Saturday, August 8, 2026

BDA Apartments

Home Front Page ಸಚಿವ ಯತೀಂದ್ರ ಸಿದ್ದರಾಮಯ್ಯರಿಂದ ಬರ ವೀಕ್ಷಣೆ, ಕುಡಿಯುವ ನೀರಿನ ಪೂರೈಕೆ ಕುರಿತು ಪರಿಶೀಲನೆ

ಸಚಿವ ಯತೀಂದ್ರ ಸಿದ್ದರಾಮಯ್ಯರಿಂದ ಬರ ವೀಕ್ಷಣೆ, ಕುಡಿಯುವ ನೀರಿನ ಪೂರೈಕೆ ಕುರಿತು ಪರಿಶೀಲನೆ

ಮೈಸೂರು, ಆಗಸ್ಟ್,8,2026 (www.justkannada.in) : ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮನಹಳ್ಳಿ ಹುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಹಾಗೂ ಬರ ವೀಕ್ಷಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ  ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ರವರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಹಾರಂಗಿ ಹಾಗೂ ನುಗು ಜಲಾಶಯಗಳ ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳಿಗೆ ನೀರು ಹರಿಸಿ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಅಭಾವ ನೀಗಲು ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಸ್ತುತ ಹರಿಸಲಾಗುವ ನೀರನ್ನು ಬೆಳೆ/ಕೃಷಿಗಿಂತ ಹೆಚ್ಚಾಗಿ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆಯಾಗಿ ಬಳಸಲಾಗುತ್ತಿದೆ ಎಂದರು.

ಯಾವ್ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆಯೋ ಅಲ್ಲೆಲ್ಲಾ ತಕ್ಷಣ ಹೊಸದಾಗಿ ಕೊಳವೆ ಬಾವಿ ಕೊರೆಯಲು ಸೂಚಿಸಲಾಗಿದೆ. ಬೋರ್‌ ವೇಲ್ ವಿಫಲವಾದರೆ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಚಾಮನಹಳ್ಳಿ ಹುಂಡಿ ಗ್ರಾಮದಲ್ಲಿದ್ದ ನೀರಿನ ಸಮಸ್ಯೆಗೆ ಸ್ಪಂದಿಸಿ ಈಗಾಗಲೇ ಎರಡು ನೂತನ ಬೋರ್‌ವೇಲ್‌ ಗಳನ್ನು ಯಶಸ್ವಿಯಾಗಿ ಕೊರೆಯಲಾಗಿದೆ. ಈ ಬೋರ್‌ ವೇಲ್‌ ಗಳಿಂದ ಮೇಲ್ಮಟ್ಟದ ನೀರಿನ ತೊಟ್ಟಿಗೆ  ನೀರು ತುಂಬಿಸಿ, ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು.

ಸಾರ್ವಜನಿಕರಿಗೆ ಪೂರೈಸುವ ನೀರನ್ನು ಕಡ್ಡಾಯವಾಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಹಾಗೂ ನೀರಿನ ಟ್ಯಾಂಕ್‌ ಗಳನ್ನು ನಿರಂತರವಾಗಿ ಶುಚಿಗೊಳಿಸಿ, ಆರೋಗ್ಯಕರ ಕುಡಿಯುವ ನೀರನ್ನು ಪೂರೈಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ತಾರಕ ಲಿಫ್ಟ್ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ  ಹೊಸ ಪೈಪ್‌ಲೈನ್ ಕಾಮಗಾರಿ ಹಾಗೂ ವಿದ್ಯುತ್ ಸಂಪರ್ಕ ಬಾಕಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿ, ಯೋಜನೆಯನ್ನು ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ  ಎಚ್.ಡಿ. ಕೋಟೆ ತಾಲೂಕಿನ  ಎಂ. ಕನ್ನೇನಹಳ್ಳಿ ಗ್ರಾಮದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ  ಕುರಿತು  ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕೃಷಿ ಜಮೀನುಗಳನ್ನು ಪರಿಶೀಲಿಸಿದರು.

