ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಮೀಸಲು: ಮಹಿಳಾ ಮತ್ತು ಮಕ್ಕಳ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಭರ್ಜರಿ ಕೊಡುಗೆ.

ಬೆಂಗಳೂರು,ಫೆಬ್ರವರಿ,16,2024(www.justkannada.in):  ರಾಜ್ಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳಾ ಮತ್ತು ಮಕ್ಕಳ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಘೋಷಣೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ,  ಗೃಹಲಕ್ಷ್ಮೀ ಯೋಜನೆಗೆ 28 ,608 ಕೋಟಿ ರೂ. ಮೀಸಲು ಇಡಲಾಗುವುದು. 1.33 ಕೋಟಿ ಮಹಿಳೆಯರಿಗೆ ಯೋಜನೆಯಿಂದ ಲಾಭವಾಗಲಿದೆ. ಜನವರಿ 31ರವರೆಗೆ 1.27 ಕೋಟಿ ಮಹಿಳೆಯರ ನೋಂದಣಿಯಾಗಿದೆ, 11726 ಕೋಟಿ ನೇರವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. 2024-25ರಲ್ಲಿ 28,608 ಕೋಟಿ ಹಣ ರೂಪಾಯಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿದೆ. ಕುಟುಂಬ ದತ್ತಾಂಶದನ್ವಯ 1.33 ಕೋಟಿ APL, BPL, AAY ಪಡಿತರ ಚೀಟಿ ಹೊಂದಿರುವ ಯಜಮಾನಿ ಮಹಿಳೆಯರನ್ನು ಅರ್ಹ ಫಲಾನುಭವಿಗಳೆಂದು ಗುರುತಿಸಲಾಗಿದೆ. ಜನವರಿ ಅಂತ್ಯದವರೆಗೆ 1.17 ಕೋಟಿ ಮಹಿಳೆಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಈವರೆಗೆ 11,726 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಎಂದು ತಿಳಿಸಿದರು.

ಇನ್ನು ಅಂಗನವಾಡಿ ಕಾರ್ಯಕರ್ತರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ನೀಡಲಾಗುವುದು. 100 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು 10 ಕೋಟಿ ರೂ. ಗಳನ್ನು ಒದಗಿಸಲಾಗುವುದು  ಎಂದು ತಿಳಿಸಿದರು.

ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಂಗನವಾಡಿಗಳ ಅಭಿವೃದ್ದಿಗೆ 300 ಕೋಟಿ ರೂ. ಮೀಸಲು ಇಡಲಾಗುತ್ತದೆ. 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತದೆ ಎಂದರು.

ಹಾಗೆಯೇ ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆಗೆ 4 ಕೇಂದ್ರಗಳನ್ನು ಆರಂಭಿಸಲಾಗುವುದು. 4 ಅನುಪಾಲನಾ ಕೇಂದ್ರಗಳ ಸ್ಥಾಪನೆಗೆ 2 ಕೋಟಿ ರೂ. ಅನುದಾನ ಒದಗಿಸಲಾಗುವುದು. 1,500 ವಿಶೇಷ ಚೇತನರಿಗೆ ದ್ವಿಚಕ್ರ ವಾಹನಗಳ ವಿತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

Key words: 28,608 crores – Grilahakshmi Yojana-Reserves- budget -women and children- sector.