ಬಿರುಗಾಳಿ ಮಳೆಗೆ ಮರಗಳ ದುರ್ಮರಣ: ವಿದ್ಯುತ್ ತಂತಿ ತುಳಿದು ಮೃತಪಟ್ಟ ಪಾದಚಾರಿ

ಬೆಂಗಳೂರು:ಮೇ-27: ಶನಿವಾರ ಮತ್ತು ಭಾನುವಾರ ಆರ್ಭಟಿಸಿದ ಮುಂಗಾರು ಪೂರ್ವ ಮಳೆಗೆ ಬೆಂಗಳೂರು ತತ್ತರಿಸಿದೆ. ಶನಿವಾರ ಒಂದೇ ದಿನ 56 ಮರ ಬಿದ್ದರೆ ಭಾನುವಾರ 18 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 600 ಕ್ಕೂ ಅಧಿಕ ಕೊಂಬೆಗಳು ಬಿದ್ದಿವೆ. ಅದರ ಜತೆಗೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಗಾಳಿ ಒತ್ತಡ ಕಡಿಮೆ ಮತ್ತು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದ ಪರಿಣಾಮ ಶನಿವಾರ ರಾತ್ರಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಬಿಬಿಎಂಪಿ ಸಿಬ್ಬಂದಿ ರಾತ್ರಿಯಿಡೀ ಮರ ಮತ್ತು ಕೊಂಬೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಭಾನುವಾರ 44 ಮರ ಮತ್ತು 359 ಕೊಂಬೆಗಳನ್ನು ತೆರವುಗೊಳಿಸಲಾಗಿದೆ.

ವಿದ್ಯುತ್ ತಂತಿ ತುಳಿದು ಸಾವು: ಮಳೆಗೆ ಕಾಕ್ಸ್​ಟೌನ್​ನ ರಾಮಚಂದ್ರಪ್ಪ ಗಾರ್ಡನ್​ನಲ್ಲಿ ತೆಂಗಿನ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಅದು ನೆಲಕ್ಕೆ ಬಿದ್ದಿತ್ತು. ಅದನ್ನು ಅರಿಯದ ಸ್ಥಳೀಯ ನಿವಾಸಿ ಸತೀಶ್ (35) ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದಿದ್ದಾರೆ. ಅದರಿಂದ ಶಾಕ್ ಹೊಡೆದು ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಳೆಗೆ ನಗರದಲ್ಲಿ ನಾಲ್ಕನೆ ಸಾವು

ಈ ವರ್ಷದ ಮಳೆಗೆ ನಾಲ್ವರು ಸಾವನ್ನಪ್ಪಿದ್ದಾರೆ. ಏ.17ರಂದು ಹೆಬ್ಬಾಳದ ಲುಂಬಿನಿ ಗಾರ್ಡನ್ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಕಿರಣ್ ತಲೆ ಮೇಲೆ ಮರದ ಕೊಂಬೆ ಬಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದರು. ಅದಾದ ನಂತರ ಏ.30 ರಂದು ಗರುಡಾಚಾರ್ ಪಾಳ್ಯ ವಾರ್ಡ್ ನಲ್ಲಿನ ಗೋಶಾಲೆ ಗೋಡೆ ಕುಸಿದು ಪಾದಚಾರಿ ಶಿವಕೈಲಾಸ ರೆಡ್ಡಿ ಮೃತಪಟ್ಟಿದ್ದರು. ಜತೆಗೆ ಜಾಲಹಳ್ಳಿ ಕ್ರಾಸ್​ನಲ್ಲಿ ಕಾರು ಚಾಲಕ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿ ಸಾವೀಗೀಡಾಗಿದ್ದರು.

30ಕ್ಕೂ ಹೆಚ್ಚು ವಾಹನಗಳು ಜಖಂ

ಶನಿವಾರ ರಾತ್ರಿ 40 ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿ ಗಾಳಿ ಬೀಸಿದ ಪರಿಣಾಮ ಅತಿ ಹೆಚ್ಚು ಮರಗಳು ಬಿದ್ದಿವೆ. ಬಹುತೇಕ ಮರಗಳು ವಾಹನಗಳ ಮೇಲೆ ಬಿದ್ದಿದ್ದು, 30ಕ್ಕೂ ಹೆಚ್ಚಿನ ಕಾರು ಮತ್ತು ಬೈಕ್​ಗಳು ಜಖಂಗೊಂಡಿವೆ. ಅಲ್ಲದೆ, ಮರ ಬಿದ್ದಿರುವುದು, ರಸ್ತೆ ಮೇಲೆ ನೀರು ನಿಂತ ಕುರಿತು ಶನಿವಾರ ಒಂದೇ ದಿನ ಬಿಬಿಎಂಪಿಯ ಎಲ್ಲ 9 ಸಹಾಯವಾಣಿ ಕೇಂದ್ರಕ್ಕೆ 500ಕ್ಕೂ ಹೆಚ್ಚಿನ ದೂರುಗಳು ದಾಖಲಾಗಿವೆ. ಅದೇ ರೀತಿ ಬಹುತೇಕ ಮರ ಮತ್ತು ಕೊಂಬೆಗಳು ವಿದ್ಯುತ್ ತಂತಿ, ಕಂಬಗಳ ಮೇಲೆ ಬಿದ್ದಿವೆ.

