ನಟ ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತಸ: ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ನವೆಂಬರ್,1,2022(www.justkannada.in): ನಟ ಪುನೀತ್ ರಾಜ್ ಕುಮಾರ್ ಗೆ  ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತಸವನ್ನುಂಟು ಮಾಡಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಿಷ್ಟು…

ಇಂದು ಕರ್ನಾಟಕ ಏಕೀಕರಣವಾದ ದಿನದ ನೆನಪಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಆಚರಣೆ ಮಾಡುತ್ತಿದ್ದೇವೆ, ಇಂದು ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪುನೀತ್‌ ರಾಜ್‌ ಕುಮಾರ್‌ ಅವರು ನಟನೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದರು. ಕರ್ನಾಟಕದಲ್ಲಿ ಈ ರೀತಿಯ ಖ್ಯಾತಿ ಪಡೆದ ನಟ ಬೇರೊಬ್ಬರಿಲ್ಲ. ಪುನೀತ್‌ ಅವರು ನಿಧನರಾದಾಗ ಇಡೀ ನಾಡಿನ ಜನ ತಮ್ಮದೇ ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಂಡವರಂತೆ ದುಃಖವನ್ನು ವ್ಯಕ್ತಮಾಡಿದ್ದಾರೆ. ಇಂಥವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಚಾರ, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನನ್ನ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ.

ಭಾನುವಾರ ಕಲಬುರಗಿಯಲ್ಲಿ ಬಿಜೆಪಿ ಪಕ್ಷ ಹಿಂದುಳಿದ ಜಾತಿಗಳ ಸಮಾವೇಶವನ್ನು ಏರ್ಪಾಡು ಮಾಡಿದ್ದರು. ಈ ಸಮಾವೇಶಕ್ಕೆ ಸುಮಾರು 5 ಲಕ್ಷ ಜನ ಸೇರಿಸುತ್ತೇವೆ ಎಂದು ಬೊಬ್ಬೆ ಹಾಕಿದ್ದರು ಆದರೆ ಸೇರಿದ್ದು 40 ರಿಂದ 50 ಸಾವಿರ ಜನ ಮಾತ್ರ. ಈ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಯಡಿಯೂರಪ್ಪ ಅವರು ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅಲ್ಲಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರು ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಗುರಿಯಾಗಿರಿಸಿಕೊಂಡು ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.

ಈ ಸಭೆಗೆ ಬಸವರಾಜ ಬೊಮ್ಮಾಯಿ ಅವರು ಒಂದು ಆದೇಶದ ಪ್ರತಿ ಹಿಡಿದುಕೊಂಡು ಹೋಗಿ, ನಾನು ಬರಿಗೈಲಿ ಬಂದಿಲ್ಲ, ಕುರಿಗಾರರಿಗೆ ದೊಡ್ಡ ಕಾರ್ಯಕ್ರಮ ನೀಡಿದ್ದೇವೆ, ಆ ಕಾರ್ಯಕ್ರಮದ ಆದೇಶ ಇಲ್ಲಿದೆ ಎಂದು ಹೇಳಿದ್ದರು. ಆದರೆ ಕುರಿ ಮತ್ತು ಉಣ್ಣೆ ಮಹಾಮಂಡಲ ರಚನೆ ಮಾಡಿದ್ದು ಹಿಂದಿನ ನಮ್ಮ ಸರ್ಕಾರ. ಈ ಮಂಡಳಿಯ 20,000 ಅರ್ಹ ಜನರಿಗೆ 354 ಕೋಟಿ ರೂಪಾಯಿಯಲ್ಲಿ 20 ಕುರಿ ಮತ್ತು ಒಂದು ಟಗರನ್ನು ಒಳಗೊಂಡ ಒಂದು ಘಟಕದ ವೆಚ್ಚ 1,75,000 ಅನ್ನು ನೀಡುವ ಆದೇಶ ಮಾಡಿದ್ದೇನೆ, ಇಂಥಾ ಆದೇಶ ಸಿದ್ದರಾಮಯ್ಯ ಅವರು ಯಾವತ್ತೂ ಮಾಡಿರಲಿಲ್ಲ, ನಾನು ಇದು ಕುರುಬರಿಗೆ ಮಾಡಿರುವ ಉಪಕಾರ ಎಂದು ಆದೇಶದ ಪ್ರತಿಯನ್ನು ಬಸವರಾಜ ಬೊಮ್ಮಾಯಿ ಅವರು ಪ್ರದರ್ಶನ ಮಾಡಿದ್ದಾರೆ.

ಈ ಕಾರ್ಯಕ್ರಮದ ವಿವರ ಹೇಗಿದೆ ನೋಡಿ, ರೂ.1,75,000 ದಲ್ಲಿ 50% ಹಣವನ್ನು ಎನ್‌,ಸಿ,ಡಿ,ಸಿ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇನ್ನು 25% ಸರ್ಕಾರದ ಸಬ್ಸಿಡಿ ಮತ್ತು ಉಳಿದ 25% ಹಣವನ್ನು ಫಲಾನುಭವಿ ಹಾಕಬೇಕು. ಆದರೆ ಭಾಷಣದಲ್ಲಿ ಇದನ್ನು ಉಚಿತವಾಗಿ ಎಲ್ಲರಿಗೂ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟ ಆದೇಶವನ್ನು 29ರಂದು ಭಾಷಣ ಮಾಡಿದ ದಿನವೇ ಸಿದ್ಧಪಡಿಸಿಕೊಂಡು ಹೋಗಿರುವುದು, ಇದನ್ನು ಸಚಿವ ಸಂಪುಟ ಸಭೆಯ ಮುಂದೆ ಕೂಡು ಇಡದೆ, ತರಾತುರಿಯಲ್ಲಿ ಆದೇಶ ಮಾಡಿಕೊಂಡು ಹೋಗಿದ್ದಾರೆ.