ತಾಲ್ಲೂಕು ಕೃಷಿ ಅಧಿಕಾರಿಗಳು ಮಾತನಾಡಿ ಏಪ್ರಿಲ್ ಮಾಹೆಯಲ್ಲಿ ಶೇ. 93 ರಷ್ಟು ಭಾರಿ ಮಳೆ ಕೊರತೆಯಾಗಿದ್ದು, ಹತ್ತಿ ಬಿತ್ತನೆ ಪ್ರಮಾಣ ಸಂಪೂರ್ಣ ಕ್ಷೀಣಿಸಿದೆ. ನಿರೀಕ್ಷಿತ ಬಿತ್ತನೆ ಗುರಿಯಲ್ಲಿ ಕೇವಲ ಅತ್ಯಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ಮುಸುಕಿನ ಜೋಳ ಹಾಗೂ ಶುಂಠಿ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣ ಒಣಗಿ ಬೆಳೆ ನಾಶವಾಗಿದೆ ಎಂದು ಸಚಿವರಿಗೆ ವರದಿ ನೀಡಿದರು.

ಮಳೆ ಅಭಾವದ ನಡುವೆಯೂ ಬೆಳೆದಿದ್ದ ಮುಸುಕಿನ ಜೋಳದ ಬೆಳೆಗೆ  ಫಂಗಲ್  ರೋಗಬಾಧೆ ಆವರಿಸಿದೆ. ಇದರಿಂದಾಗಿ ಬೆಳೆ ಕೈಸೇರುವ ಮುನ್ನವೇ ರೈತರು ದನ-ಕರುಗಳ ಮೇವಿಗಾಗಿ ಕಟಾವು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ರೈತರು ಕೇವಲ  ಸಾರಜನಕ ಮತ್ತು ರಂಜಕ ಗೊಬ್ಬರಗಳನ್ನು ಬಳಸುತ್ತಿದ್ದು ಪೊಟ್ಯಾಶ್ ಬಳಸದಿರುವುದು ಬೆಳೆಗೆ ರೋಗ ನಿರೋಧಕ ಶಕ್ತಿ  ಕಡಿಮೆಯಾಗಲು ಕಾರಣವಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರೈತರು ಎಕರೆಗೆ 40 ರಿಂದ 50 ಸಾವಿರ ರೂಪಾಯಿಗಳ ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಸಮಗ್ರ ಜಮೀನು ಸಮೀಕ್ಷೆ ಸ್ಯಾಟಲೈಟ್ ಹಾಗೂ ಭೌತಿಕ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಿದ್ದಾರೆ. ವರದಿ ಆಧಾರದ ಮೇಲೆ ಸರ್ಕಾರದಿಂದ ಸೂಕ್ತ ಪರಿಹಾರ ಘೋಷಿಸುವ ಭರವಸೆಯನ್ನು  ನೀಡಿದರು.

ಪರಿಶೀಲನೆ ನಡೆಸಿ ತಕ್ಷಣ ಸೂಕ್ತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ . ಗ್ರಾಮಸ್ಥರು ಹಾಗೂ ರೈತರು ವ್ಯಕ್ತಪಡಿಸಿದ ಎಲ್ಲಾ ಕಷ್ಟ-ನಷ್ಟಗಳ ವಿವರಗಳನ್ನು ಕ್ರೋಢೀಕರಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಮತ್ತು ವಸತಿ ವಿಹಾರಧಾಮಗಳ ಅಧ್ಯಕ್ಷರು ಹಾಗೂ ಹೆಚ್.ಡಿ.ಕೋಟೆ  ವಿಧಾನಸಭಾ ಕ್ಷೇತ್ರದ  ಶಾಸಕರಾದ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿಗಳಾದ ಜಿ. ಲಕ್ಷಿಂಕಾಂತರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್ ಯುಕೇಶ್ ಕುಮಾ‌ರ್, ಸೇರಿದಂತೆ ಕೃಷಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister, Yathindra Siddaramaiah, drought, drinking water, supply, Mysore