5 ಲಕ್ಷ ರೂ. ಪರಿಹಾರ

ಮೃತ ಸತೀಶ್ ಮನೆಗೆ ಮೇಯರ್ ಗಂಗಾಂಬಿಕೆ ಮತ್ತು ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಕುಟುಂಬದ ವರಿಗೆ ಸಾಂತ್ವನ ಹೇಳಿದರು. ಜತೆಗೆ ಬಿಬಿಎಂಪಿಯಿಂದ ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಹೆಚ್ಚು ಮಳೆಯಾದ ಪ್ರದೇಶಗಳಿಗೆ ಭಾನುವಾರ ಮೇಯರ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಣಸವಾಡಿ, ಎಚ್​ಬಿಆರ್ ಬಡಾವಣೆ, ಕಲ್ಯಾಣನಗರ ಸೇರಿ ಇನ್ನಿತರ ಬಡಾವಣೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಹಾನಿಗಳನ್ನು ಸರಿಪಡಿಸುವಂತೆ ಮೇಯರ್ ಸೂಚಿಸಿದರು.

ಮುಂದುವರಿದ ಆರ್ಭಟ

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಆರ್ಭಟ ಭಾನುವಾವೂ ಮುಂದುವರಿದಿದ್ದು, ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗಿದೆ. ಅದರ ಪರಿಣಾಮ 18 ಮರ ಮತ್ತು ಕೊಂಬೆಗಳು ಬಿದ್ದಿವೆ. ಮೇಲ್ಮೈ ಸುಳಿ ಗಾಳಿಯ ಪರಿಣಾಮ ಶನಿವಾರವಷ್ಟೇ ಬೆಂಗಳೂರಿಗರನ್ನು ಹೈರಾಣಾಗಿಸಿದ್ದ ಮಳೆರಾಯ, ಭಾನು ವಾರವೂ ಭಾರಿ ಪ್ರಮಾಣದಲ್ಲಿ ಸುರಿದಿದ್ದಾನೆ. ರಾತ್ರಿವರೆಗೆ ಮಳೆಯ ಯಾವುದೇ ಮುನ್ಸೂ ಚನೆಯಿರಲಿಲ್ಲ. ಆದರೆ, ರಾತ್ರಿ 9 ಗಂಟೆಗೆ ಏಕಾಏಕಿ ಮಳೆ ಆರಂಭವಾಯಿತು. ಕೆ.ಆರ್.ಪುರ, ಮೆಜೆಸ್ಟಿಕ್, ಬನಶಂಕರಿ, ನಾಯಂಡಹಳ್ಳಿ, ಮಲ್ಲೇಶ್ವರ, ರಾಜಾ ಜಿನಗರ, ಕೋರಮಂಗಲ, ಮಡಿವಾಳ, ಯಶವಂತಪುರ, ಪೀಣ್ಯ ಸೇರಿ ಇನ್ನಿತರ ಕಡೆಗಳಲ್ಲಿ ಗಾಳಿಗೆ ವಾಹನ ಚಲಾಯಿ ಸುವುದೇ ಕಷ್ಟ ಎನ್ನುವಂತಾಗಿತ್ತು. ಅದೇ ಸಂದರ್ಭದಲ್ಲಿ ಮಳೆ ಆರಂಭವಾದದ್ದರಿಂದ ವಾಹನ ಸವಾರರು ಪರದಾಡು ವಂತಾ ಯಿತು.

ಕಾರು ಜಖಂ: ಶನಿವಾರದ ಮಳೆಗೆ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆ ಪೂರ್ಣಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹೈರಾಣಾಗಿದ್ದರು. ಅದರ ನಡುವೆಯೇ ಭಾನುವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಮಲ್ಲೇಶ್ವರದಲ್ಲಿ 5, ಜಯಮಹಲ್, ಹೊಯ್ಸಳನಗರ, ಮಾಗಡಿ ರಸ್ತೆ, ಗಾಯಿತ್ರಿ ನಗರ ಮುಖ್ಯರಸ್ತೆ, ಬಿಟಿಎಂ ಲೇಔಟ್​ನಲ್ಲಿ ತಲಾ 1 ಮರ ಹಾಗೂ ವಿವಿಧೆಡೆ ಕೊಂಬೆಗಳು ಬಿದ್ದಿವೆ. ಜಯಮಹಲ್ 5ನೇ ಮುಖ್ಯರಸ್ತೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದಿದೆ. ಕಾರು ಚಾಲಕ ಒಳಗೆ ಇದ್ದರಾದರೂ, ಅದೃಷ್ಟವಷಾತ್ ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ಬಿದ್ದ ಮರಗಳನ್ನು ಬಿಬಿಎಂಪಿ ಸಿಬ್ಬಂದಿಗಳು ರಾತ್ರಿಯೇ ತೆರವುಗೊಳಿಸಿದರು.