ಇದಕ್ಕೆ 25% ಹಣವನ್ನು ಕುರಿಗಾರ ಹಾಕಬೇಕು, ಆದರೆ ಈ ಹಣವನ್ನು ಎಲ್ಲಿಂದ ತರಬೇಕು? ನನ್ನ ಪ್ರಕಾರ ಈ ಕಾರ್ಯಕ್ರಮ ಅನುಷ್ಠಾನವೇ ಆಗಲ್ಲ. ಈಗ ಗೊಲ್ಲರು ಸೇರಿದಂತೆ ಹಿಂದುಳಿದ ಜಾತಿಯ ಜನ ಕುರಿ ಸಾಕಾಣಿಕೆ ಮಾಡುತ್ತಾರೆ. ನಮ್ಮ ಕಾಲದಲ್ಲಿ ಪಶುಭಾಗ್ಯ ಯೋಜನೆ ಜಾರಿ ಮಾಡಿದ್ದೆವು. ಇದರಡಿ 1,20,000 ಹಣವನ್ನು ಎಮ್ಮೆ, ಹಸು, ಕುರಿ, ಮೇಕೆ ಸಾಕಾಣಿಕೆ ಮಾಡುವವರಿಗಾಗಿ ನೀಡಲಾಗುತ್ತಿತ್ತು. ಈಗ ಈ ಕಾರ್ಯಕ್ರಮ ಎಲ್ಲಿದೆ? ಪಶು ಸಂಗೋಪನಾ ಸಚಿವರಾಗಿದ್ದ ಎ. ಮಂಜು ಈಗ ಬಿಜೆಪಿಯಲ್ಲಿ ಇದ್ದಾರೆ, ಈಗ ಪಶುಭಾಗ್ಯ ಕಾರ್ಯಕ್ರಮವನ್ನು ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ನನ್ನ ಪ್ರಕಾರ ಈ ಯೋಜನೆ ಟೇಕ್‌ ಆಫ್‌ ಆಗುವ ಲಕ್ಷಣವೇ ಇಲ್ಲ. ಇದನ್ನು ಸುಮ್ಮನೆ ದೊಡ್ಡದಾಗಿ ಪ್ರಚಾರ ಮಾಡಲಾಗಿದೆ ಅಷ್ಟೆ.

ಸಿದ್ದರಾಮಯ್ಯ ಅವರ ಸರ್ಕಾರ ಕುರುಬರನ್ನು ಸಚಿವರೇ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ. ಹೆಚ್,ಎಂ ರೇವಣ್ಣ, ಹೆಚ್‌,ವೈ ಮೇಟಿ ಮಂತ್ರಿಯಾಗಿದ್ದದ್ದು ಯಾರ ಸರ್ಕಾರದಲ್ಲಿ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ ಮಂತ್ರಿಯಾಗಿರಲಿಲ್ವಾ? ಈ ತರ ಯಾಕೆ ಸುಳ್ಳು ಹೇಳಬೇಕಪ್ಪ? ಮರಾಠ ಜಾತಿಯ ಸಂತೋಷ್‌ ಲಾಡ್‌, ನೇಕಾರ ಜನಾಂಗದ ಉಮಾಶ್ರೀ, ಪ್ರಮೋದ್‌ ಮಧ್ವರಾಜ್‌, ವಿನಯ್‌ ಕುಮಾರ್‌ ಸೊರಕೆ, ಕಾಗೋಡು ತಿಮ್ಮಪ್ಪ, ಬಾಬುರಾವ್‌ ಚಿಂಚನಸೂರ್‌, ಪುಟ್ಟರಂಗಶೆಟ್ಟಿ ಇವರೆಲ್ಲ ಹಿಂದುಳಿದ ಜಾತಿಗಳಿಗೆ ಸೇರಿದವರಲ್ವಾ? ಮುಖ್ಯಮಂತ್ರಿಯಾಗಿದ್ದ ನಾನು ಕುರುಬ ಜಾತಿಯವನಲ್ವಾ? ಆದರೂ ಬಿಜೆಪಿಯವರು ಕುರುಬರಿಗೆ ಕಾಂಗ್ರೆಸ್‌ ಪಕ್ಷ ಏನು ಮಾಡಿಲ್ಲ ಎನ್ನುತ್ತಾರೆ. ಕರ್ನಾಟಕದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ. ಕುರುಬರ ಬಗ್ಗೆ ತುಂಬಾ ಪ್ರೀತಿ ಇದ್ದರೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಅಥವಾ ಇನ್ಯಾವುದಾರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಎಂದು ಸವಾಲು ಹಾಕಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಬೀದರ್‌, ಯಾದಗಿರಿ, ಕಲಬುರಗಿಯಲ್ಲಿರುವ ಗೊಂಡ ಸಮುದಾಯ ( ಕುರುಬ ಜಾತಿಯ ಜನ) ಹಾಗೂ ಕೊಡಗಿನ ಕುರುಬ ಸಮಾಜವನ್ನು ಎಸ್‌,ಟಿ ಗೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಮೋದಿ ಅವರು ಪ್ರಧಾನಿಯಾಗಿ 8 ವರ್ಷ ಆಗಿದೆ, ಯಾಕಿನ್ನು ಅವರನ್ನು ಎಸ್‌,ಟಿ ಪಟ್ಟಿಗೆ ಸೇರಿಸಿಲ್ಲ. ಬಸವರಾಜ ಬೊಮ್ಮಾಯಿ ಅವರೇ ನಿಮಗೆ ಸಾಮಾಜಿಕ ನ್ಯಾಯದ ಬಗ್ಗೆ ಅಷ್ಟೊಂದು ಬದ್ಧತೆ ಇದ್ದರೆ ಈ ಕೂಡಲೆ ಈ ಸಮಾಜಗಳನ್ನು ಎಸ್‌,ಟಿ ಗೆ ಸೇರಿಸಿ. ಬೆಸ್ತ ಜಾತಿಯವರನ್ನು, ಕಾಡುಗೊಲ್ಲರನ್ನು ಎಸ್‌,ಟಿ ಗೆ ಸೇರಿಸುವಂತೆ ನಮ್ಮ ಸರ್ಕಾರ ಶಿಫಾರಸು ಮಾಡಿದೆ ಅದನ್ನು ಮಾಡಿಸಿ. ಇವುಗಳನ್ನು ಮಾಡುವುದು ಬಿಟ್ಟು ಸಾಮಾಜಿಕ ನ್ಯಾಯದ ಬಗ್ಗೆ ಪುಂಕಾನುಪುಂಕವಾಗಿ ಭಾಷಣ ಮಾಡಿದ್ರೆ ಸಾಕಾ? ಎಂದು ಚಾಟಿ ಬೀಸಿದರು.

