ಗಳು.

ಬೆಂಗಳೂರು,ಅಕ್ಟೋಬರ್,6,2023(www.justkannada.in):  ರಾಜ್ಯದ ಸಂಚಾರಿ ವ್ಯವಸ್ಥೆಯ ಜೀವನಾಡಿಯಾಗಿರುವ ಕೆಎಸ್‌ಆರ್‌ಟಿಸಿ ಬಳಗಕ್ಕೆ ಮತ್ತೊಂದು ಹೊಸ ಐಶಾರಾಮಿ ಬಸ್‌ ಸೇರ್ಪಡೆಯಾಗುತ್ತಿದೆ. ಅದರ ಹೆಸರು ‘ಪಲ್ಲಕ್ಕಿ ಉತ್ಸವ’!

ಶಕ್ತಿ ಯೋಜನೆಯು ಆರಂಭವಾದ ಬಳಿಕ ಕೆಎಸ್‌ ಆರ್‌ ಟಿಸಿ ಬಸ್‌ ಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ನಿತ್ಯ ಪ್ರಯಾಣಿಕರ ಸಂಖ್ಯೆಯು 75 ಲಕ್ಷ ದಿಂದ 1.1 ಕೋಟಿಗೆ ಹೆಚ್ಚಳವಾಗಿದೆ. ಈ ಹಿನ್ನೆಲೆ ಸಾರಿಗೆ ಸಂಸ್ಥೆಗಳಿಗೆ ಹೊಸ ಬಸ್‌ ಖರೀದಿಗೆಂದು ಸರ್ಕಾರ ಅನುದಾನ ನೀಡಿತ್ತು. ಸದ್ಯ ಹೊಸ ಬಸ್‌ ಗಳು ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ರಸ್ತೆಗೆ ಇಳಿಯಲಿದೆ.

ಶಕ್ತಿ ಯೋಜನೆ ಜಾರಿ ಬಳಿಕ ಕೆಎಸ್‌ ಆರ್‌ ಟಿಸಿ ತನ್ನ ಬಸ್‌ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ. ಈ ನಿಟ್ಟಿನಲ್ಲಿ 100 ಹೊಸ ಬಸ್‌ ಗಳನ್ನು ಖರೀದಿ ಮಾಡಿದೆ. ಇನ್ನು ಇದರ ಜತೆಗೆ 40 ಹೊಸ ಐಶಾರಾಮಿ ಬಸ್‌ಗಳನ್ನು ಕೂಡ ರಸ್ತೆಗಿಳಿಸುತ್ತಿದೆ. ಈ ಮೂಲಕ ಕೆಎಸ್‌ ಆರ್‌ ಟಿಸಿ ಮತ್ತಷ್ಟು ಅರಾಮದಾಯಕ ಪ್ರಯಾಣವನ್ನು ಜನರಿಗೆ ನೀಡುವುದರಲ್ಲಿ ಎರಡು ಮಾತಿಲ್ಲ.

ಈ ನೂತನ ಬಸ್‌ ಗಳಿಗೆ ಅಕ್ಟೋಬರ್‌ 7 (ಶನಿವಾರ) ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ​​​ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸರ್ಕಾರದ ಸಚಿವರು, ಶಾಸಕರು ಹಾಗೂ ಕೆಎಸ್‌ ಆರ್‌ ಟಿಸಿ ಅಧಿಕಾರಿಗಳು ಉಪಸ್ಥಿತರಿದ್ದಾರೆ.

ನಾನ್‌ ಎಸಿ ಸ್ಪೀಪರ್‌ ಬಸ್‌ ಇದಾಗಿದೆ.​ ಅತ್ಯಂತ ಆಕರ್ಷಕ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸ ಹೊಂದಿದೆ. 28 ಆಸನಗಳ ಸಾಮರ್ಥ್ಯ ಹೊಂದಿದೆ. ಸದ್ಯ ಇರುವ ಸ್ಲೀಪರ್‌ ಬಸ್‌ಗಳಿಗೆ ಹೋಲಿಸಿದರೆ ಈ ಬಸ್‌ ಆಸನ ಹೆಚ್ಚು ಪ್ರಯಾಣಿಕ ಸ್ನೇಹಿಯಾಗಿದೆ. ಅಶೋಕ್‌ ಲೇಲ್ಯಾಂಡ್‌ ಕಂಪನಿಯಿಂದ ನಿರ್ಮಾಣವಾಗಿವೆ.  ಬಸ್‌ ನ ಬೆಲೆ 45 ಲಕ್ಷ ರೂಪಾಯಿಯಾಗಿದೆ.

​ಎಲ್ಲೆಲ್ಲಿ ಸಂಚಾರ? ಯಾವಾಗಿನಿಂದ ಆರಂಭ?

ಈ ಬ್ರ್ಯಾಂಡ್‌ ನ 40 ಬಸ್‌ ಗಳ ಪೈಕಿ 30 ಬಸ್‌ ಗಳನ್ನು ರಾಜ್ಯದೊಳಗೆ ಸಂಚರಿಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಉಳಿದ 10 ಬಸ್‌ ಗಳು ಹೊರರಾಜ್ಯಗಳಿಗೆ ಸಂಚರಿಸಲಿವೆ. ಪ್ರಮುಖವಾಗಿ ಬೆಂಗಳೂರಿನಿಂದ ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ವಿಜಯಪುರ, ಹೊಸಪೇಟೆ ಮಾರ್ಗದಲ್ಲಿ ಈ ಬಸ್‌ಗಳು ಸಂಚರಿಸಲಿವೆ.

​ಇನ್ನು ಈ ಬಸ್‌ ಸೇವೆಯು ಅಕ್ಟೋಬರ್‌ 7 ರಿಂದಲೇ ಆರಂಭವಾಗುತ್ತಿದೆ. ಅಂದು ಸಂಜೆ ಬಳಿಕ ರಾಜ್ಯದೆಡೆಲ್ಲೆಡೆ ಈ ಬಸ್‌ ಗಳು ಪ್ರಯಾಣ ಆರಂಭಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಇನ್ನು ಕೆಎಸ್‌ ಆರ್‌ಟಿಸಿಯಲ್ಲಿ ನಾನ್‌ ಎಸಿ ಸ್ಲೀಪರ್‌ ಬಸ್‌ ಗಳು ಆರಂಭವಾಗಿ ಸಾಕಷ್ಟು ವರ್ಷಗಳಾಗಿವೆ. ಆದರೆ, ಆ ಬಸ್‌ ಗಳಿಗೆ ಯಾವುದೇ ಹೆಸರಿಟ್ಟು ಬ್ರ್ಯಾಂಡಿಂಗ್‌ ಮಾಡಿರಲಿಲ್ಲ. ಸದ್ಯ ಪಲ್ಲಕ್ಕಿ ಉತ್ಸವ ಎಂಬ ಬ್ಯಾಂಡ್‌ ನೇಮ್‌ ಇಡಲಾಗಿದೆ. ಈ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

Key words: 40 new buses – ‘Pallakki Utsav’ –brand- join – KSRTC -tomorrow.