ಸಂಚಾರ ದಟ್ಟಣೆ: ಮೊದಲಿಗೆ ಮಹದೇವಪುರ ವಲಯದಲ್ಲಿ ಆರಂಭವಾದ ಮಳೆ ಕ್ರಮೇಣ ನಗರದೆಲ್ಲೆಡೆ ವ್ಯಾಪಿಸಿತು. ಅದರ ಪರಿಣಾಮ ಕೆ.ಆರ್.ಪುರ, ಮೆಜೆಸ್ಟಿಕ್, ಬನಶಂಕರಿ, ನಾಯಂಡಹಳ್ಳಿ, ಮಲ್ಲೇಶ್ವರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಯಶವಂತಪುರ, ಪೀಣ್ಯ ಸೇರಿ ಇನ್ನಿತರ ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವಂತಾಗಿತ್ತು.

ಎಲ್ಲೆಲ್ಲಿ ಎಷ್ಟು ಮಳೆ?

ನಗರದ ಕೇಂದ್ರ ಭಾಗದಲ್ಲಿ ಹೆಚ್ಚಾಗಿ ಮಳೆಯಾಗಿದೆ. ಸಂಪಂಗಿ ರಾಮನಗರದಲ್ಲಿ 9.7 ಸೆಂ.ಮೀ., ಎಚ್​ಬಿಆರ್ ಲೇಔಟ್​ನಲ್ಲಿ 8 ಸೆಂ.ಮೀ., ಚಿಕ್ಕಜಾಲ 7.8, ಬಾಣಸವಾಡಿ 7.4, ಕೆ.ಆರ್.ಪುರ 6.4, ಹೂಡಿ 5.8 ಸೆಂ.ಮೀ. ಮಳೆಯಾಗಿದೆ.

ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಮೂವರ ಸಾವು

ಬೆಂಗಳೂರು/ಹಾವೇರಿ: ರಾಜ್ಯದಲ್ಲಿ ವರುಣ ಮತ್ತೆ ಆರ್ಭಟಿಸಿದ್ದು, ಮಳೆ ಅವಾಂತರಕ್ಕೆ ನಾಲ್ವರು ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಗಂಗಾಪುರದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡ್ರ (48), ದಾವಣಗೆರೆ ಜಿಲ್ಲೆಯ ಅರೆಹಳ್ಳಿಯಲ್ಲಿ ಹಸು ಮೇಯಿಸುತ್ತಿದ್ದ ವಿರೂಪಾಕ್ಷಪ್ಪ (45) ಭಾನುವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿತ್ರದುರ್ಗದ ಹಿರಿಯೂರು ಆದಿವಾಲ ಗೊಲ್ಲರಹಟ್ಟಿಯಲ್ಲಿ ಶನಿವಾರ ಸಿಡಿಲು ಬಡಿದು ಆನಂದ್ (38) ಎಂಬುವರು ಮೃತಪಟ್ಟಿದ್ದಾರೆ.

ಇನ್ನೂ ಎರಡು ದಿನ ಮಳೆ ಮುನ್ಸೂಚನೆ

ಮೇಲ್ಮೈ ಸುಳಿಗಾಳಿಯ ಪರಿಣಾಮ ದಕ್ಷಿಣ ಒಳನಾಡು, ಕರಾವಳಿಯ ಹಲವೆಡೆ ಇನ್ನೂ ಎರಡು ದಿನ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಬಳ್ಳಾರಿ, ಕೊಪ್ಪಳ, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಗಳ ಹಲವೆಡೆಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ಮಾಹಿತಿ ತಿಳಿಸಿದ್ದಾರೆ.
ಕೃಪೆ:ವಿಜಯವಾಣಿ

ಬಿರುಗಾಳಿ ಮಳೆಗೆ ಮರಗಳ ದುರ್ಮರಣ: ವಿದ್ಯುತ್ ತಂತಿ ತುಳಿದು ಮೃತಪಟ್ಟ ಪಾದಚಾರಿ
rain-bengaluru-rain-heavy-rain-rain-water-flood-trees-uproot