ಬಿಜೆಪಿ ಪಕ್ಷ ಯಾವುದಾದರೊಂದು ಕಾರ್ಯಕ್ರಮ ಜಾರಿ ಮಾಡಿ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ನೀಡಿರುವುದನ್ನು ತೋರಿಸಿ ನೋಡೋಣ. ಮಂಡಲ್‌ ಕಮಿಷನ್‌ ವರದಿ ಜಾರಿ ಮಾಡಿದಾಗ ವಿರೋಧ ಮಾಡಿದವರು ಯಾರು? ಬಿಜೆಪಿ ನಾಯಕ ಅಡ್ವಾಣಿ ಅವರು ರಥಯಾತ್ರೆ ಆರಂಭ ಮಾಡಿ, ಉತ್ತರ ಭಾರತದಲ್ಲಿ ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದರು. ಉನ್ನತ ಶಿಕ್ಷಣದಲ್ಲಿ ಮೊದಲು ಮೀಸಲಾತಿ ಇರಲಿಲ್ಲ, ಅರ್ಜುನ್‌ ಸಿಂಗ್‌ ಅವರು ಮನವಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ ಉನ್ನತ ಶಿಕ್ಷಣದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ್ದರು. ಅದನ್ನು ರಾಜ್ಯದಲ್ಲಿ ಇದೇ ಅನಂತಕುಮಾರ್‌, ಯಡಿಯೂರಪ್ಪ, ಈಶ್ವರಪ್ಪ ಅವರು ವಿರೋಧ ಮಾಡಿದ್ರು.

ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದವರು ರಾಜೀವ್‌ ಗಾಂಧಿ ಅವರು. ಇದನ್ನು ಜಾರಿ ಮಾಡಿದ್ದು ಪಿ.ವಿ ನರಸಿಂಹರಾವ್‌ ಅವರ ಸರ್ಕಾರ. ಕರ್ನಾಟಕದಲ್ಲಿ 1994-95ರಲ್ಲಿ ಇದು ಜಾರಿಗೆ ಬಂತು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ 33% ಹಾಗೂ ಮಹಿಳೆಯರಿಗೆ 50% ಮೀಸಲಾತಿ ಸಿಕ್ಕಿತು. ಇದನ್ನು ವಿರೋಧ ಮಾಡಿದ್ದ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್. ಆಗ ಅವರು ಬಿಜೆಪಿಯ ಉಪಾಧ್ಯಕ್ಷ ಕೂಡ ಆಗಿದ್ದರು. ಹಿಂದುಳಿದ ಜಾತಿ, ಮಹಿಳೆಯರಿಗೆ, ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದನ್ನು ಅವರು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಿದರು. ಆಗ ಈಶ್ವರಪ್ಪ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅನಂತಕುಮಾರ್‌, ನಳಿನ್‌ ಕುಮಾರ್‌ ಕಟೀಲ್‌ ಅವರಾಗಲೀ ರಾಮಾ ಜೋಯಿಸ್‌ ಅವರನ್ನು ತಡೆದ್ರಾ? ಪಕ್ಷದ ಗಮನಕ್ಕೆ ತರದೆ ಈ ರೀತಿ ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನೆ ಮಾಡಲು ಸಾಧ್ಯವೇ? ಇದು ಪಕ್ಷದ ನಿರ್ಧಾರವೇ ಆಗಿತ್ತು. ಅದೃಷ್ಟವಶಾತ್‌ ಮೀಸಲಾತಿ ನೀಡಿದ್ದು ಸಂವಿಧಾನ ರೀತಿ ಇದ್ದುದ್ದರಿಂದ ಸುಪ್ರೀಂ ಕೋರ್ಟ್‌ ನಲ್ಲಿ ಮನವಿ ತಿರಸ್ಕಾರಗೊಂಡು, ಇಂದು ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಆಗ ಬಿಜೆಪಿಲಿ ಇದ್ರೋ ಇಲ್ಲವಾ ಗೊತ್ತಿಲ್ಲ.

