ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ 34000, ಬಿಬಿಎಂಪಿ ವ್ಯಾಪ್ತಿಯಲ್ಲಿ 6000

ಬೆಂಗಳೂರು, ನವೆಂಬರ್ 4, 2021 (www.justkannada.in): ಬೆಂಗಳೂರು, ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಆಗಿರಬಹುದು. ಆದರೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆಗೆ ಸಂಬಂಧಪಟ್ಟಂತೆ ಮನೆ ಮನೆಗೆ ತೆರಳಿ ನಡೆಸಿದಂತಹ ಒಂದು ಸಮೀಕ್ಷೆಯ ಪ್ರಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಾಲಾ ಶಿಕ್ಷಣದಿಂದ ವಂಚಿತರಾಗಿರುವಂತಹ ಅತೀ ಹೆಚ್ಚಿನ ಸಂಖ್ಯೆಯ ಮಕ್ಕಳಿರುವ ಆಘಾತಕಾರಿ ಸುದ್ದಿ ಬಹಿರಂಗಗೊಂಡಿದೆ.

ಈ ಹಿಂದೆ ಸರ್ವ ಶಿಕ್ಷಾ ಅಭಿಯಾನ ಎಂದು ಕರೆಯಲ್ಪಡುತ್ತಿದ್ದಂತಹ ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ)ಯ ಒಂದು ವರದಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು ೩೪,೪೧೧ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದರಲ್ಲಿ ಎಂದಿಗೂ ಶಾಲೆಗೆ ನೋಂದಣಿಯೇ ಆಗಿಲ್ಲದಿರುವಂತಹ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಇಬ್ಬರೂ ಸೇರಿದ್ದಾರೆ. ಈ ಪೈಕಿ ೬,೬೦೮ ಮಕ್ಕಳು ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿದ್ದಾರೆ.

ಎಸ್‌ಎಸ್‌ಕೆ ವರದಿಯ ಪ್ರಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದಿರಲು ಮುಖ್ಯ ಕಾರಣಗಳೇನಂದರೆ: ಆರೋಗ್ಯ ಸಮಸ್ಯೆಗಳು, ಹಣಕಾಸಿನ ಬಿಕ್ಕಟ್ಟು ಹಾಗೂ ಕೌಟುಂಬಿಕ ಬಿಕ್ಕಟ್ಟು. ಈ ಸಮೀಕ್ಷೆಯ ವಿವರಗಳನ್ನು ಜಿಲ್ಲಾ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳಿಗೆ ಒದಗಿಸಲಾಗಿದೆ.

ಈ ಸಂಬಂಧ ಮಾತನಾಡಿದ ಎಸ್‌ಎಸ್‌ಕೆನ ಓರ್ವ ಅಧಿಕಾರಿ ಹೇಳಿದಂತೆ, “ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ವಿವರಗಳನ್ನು ಒದಗಿಸಿ, ಅದನ್ನು ತಾಲ್ಲೂಕು ಹಾಗೂ ಬ್ಲಾಕ್-ಮಟ್ಟದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಲಾಗಿದೆ. ಆ ಅಧಿಕಾರಿಗಳು ಮಕ್ಕಳು ಏಕೆ ಶಾಲೆಗಳಿಂದ ಹೊರಗುಳಿದಿದ್ದಾರೆ ಎಂದು ತಿಳಿದುಕೊಳ್ಳಲು ಮನೆ ಮನೆಗೆ ತೆರಳಿ ಮಕ್ಕಳ ಪೋಷಕರು/ ಪಾಲಕರನ್ನು ಭೇಟಿ ಮಾಡಿ ಕಾರಣ ತಿಳಿದುಕೊಂಡು, ವಿವರವಾದ ವರದಿಯನ್ನು ರಾಜ್ಯ ಯೋಜನಾ ನಿರ್ದೇಶಕರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ,” ಎಂದು ತಿಳಿಸಿದರು.

ಬಿಬಿಎಂಪಿ ಮಿತಿಯಲ್ಲಿ ೧೪-೧೬ ವಯೋಮಾನದ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಗೆ ಹೋಗುತ್ತಿಲ್ಲ (೪,೪೬೫), ೬-೧೪ ವಯಸ್ಸಿನ ಒಟ್ಟು ೨,೧೪೩ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ.

ಬೀದರ್ ಜಿಲ್ಲೆ ೨,೬೦೯ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಉಡುಪಿ ಜಿಲ್ಲೆ ಕನಿಷ್ಠ ಅಂದರೆ ೧೭೨ ಸಂಖ್ಯೆಯೊಂದಿಗೆ ಪಟ್ಟಿಯ ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಂತಹ ಅಧಿಕಾರಿಗಳ ಪ್ರಕಾರ, ೧೪ ರಿಂದ ೧೬ ವರ್ಷ ವಯಸ್ಸಿನ ಮಕ್ಕಳು ಅವರವರ ಕುಟುಂಬಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೋವಿಡ್-೧೯ ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವ ತೀವ್ರ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಶಾಲೆಯಿಂದ ಹೊರಗುಳಿಯಬೇಕಾಗಿ ಬಂದಿದೆ. “ಅನೇಕ ಪ್ರಕರಣಗಳಲ್ಲಿ ಹೆಚ್ಚಿನ ವಯಸ್ಸಿನ ಮಕ್ಕಳು ಸಾಂಕ್ರಾಮಿಕದ ಸಮಯದಲ್ಲಿ ಶಾಲೆಯಿಂದ ಹೊರಗುಳಿದು, ತಮ್ಮ ಕುಟಂಬಗಳಿಗೆ ಬೆಂಬಲ ನೀಡಲು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ,” ಎಂದು ವಿವರಿಸಿದರು.

ಒಟ್ಟು ೩೧ ಜಿಲ್ಲೆಗಳಲ್ಲಿ ಶಾಲೆಗೆ ದಾಖಲಾಗಿದ್ದಂತಹ ೨೧,೩೦೦ ಮಕ್ಕಳು ವಿವಿಧ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿದಿದ್ದಾರೆ.

ಇತ್ತೀಚೆಗೆ, ಕರ್ನಾಟಕದ ಮಾನ್ಯ ಉಚ್ಛ ನ್ಯಾಯಾಲಯ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಾಲೆಯಿಂದ ಹೊರಗುಳಿದಿರುವುದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವಂತೆ ಸೂಚಿಸಿತ್ತು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words:  34000-children- out of school – Karnataka