ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಅಳವಡಿಸಿಕೊಳ್ಳುವುದು ಮುಖ್ಯ: ಪ್ರೊ. ಜಿ. ಹೇಮಂತ್ ಕುಮಾರ್.

ಮೈಸೂರು, ನವೆಂಬರ್ 25, 2021 (www.justkannada.in): “ಇಂದು ಸ್ಪರ್ಧಾತ್ಮಕ ಯುಗ. ಪ್ರತಿಯೊಬ್ಬರು, ಅದರಲ್ಲಿಯೂ ವಿಶೇಷವಾಗಿ ಯುವಜನರು ನಿರಂತರವಾಗಿ ಹಾಗೂ ವೇಗವಾಗಿ ಬದಲಾಗುತ್ತಿರುವ ಜೀವನದ ಬೇಡಿಕೆಗಳಿಗೆ ತಕ್ಕಂತೆ ಬದಲಾವಣೆ ಹೊಂದುವುದು ಅತ್ಯಗತ್ಯ. ಅಗತ್ಯಕ್ಕೆ ತಕ್ಕಂತಹ ವಿದ್ಯಾರ್ಹತೆಯನ್ನು ಗಳಿಸಿ, ಸೂಕ್ತ ಉದ್ಯೋಗವನ್ನು ಸಂಪಾದಿಸುವುದು ಬಹಳ ಮುಖ್ಯ,” ಎಂದು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.

ಪ್ರೊ. ಜಿ. ಹೇಮಂತ್ ಕುಮಾರ್ ಅವರು, ಹಿಂದುಳಿದ ವರ್ಗಗಳ ಕೋಶ (ಒಬಿಸಿ) ಹಾಗೂ ಆಂತರಿಕ ಗುಣಮಟ್ಟ ಆಶ್ವಾಸನಾ ಕೋಶ (ಐಕ್ಯೂಎಸಿ), ಜಂಟಿಯಾಗಿ ಮಾನಸಗಂಗೋತ್ರಿ ಆವರಣದಲ್ಲಿರುವ ಸೆನೇಟ್ ಭವನದಲ್ಲಿ ಆಯೋಜಿಸಿದ್ದ ‘ಯುವ ಸಶಕ್ತೀಕರಣ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಜೀವನದ ಯಾವುದೇ ಹಂತದಲ್ಲಾದರೂ ಎದುರಾಗುವ ವೈಫಲ್ಯಗಳು, ಅಥವಾ ಕೇವಲ ವೈಫಲ್ಯದ ಭಯವೇ ನಿಮ್ಮನ್ನು ಧೃತಿಗೆಡಿಸಬಹುದು ಹಾಗೂ ಖಿನ್ನತೆಯನ್ನುಂಟು ಮಾಡಬಹುದು. ತೀವ್ರ ಸ್ಪರ್ಧೆ ‘ಒತ್ತಡ’ಕ್ಕೆ ಕಾರಣವಾಗಬಹುದು ಹಾಗೂ ನೀವು ಯಶಸ್ಸನ್ನು ಗಳಿಸಬೇಕಾದರೆ, ಒತ್ತಡವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು,” ಎಂದರು.

ಮುಂದುವರೆದು, “ಒತ್ತಡವನ್ನು ನಿಭಾಯಿಸಲು ಹಲವು ಮಾರ್ಗಗಳಿವೆ. ಅದರಲ್ಲಿ ಸೂಕ್ತವಾದ ಮಾರ್ಗ ಅಥವಾ ವಿಧಾನವನ್ನು ಆಯ್ದುಕೊಂಡು, ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗದಿರುವಂತೆ ನಿರ್ವಹಿಸುವುದೇ ಒಂದು ಸವಾಲು. ಒತ್ತಡವನ್ನು ನಿರ್ವಹಿಸಲು ‘ಧ್ಯಾನ’ ಒಂದು ವಿಧಾನ. ಈ ಮೂಲಕ ನೀವು ನಿಮ್ಮ ಒತ್ತಡವನ್ನು ಕಡಿಮೆಗೊಳಿಸಿಕೊಂಡು ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು,” ಎಂದರು.

“ಉದ್ಯೋಗಕ್ಕೆ ಸೇರಿದ ನಂತರವೂ ಸಹ ಕೆಲಸದ ಸ್ಥಳದಲ್ಲಿ ಅನೇಕ ರೀತಿಯ ಒತ್ತಡಗಳು ಎದುರಾಗುತ್ತವೆ. ಆದ್ದರಿಂದ ಜೀವನ ಹಾಗೂ ಕೆಲಸ ಎರಡನ್ನೂ ನಿರ್ವಹಿಸುವುದು ಬಹಳ ಮುಖ್ಯ. ಒತ್ತಡ ವೈಫಲ್ಯದ ಅವಕಾಶಗಳನ್ನೂ ಹೆಚ್ಚಿಸುತ್ತದೆ. ಕೋವಿಡ್-೧೯ ಸೋಂಕಿನ ಪರಿಸ್ಥಿತಿಯ ನಂತರದಲ್ಲಂತೂ ಆರೋಗ್ಯಕ್ಕೆ ಸಂಬಂಧಿಸಿದ ಒತ್ತಡ, ಕೆಲಸದ ಒತ್ತಡ, ವೇತನ ನಷ್ಟದ ಒತ್ತ, ಪ್ರೋತ್ಸಾಹಕಗಳಲ್ಲಿ ಆಗಿರುವ ಕಡಿತ, ಸಾವು-ನೋವುಗಳು ಹೆಚ್ಚಾಗಿವೆ. ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಯುವಜನರು ಯಶಸ್ಸು, ವೈಫಲ್ಯಗಳನ್ನು ಸಮಾನವಾಗಿ ಸ್ವೀಕರಿಸಿ, ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಂಡು, ಧೈರ್ಯದಿಂದ ಎಲ್ಲವನ್ನೂ ಎದುರಿಸಿಕೊಂಡು ತಮ್ಮ ಗುರಿಗಳನ್ನು ತಲುಪಲು ಪ್ರಯತ್ನಿಸಬೇಕು,” ಎಂದು ಹಿತವಚನ ನುಡಿದರು.

Key words: mysore university-VC-Prof.G.Hemanth kumar- competitive –age- young people