1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಜನ ನ್ಯಾಯಮೂರ್ತಿಗಳ ಪೀಠ ತನ್ನ ತೀರ್ಪಿನಲ್ಲಿ ಮೀಸಲಾತಿ ಪ್ರಮಾಣ 50% ಮಿತಿಯನ್ನು ಮೀರುವಂತಿಲ್ಲ ಎಂದು ಹೇಳಿದ್ದರು. ಆಗಲೂ ಬಸವರಾಜ ಬೊಮ್ಮಾಯಿ ಜನತಾದಳದಲ್ಲಿ ಇದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ ಈ ವರೆಗೆ ಬಿಜೆಪಿಯವರು ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡಿರುವ ಒಂದು ನಿದರ್ಶನ ತೋರಿಸಲಿ ನೋಡೋಣ. ನರೇಂದ್ರ ಮೋದಿ ಅವರು ಸಾಮಾನ್ಯ ವರ್ಗದಲ್ಲಿರುವ ಆರ್ಥಿಕವಾಗಿ ದುರ್ಬಲ ಜನರಿಗೆ ಸ್ವಯಂ ಪ್ರೇರಿತವಾಗಿ 10% ಮೀಸಲಾತಿ ನೀಡಿದ್ರು. ಈ ಬಗ್ಗೆ ಯಾರೂ ಕೂಡ ಅವರನ್ನು ಒತ್ತಾಯ ಮಾಡಿರಲಿಲ್ಲ. ಇದು ಸಂವಿಧಾನದ 15 ಮತ್ತು 16ನೇ ಆರ್ಟಿಕಲ್‌ ಗೆ ವಿರುದ್ಧವಾಗಿದೆ. ಈ ಆರ್ಟಿಕಲ್‌ ಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮೀಸಲಾತಿ ನೀಡಬೇಕು ಎಂಬುದು ಇಲ್ಲ. ಕೇವಲ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕು ಎಂದಿದೆ. ಇಷ್ಟಾದರೂ ಮೇಲ್ವರ್ಗದ ಬಡವರಿಗೆ 10% ಮೀಸಲಾತಿ ನೀಡಿದ್ರು. ಇದರಿಂದ ಇಂದು ಮೀಸಲಾತಿ 60% ಆಗಿದೆ. ಇದು ಹಿಂದುಳಿದ ಜಾತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದ? ರಾಜ್ಯದಿಂದ ಹಿಂದುಳಿದ ಜಾತಿಗಳಿಗೆ ಶಿಫಾರಸು ಮಾಡಿರುವ ಮೀಸಲಾತಿಯನ್ನು ನೀಡಿಲ್ಲ. ಬಸವರಾಜ ಬೊಮ್ಮಾಯಿ ಅವರಿಗೆ ಮೀಸಲಾತಿ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಸಮಿತಿ ರಚನೆ ಮಾಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ. ಈ ಸಮಿತಿ ವರದಿ ನೀಡಿದ್ದು 2-7-2020ರಲ್ಲಿ. ವರದಿ ಬಂದ ತಕ್ಷಣ 24 ಗಂಟೆಗಳಲ್ಲಿಈ ವರದಿ ಜಾರಿ ಮಾಡ್ತೀವಿ ಎಂದು ರಾಮುಲ್‌ ಹೇಳಿದ್ರು, ಆದರೆ ಎರಡು ವರ್ಷ ಮೂರು ತಿಂಗಳು ಸರ್ಕಾರ ಮತ್ತು ರಾಮುಲು ಸುಮ್ಮನಿದ್ದುದ್ದು ಯಾಕೆ? ವಾಲ್ಮೀಕಿ ಸಮಾಜದ ಸ್ವಾಮೀಜಿ 257 ದಿನಗಳ ಕಾಲ ಧರಣಿ ಮಾಡಿದ್ರು, ಅವರು ಧರಣಿ ಆರಂಭ ಮಾಡಿದ ದಿನವೇ ವರದಿ ಜಾರಿ ಮಾಡಿದ್ರೆ ಸಮಸ್ಯೆ ಏನಾಗುತ್ತಿತ್ತು? ಅಂದು ಕೂಡ ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿ ಇದೇ ಆಗಿತ್ತು ಅಲ್ವಾ? ನಿಜವಾಗಿ ಈ ಸರ್ಕಾರಕ್ಕೆ ಬದ್ಧತೆ ಇದ್ದಿದ್ದರೆ ಅಂದೇ ಮಾಡುತ್ತಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಪಕ್ಷದ ಎಸ್‌, ಸಿ ಹಾಗೂ ಎಸ್‌,ಸಿ ಶಾಸಕರು ಪ್ರತೀ ಅಧಿವೇಶನದಲ್ಲಿ ವರದಿ ಜಾರಿಗೆ ಒತ್ತಾಯ ಮಾಡಿದ್ದಾರೆ, ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ಒಬ್ಬ ಬಿಜೆಪಿ ಶಾಸಕ ಬೆಂಬಲ ನೀಡಿದ್ನೆ? ಅಂದಿನಿಂದ ಇಂದಿನವರೆಗೆ ಕಾನೂನು ತೊಡಕಿದೆ ಎಂದು ಕಾಲ ವಿಳಂಬ ಮಾಡಿದ್ದು, ಬೇರೆ ಏನು ಮಾಲ್ಲ. ಈಗ ಯಾವ ಕಾನೂನಿನ ತೊಡಕು ನಿವಾರಣೆ ಮಾಡಿದ್ದೀರಿ ಹೇಳಿ?  ಎಂದು ಪ್ರಶ್ನಿಸಿದರು.

ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡುವಾಗ ಸುಗ್ರೀವಾಜ್ಞೆ ಬದಲಿಗೆ ಒಂದು ಕಾಯ್ದೆ ಮಾಡಿ, ಅದನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸಿ ಎಂದು ಹೇಳಿದ್ದೆ. ಅದನ್ನು ಬಿಟ್ಟು ಒಂದು ಸುಗ್ರೀವಾಜ್ಞೆ ಹೊರಡಿಸಿಕೊಂಡು ಕೂತಿದ್ದಾರೆ. ಒಂದು ವೇಳೆ ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ಏನಾಗುತ್ತೆ? ಇದಕ್ಕೆ ಕಾನೂನಿನ ರಕ್ಷಣೆ ಇದೆಯಾ? ಜಯಲಲಿತಾ ಅವರ ಸರ್ಕಾರ ಮೀಸಲಾತಿಯನ್ನು 69% ಗೆ ಹೆಚ್ಚಿಸಿ ಅದನ್ನು 9ನೇ ಶೆಡ್ಯೂಲ್‌ ಗೆ ಸೇರಿಸಿದ್ದಾರೆ. ಇದು ಹಾಗಾಗಿದ್ಯಾ? ನನ್ನ ಪ್ರಕಾರ ಈ ಸರ್ಕಾರ ಒಂದು ಕಾಯ್ದೆ ಮಾಡಿ ಅದನ್ನು ಮೋದಿ ಅವರ ಬಳಿ  ಕೂತು ಮಾತನಾಡಿ 9ನೇ ಶೆಡ್ಯೂಲ್‌ ಗೆ ಸೇರಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಇದು ಕ್ರಾಂತಿಕಾರಕ ನಿರ್ಧಾರ ಎಂದರೆ ಯಾವ ಉಪಯೋಗ ಇಲ್ಲ. ಇದನ್ನು ಮಾಡಿದ್ದು ಕೂಡ ವಾಲ್ಮೀಕಿ ಶ್ರೀಗಳು ಧರಣಿ ಮಾಡಿದ ಮೇಲೆ ಮತ್ತು ನಮ್ಮ ಒತ್ತಡ ಹೆಚ್ಚಾದ ಮೇಲೆ ಮಾಡಿರುವುದು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಾಸ್ಟೆಲ್‌ ಗಳಲ್ಲಿ ಓದುವ ಹಿಂದುಳಿದ ಜಾತಿಗಳ 1.61,000 ವಿದ್ಯಾರ್ಥಿಗಳಿಗೆ ಬಾತ್‌ ರೂಮ್‌ ಕಿಟ್ ಗಳನ್ನು ನೀಡುತ್ತಿದ್ದ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ. ಹೊಸದಾಗಿ ಹಾಸ್ಟೆಲ್‌ ಸೇರಿದ 88,000 ಜನ ವಿದ್ಯಾರ್ಥಿಗಳಿಗೆ ದಿಂಬು, ಹಾಸಿಗೆ, ಹೊದಿಕೆ ನೀಡದೆ ಆ ಮಕ್ಕಳನ್ನು ನೆಲದ ಮೇಲೆ ಮಲುಗುವಂತೆ ಮಾಡಿದ್ದು ಇದೇ ಬಿಜೆಪಿ ಸರ್ಕಾರ.

