ಕಾಡಾನೆ ದಾಳಿಯಿಂದ ಫಸಲಿಗೆ ಬಂದಿದ್ದ ಬಾಳೆ ನಾಶ: ರೈತನಿಗೆ 3 ಲಕ್ಷ ರೂ. ನಷ್ಟ.

ಕನಕಪುರ,ಜುಲೈ29,2021(www.justkannada.in): ಕಾಡಾನೆ ದಾಳಿಯಿಂದ ಫಸಲಿಗೆ ಬಂದಿದ್ದ  ಬಾಳೆ ನಾಶವಾಗಿದ್ದು ಇದರಿಂದ ರೈತನಿಗೆ 3 ಲಕ್ಷ ರೂ. ನಷ್ಟವಾಗಿರುವ ಘಟನೆ ಕನಕಪುರ ತಾಲ್ಲೂಕಿನಲ್ಲಿ ನಡೆದಿದೆ.jk

ಕನಕಪುರ ತಾಲೂಕಿನ ಸೋಮೆದ್ಯಾಪನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಬಿ.ಕೆ.ಮುತ್ತುರಾಜ್ ರವರ ಗದ್ದೆಗೆ ನುಗ್ಗಿದ ಐದಾರು ಆನೆಗಳು, 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 500 ಗಿಡಗಳನ್ನು ನಾಶ ಮಾಡಿ ಹೋಗಿವೆ.  ಇನ್ನೇನು ಒಂದೆರಡು ತಿಂಗಳಲ್ಲಿ ಕಟಾವಿಗೆ ಬರುತ್ತಿದ್ದ ಉತ್ತಮ ಫಲಭರಿತ ಬೆಳೆಯನ್ನು ನಾಶ ಮಾಡಿದ ಆನೆಗಳು ಮುತ್ತುರಾಜುವಿನ ಶ್ರಮದ ಕನಸನ್ನು ನಾಶಗೊಳಿಸಿವೆ. ಎಲ್ಲಾ ಗಿಡಗಳು ಏಲಕ್ಕಿ ಬಾಳೆ ಫಸಲಾಗಿದ್ದು  ಕನಿಷ್ಟವೆಂದರೂ 6 ರಿಂದ 7ಲಕ್ಷ ರೂಪಾಯಿಗಳು ಲಾಭ ಬರುತ್ತಿತ್ತು.  ಈಗ ಅಂದಾಜು 3ಲಕ್ಷ ರೂಪಾಯಿಗಳು ನಷ್ಟವಾಗಿದೆ.

ಒಂದು ಗಿಡಕ್ಕೆ 24 ರೂನಂತೆ ಕೊಟ್ಟು ತಂದು ,ಗೊಬ್ಬರ ಗೋಡು ಹಾಕಿ, ಕೆಲಸಗಾರರನ್ನಿಟ್ಟುಕೊಂಡು, ಒಂಬತ್ತು ತಿಂಗಳು ಹಗಲು ಇರುಳು ಕಷ್ಟಪಟ್ಟು ಅಪಾರ ಕನಸುಗಳೊಂದಿಗೆ ಶ್ರಮವಹಿಸಿ ಬಾಳೆ ಬೆಳೆಸಿದ್ದ ಮುತ್ತುರಾಜ್ ಇದೀಗ ಬೆಳೆ ನಾಶದಿಂದ ಕಂಗಾಲಾಗಿದ್ದಾರೆ. ಸರ್ಕಾರ ಬೆಳೆ ನಷ್ಟ ಪರಿಹಾರ ಕೊಡಬೇಕೆಂದು ಹಾಗೂ ರಾಮನಗರ ಜಿಲ್ಲಾ  ಜನಪ್ರತಿನಿಧಿಗಳಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು, ಶಾಸಕರಾದ ಡಿ.ಕೆ.ಶಿವಕುಮಾರ್,  ಸಂಸದ ಡಿ.ಕೆ.ಸುರೇಶ್  ಭೇಟಿ ಕೊಟ್ಟು ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

Key words: Destroy -banana – elephant-attack-farmer-3 lakh- Loss.