ಕಳೆದ ಎರಡು ವರ್ಷಗಳಿಂದ ಹಿಂದುಳಿದ ಜಾತಿ ಮತ್ತು ದಲಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ನಮ್ಮ ಸರ್ಕಾರ ಇದ್ದಾಗ 1,000 ದಿಂದ 3,500 ರ ವರೆಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೆವು. ಇದನ್ನು ನಿಲ್ಲಿಸಲಾಗಿದೆ.

ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ಇದ್ದಾಗ 2017- 18ರಲ್ಲಿ 374 ಕೋಟಿ ಅನುದಾನ ನೀಡಿದ್ದೆ. ಈಗಿನ ಸರ್ಕಾರ 100 ಕೋಟಿ ಹಣ ಕೊಡುವುದಾಗಿ ಹೇಳಿದೆ ಬಿಟ್ಟರೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮತ್ತೆ 200 ಕೋಟಿ ಗೆ ಹೆಚ್ಚಳ ಮಾಡಿದ್ದಾರೆ ಆದರೂ 174 ಕೋಟಿ ಅನುದಾನ ಕೊರತೆ ಆಯ್ತಲ್ವಾ? ಯಾಕೆ ಇದನ್ನು ಕಡಿಮೆ ಮಾಡಿದ್ದು ಬಸವರಾಜ ಬೊಮ್ಮಾಯಿ ಅವರೇ?

2008 ರಿಂದ 2013ರ ವರೆಗೆ ಹಿಂದುಳಿದ ಜಾತಿಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನ 3,714 ಕೋಟಿ. ನಮ್ಮ ಸರ್ಕಾರ 5 ವರ್ಷಗಳಲ್ಲಿ 10,094 ಕೋಟಿ ನೀಡಿತ್ತು. 2017-18ರ ನಮ್ಮ ಬಜೆಟ್ ನಲ್ಲಿ 2700 ಕೋಟಿ, ಈ ವರ್ಷ ಸರ್ಕಾರ ನೀಡಿರುವುದು 2,200 ಕೋಟಿ. ಬಜೆಟ್‌ ಗಾತ್ರ ಜಾಸ್ತಿಯಾದರೆ ಈ ವಲಯದ ಅನುದಾನ ಜಾಸ್ತಿಯಾಗಬೇಕಿತ್ತು ಅಲ್ವಾ? ನಮ್ಮ ಸರ್ಕಾರದ ಕೊನೆ ಬಜೆಟ್‌ ಗಾತ್ರ 2.02 ಲಕ್ಷ ಕೋಟಿ, ಈಗಿನ ಬಜೆಟ್‌ ಗಾತ್ರ 2.65 ಲಕ್ಷ ಕೋಟಿ. ಅನುದಾನ ನೀಡಿದ ಹಿಂದುಳಿದ ಜಾತಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ರೆ ಏನು ಉಪಯೋಗ?

1994-95 ರಲ್ಲಿ ಹಳ್ಳಿಗಾಡಿನ ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಹೇಳಿ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಮೊದಲ ಬಾರಿಗೆ ಆರಂಭ ಮಾಡಿದ್ದು ನಾನು. ಪ್ರತೀ ಹೊಬಳಿಗೊಂದು ಮೊರಾರ್ಜಿ ಶಾಲೆ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸುಮಾರು 745 ಹೋಬಳಿಗಳಲ್ಲಿ ಸುಮಾರು 800 ಮೊರಾರ್ಜಿ ಶಾಲೆಗಳನ್ನು ಆರಂಭ ಮಾಡಿದ್ದೆ. ಬಿಜೆಪಿ ಸರ್ಕಾರ ಏನು ಮಾಡಿದೆ?

ಬಿಜೆಪಿ ಸರ್ಕಾರ ಗಂಗಾ ಕಲ್ಯಾಣ ಯೋಜನೆಯಲ್ಲಿ ಎಷ್ಟು ಬೋರ್‌ ವೆಲ್‌ ತೋಡಿಸಿದೆ? ಅಧಿಕಾರಕ್ಕೆ ಬಂದು ಇಷ್ಟು ವರ್ಷವಾದ್ರೂ ಈ ಸರ್ಕಾರದ ಯೋಗ್ಯತೆಗೆ ಒಂದು ಬೋರ್‌ ವೆಲ್‌ ತೋಡಿಸಿಲ್ಲ. ನಮ್ಮ ಸರ್ಕಾರ ಹಿಂದುಳಿದ ಜಾತಿಗಳ ಜನರ 80,000 ಎಕರೆ ಪ್ರದೇಶಕ್ಕೆ ಬೋರ್‌ ವೆಲ್‌ ತೋಡಿಸಿಕೊಟ್ಟು ನೀರಾವರಿ ಸೌಲಭ್ಯ ನೀಡಿದ್ದೆವು.

ಹಿಂದುಳಿದ ಜಾತಿಗಳು ಪಡೆದಿದ್ದ ಮನೆ ಸಾಲ 514 ಕೋಟಿ 26 ಲಕ್ಷವನ್ನು ಸಂಪೂರ್ಣ ಮನ್ನಾ ಮಾಡಿದ್ದೆ. 27 ಲಕ್ಷ ರೈತರ 50,000 ವರೆಗಿನ ಸಾಲ ಮನ್ನಾ ಮಾಡಿದ್ದೆ, ನೇಕಾರರ ಪವರ್‌ ಲೂಮ್‌ ಗಳಿಗೆ 4 ರೂ. 75 ಪೈಸೆ ವಿಧಿಸಲಾಗುತ್ತಿದ್ದ ವಿದ್ಯುತ್‌ ಯುನಿಟ್‌ ದರವನ್ನು 1 ರೂಪಾಯಿ 20 ಪೈಸೆಗೆ ಇಳಿಸಿದ್ದು ನಾನು. ಅವರ 50,000 ವರೆಗಿನ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ಈ ಬಿಜೆಪಿ ಸರ್ಕಾರ ಏನು ಮಾಡಿದೆ?

ಹಿಂದುಳಿದ ಜಾತಿಗಳ ಸಮಾವೇಶ ಮಾಡಿ, ನನ್ನನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಬಿಜೆಪಿಗೆ ನನ್ನ ಕಂಡರೆ ಎಷ್ಟು ಭಯ ಎಂದರೆ ದೊಡ್ಡಬಳ್ಳಾಪುರ, ಕಲಬುರಗಿ ಎಲ್ಲಿ ಹೋದರೂ ನನ್ನ ಬಗ್ಗೆ ಮಾತು. ಇದೇ ಕಾರಣಕ್ಕೆ ನಾನು ಹೇಳಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ವೇದಿಕೆ ಮೇಲೆಯಾದರೂ ಸರಿ ತಮ್ಮ ಸರ್ಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಹೇಳಲಿ, ನಮ್ಮ ಸರ್ಕಾರ ಏನು ಮಾಡಿದೆ ಹೇಳುತ್ತೇನೆ, ಈ ಬಗ್ಗೆ ಬಹಿರಂಗ ಚರ್ಚೆ ಆಗಲಿ. ಹಾನಗಲ್‌ ಉಪಚುನಾವಣೆಯಲ್ಲೇ ಈ ಸವಾಲು ಹಾಕಿದ್ದೆ ಆದರೆ ಇವತ್ತಿನವರೆಗೆ ಅವರು ಬರಲು ತಯಾರಾಗಿಲ್ಲ. ರಾಜ್ಯ ಸರ್ಕಾರ ಜನಗಳಿಗೆ ಸುಳ್ಳು ಹೇಳುವುದನ್ನು ಬಿಡಬೇಕು, ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದ್ದೀರ, ಇದನ್ನು ನಾನು ಕೂಡ ಸ್ವಾಗತಿಸುತ್ತೇನೆ, ಇಂಥದನ್ನು ಮಾಡಿದರೆ ನಮ್ಮ ತಕರಾರು ಇಲ್ಲ.

ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗಾಗಿ ಅರಿವು ಎಂಬ ಯೋಜನೆ ಜಾರಿಗೆ ತಂದು 2% ಬಡ್ಡಿ ದರದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಾಲ ಸಿಗುವಂತೆ ಮಾಡಿದ್ದೆವು. ಈಗ ಈ ಕಾರ್ಯಕ್ರಮ ಇದೆಯಾ? ನಮ್ಮ ಸರ್ಕಾರ ಆಡಳಿತದಲ್ಲಿ ಇದ್ದಾಗ ವಿದೇಶ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುವ ಯೋಜನೆ ಇತ್ತು, ಈಗ ಯಾಕೆ ಈ ಕಾರ್ಯಕ್ರಮ ಇಲ್ಲ? ಇದನ್ನು ನಿಲ್ಲಿಸಿದವರು ಯಾರು?

ಅನುಗ್ರಹ ಯೋಜನೆಯನ್ನು 2013ರಲ್ಲಿ ರೂಪಿಸಿ, 2017ರಲ್ಲಿ ಅದನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದೆವು. ಕುರಿ ಅಥವಾ ಮೇಕೆ ಸತ್ತರೆ 5,000, ಎಮ್ಮೆ ಅಥವಾ ಹಸು ಸತ್ತರೆ 10,000 ಪರಿಹಾರ ನೀಡಲಾಗುತ್ತಿತ್ತು. ಈಗ ಈ ಕಾರ್ಯಕ್ರಮ ಇದೆಯಾ?

ವಿದ್ಯಾಸಿರಿ ಯೋಜನೆ ಅಡಿ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ತಿಂಗಳಿಗೆ 1,500 ರೂಪಾಯಿ ನೀಡಲಾಗುತ್ತಿತ್ತು, ಇದರಿಂದ 4.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಈಗ ಈ ಯೋಜನೆ ಇದೆಯಾ? ನಿಲ್ಲಿಸಿದ್ದು ಯಾಕೆ?

ಇದರ ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಜಗಜೀವನ್‌ ರಾಮ್‌ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ 11 ಅಭಿವೃದ್ಧಿ ನಿಗಮಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡಲಾಗಿದೆ. ಮಡಿವಾಳ ಅಭಿವೃದ್ಧಿ ನಿಗಮಕ್ಕೆ ನಯಾಪೈಸೆ ಅನುದಾನ ನೀಡಿಲ್ಲ. ಹಿಂದುಳಿದ ಜಾತಿಗಳಿಗೆ ಬಿಜೆಪಿ ಸರ್ಕಾರದ ಕಾಲದಲ್ಲಿ ಆದ ಅನ್ಯಾಯ ಬೇರೆ ಯಾವ ಸರ್ಕಾರದಿಂದಲೂ ಆಗಿಲ್ಲ.

ಹಿಂದುಳಿದ ಜಾತಿಗಳ ಕಲ್ಯಾಣಕ್ಕೆ ನೀಡಿದ ಬಜೆಟ್‌ ಅನುದಾನ ಮಾಹಿತಿ:

2017-18 ರಲ್ಲಿ 2,791 ಕೋಟಿ ಬಿಡುಗಡೆ ಆದ ಹಣ. ಇದರಲ್ಲಿ 2,701 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ.

2018-19ರಲ್ಲಿ 2,009 ಕೋಟಿ

2019-20ರಲ್ಲಿ 2,713 ಕೋಟಿ.

2020-21 ರಲ್ಲಿ 2000 ಕೋಟಿ

2021-22 ರಲ್ಲಿ 2,318 ಕೋಟಿ ಹಣ ಘೋಷಿಸಿ, 2,257 ಕೋಟಿ ಖರ್ಚು ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಹಿಂದುಳಿದ ಜಾತಿಗಳ ಮೇಲೆ ಇರುವ ಪ್ರೀತಿ ಇಷ್ಟೆನಾ?

2013-14ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ 1,200ಕೋಟಿ ಇತ್ತು.ನಂತರದ ವರ್ಷ 2,267 ಕೋಟಿ ಹೀಗೆ ಪ್ರತೀ ವರ್ಷ ಅನುದಾನ ಹೆಚ್ಚಳ ಮಾಡಿದ್ದೆವು.

ಈ ಸರ್ಕಾರದ ಅವಧಿಯಲ್ಲಿ ಬಜೆಟ್‌ ಗಾತ್ರ ಹೆಚ್ಚಾದರೂ ಹಿಂದುಳಿದ ಜಾತಿಗಳಿಗೆ ನೀಡುವ ಅನುದಾನ ಕಡಿಮೆಯಾಗುತ್ತಾ ಹೋಗಿದೆ. ಇದು ಸಾಮಾಜಿಕ ನ್ಯಾಯದ ಪರವಾಗಿರುವ ಸರ್ಕಾರವೇ? ದಲಿತ ಪರ ಸರ್ಕಾರವೇ? ಹಿಂದುಳಿದ ಜಾತಿಗಳ ಪರವಾಗಿರುವ ಸರ್ಕಾರವೇ? ಇದು ಹಿಂದುಳಿದ ಜಾತಿಗಳ ವಿರೋಧಿ ಸರ್ಕಾರ. ಸಾಮಾಜಿಕ ನ್ಯಾಯದ ವಿರೋಧಿ ಸರ್ಕಾರ.Dharani,constant,basis,Atrocity,Condemning,Former CM,Siddaramaiah

ನಮ್ಮ ಸರ್ಕಾರ ದೇವರಾಜ ಅರಸು ಆಶ್ರಯ ಯೋಜನೆ ಜಾರಿಗೆ ತಂದು 35,000 ಮನೆಗಳನ್ನು ಕಟ್ಟಿಕೊಟ್ಟಿದ್ದೆವು. ಬಿಜೆಪಿ ಸರ್ಕಾರ ಈ ಯೋಜನೆಯನ್ನು ನಿಲ್ಲಿಸಿದೆ. ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಹಿಂದುಳಿದ ಜಾತಿಗಳಿಗೆ ಮಕ್ಮಲ್‌ ಟೋಪಿ ಹಾಕುತ್ತಿದ್ದಾರೆ.

ಹಿಂದುಳಿದ ವರ್ಗಗಳಲ್ಲಿ 5 ರಿಂದ 10% ಜನ ಬಿಜೆಪಿ ಜೊತೆ ಇರಬಹುದು. ಇದು ಕೂಡ ಮೀಸಲಾತಿ ಜಾರಿಯಾದ ಮೇಲೆ ಆಗಿರುವುದು. 2004ರಲ್ಲಿ ಬಂಗಾರಪ್ಪನವರು ಬಿಜೆಪಿ ಸೇರದೆ ಇದ್ದಿದ್ದರೆ ಬಿಜೆಪಿ 40-50 ಸೀಟಷ್ಟೇ ಗೆಲ್ಲುವ ಸ್ಥಿತಿಯಲ್ಲಿ ಇರುತ್ತಿತ್ತು. ಬಂಗಾರಪ್ಪ ನವರು ಬಿಜೆಪಿ ಸೇರಿದಾಗ ಅವರ ಜೊತೆಗೆ ಹೋದ ಮತದಾರರು ಬಂಗಾರಪ್ಪನವರು ಬಿಜೆಪಿ ಬಿಟ್ಟರೂ ಮತದಾರರು ಬಿಜೆಪಿ ತೊರೆಯಲೇ ಇಲ್ಲ.

ಸರ್ಕಾರ ಈಗ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ಯಾರೂ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಒಂದು ವೇಳೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ ಸಮಸ್ಯೆ ಆಗುತ್ತದೆ. ಇದೇ ಕಾರಣಕ್ಕೆ ಈ ಮೀಸಲಾತಿ ಏರಿಕೆಗೆ ಸಂವಿಧಾನಾತ್ಮಕ ರಕ್ಷಣೆ ಸಿಗಬೇಕಾದರೆ 9ನೇ ಶೆಡ್ಯೂಲ್‌ ಗೆ ಸೇರಿಸಬೇಕು. ಇದಾಗಬೇಕಾದರೆ ಸಂಸತ್ತಿನಲ್ಲಿ ಇದು ಪಾಸಾಗಬೇಕು. ಇಲ್ಲದಿದ್ದರೆ ಇದು ಬರೀ ಚುನಾವಣಾ ಗಿಮಿಕ್‌ ಆಗುತ್ತದೆ.

ಬಿಜೆಪಿ ಸರ್ಕಾರ ನಮ್ಮ ಕಾಲದ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಿದೆ. ದುಡ್ಡಿದೆ ಎಂಬ ಕಾರಣಕ್ಕೆ ಹೊಸ ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿದೆ ಆದರೆ ಇವುಗಳಿಗೆ ಹಣ ಮಾತ್ರ ನೀಡುತ್ತಿಲ್ಲ.

ವ್ಯಕ್ತಿ ಬಲಿಷ್ಠನಾದಂತೆ ವೈರಿಗಳು ಹೆಚ್ಚಾಗುತ್ತಾರೆ. ವ್ಯಕ್ತಿ ದುರ್ಬಲನಾಗಿದ್ದರೆ ಆತನಿಗೆ ವೈರಿಗಳು ಇರುವುದಿಲ್ಲ. ಬಿಜೆಪಿ ನಾಯಕರು ಎಲ್ಲಾ ಕಡೆ ಸಮಾವೇಶ ಮಾಡಿದಾಗಲೂ ನನ್ನೊಬ್ಬನ ವಿರುದ್ಧ ಮಾತ್ರ ದಾಳಿ ಮಾಡುತ್ತಿದ್ದಾರೆ. ಇದರಿಂದ ನಾನು ಇನ್ನಷ್ಟು ಬಲಿಷ್ಠನಾಗುತ್ತಿದ್ದೇನೆ. ಜನ ನನ್ನನ್ನು ಹೆಚ್ಚು ಪ್ರೀತಿ ಮಾಡಲು ಆರಂಭ ಮಾಡಿದ್ದಾರೆ.

5 ವರ್ಷಗಳಲ್ಲಿ ನಮ್ಮ ಸರ್ಕಾರ ಸಮಾಜದ ಎಲ್ಲ ಜಾತಿಗಳ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರೂ ಅಪಪ್ರಚಾರದಿಂದಾಗಿ ಹೆಚ್ಚಿನ ಮತಗಳನ್ನು ಸೆಳೆಯಲು ಸಾಧ್ಯವಾಗಿಲ್ಲ. ಕೇವಲ ಅಭಿವೃದ್ಧಿ ವಿಚಾರಗಳು ಮಾತ್ರ ಚುನಾವಣೆಯಲ್ಲಿ ನಿರ್ಣಾಯಕವಾಗಲ್ಲ, ಬೇರೆ ಬೇರೆ ವಿಚಾರಗಳು ಕೂಡ ಪರಿಣಾಮ ಬೀರುತ್ತದೆ.

ಅನುದಾನದ ಕೊರತೆಯಿಂದ 40 ಇಂದಿರಾ ಕ್ಯಾಂಟೀನ್‌ ಗಳನ್ನು ನಿಲ್ಲಿಸಲಾಗಿದೆ. ಈ ಕ್ಯಾಂಟೀನ್‌ ಗಳು ಇರುವುದು ಬಡವರು, ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗಾಗಿ. ಅದನ್ನೇ ನಿಲ್ಲಿಸಿದ್ದಾರೆ ಎಂದರೆ ಈ ಸರ್ಕಾರ ಬಡವರ ಪರವಾಗಿ ಇಲ್ಲ ಎಂದು ಅರ್ಥ. ಬೆಂಗಳೂರಿನ 198 ವಾರ್ಡ್‌ ಗಳಲ್ಲಿ 198 ಇಂದಿರಾ ಕ್ಯಾಂಟೀನ್‌ ಗಳನ್ನು ಸ್ಥಾಪನೆ ಮಾಡಿದ್ದೆವು, ಇದು ಅವೈಜ್ಞಾನಿಕ ಹೇಗಾಗುತ್ತದೆ? ಕೆಲವು ಕ್ಯಾಂಟೀನ್‌ ಹತ್ತಿರ ಇದೆ ಎಂಬ ಕಾರಣಕ್ಕೆ ಅದನ್ನು ನಿಲ್ಲಿಸಬೇಕು ಅಂತ ಇದೆಯಾ?

ನಂದೀಶ್‌ ಅವರ ವರ್ಗಾವಣೆ ಮಾಡಲು ಹಣ ಪಡೆದಿರುವವರು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಅಥವಾ ಗೃಹಸಚಿವರು ಅಥವಾ ಸ್ಥಳೀಯ ಶಾಸಕ ಲಂಚ ಪಡೆದು ವರ್ಗಾವಣೆ ಮಾಡಿದ್ದಾರೆ. ಇವರಲ್ಲಿ ತಪ್ಪಿತಸ್ಥರು ರಾಜೀನಾಮೆ ನೀಡಬೇಕು.

ಪಿಎಸ್‌ ಐ ನೇಮಕಾತಿ ಹಗರಣದಿಂದ ಅನ್ಯಾಯಕ್ಕೀಡಾದ ವಿದ್ಯಾರ್ಥಿಗಳು ಗೃಹ ಸಚಿವರನ್ನು ಭೇಟಿ ಮಾಡಲು ಹೋದಾಗ ಅವರನ್ನು ತಳ್ಳಿ ಹೊರಹಾಕಲಾಗಿದೆ. ಈ ಬಿಜೆಪಿಯವರಿಗೆ ಮಾನವೀಯತೆ ಇಲ್ಲ. ಹಿಟ್ಲರ್‌ ವಂಶಸ್ತರಾದ ಬಿಜೆಪಿಯವರಲ್ಲಿ ಮಾನವೀಯತೆ ಇರುತ್ತಾ? ಸರ್ವಾಧಿಕಾರದಲ್ಲಿ ನಂಬಿಕೆ ಇರುವುದರಿಂದಲೇ ಇವರು ಹಿಟ್ಲರ್‌ ನನ್ನು ಹೊಗಳುತ್ತಾರೆ.

ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ಬಾರದೆ ಅವರ ಕಚೇರಿಯ ಸಿಬ್ಬಂದಿ ಪತ್ರಕರ್ತರಿಗೆ ಉಡುಗೊರೆ ರೂಪದಲ್ಲಿ ಲಕ್ಷ ಲಕ್ಷ ಹಣ ಕೊಡಲು ಸಾಧ್ಯವೇ?  ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌, ಅಂಥವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದು ಕಿಡಿಕಾರಿದರು.

Key words: Happy – Karnataka Ratna Award -actor –Punith- Former CM- Siddaramaiah.