ಮಂಡ್ಯ,ಡಿಸೆಂಬರ್,1,2025 (www.justkannada.in): ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ನಂದಿನಿ ಕೆ.ಆರ್. ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.
ಶಾಲೆಗೆ ಭೇಟಿ ನೀಡಿದ ಅವರು ಮಧ್ಯಾಹ್ನ ಬಿಸಿ ಊಟ ಯೋಜನೆಯಡಿ ಶಾಲೆಗೆ ಸರಬರಾಜಾಗಿರುವ ಆಹಾರ ಸಾಮಾಗ್ರಿಗಳ ಗುಣಮಟ್ಟ ಪರಿಶೀಲಿಸಿದರು ಹಾಗೂ ಶಾಲೆಯಲ್ಲಿ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟಿರುವ ವಿಧಾನಗಳ ಬಗ್ಗೆ ಪರಿಶೀಲನೆ ನಡೆಸಿದರು.
ಶಾಲೆಯಲ್ಲಿ 160 ವಿದ್ಯಾರ್ಥಿಗಳಿದ್ದು, ಸಾಕಷ್ಟು ಸಂಖ್ಯೆಯ ಶೌಚಾಲಯಗಳು ಹಾಗೂ ಕುಡಿಯುವ ನೀರು ಲಭ್ಯವಿರುವ ಬಗ್ಗೆ ಮಾಹಿತಿ ಪಡೆದರು. ನಂತರ ಶಾಲೆಯಲ್ಲಿರುವ ಇತರೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿದ ಅವರು, ಶಾಲಾ ಕೊಠಡಿಗಳಲ್ಲಿ ಬೆಳಕು ಕಡಿಮೆ ಇದ್ದು ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಶಾಲೆಯ ಮುಖ್ಯೋಪದ್ಯಾಯರಿಗೆ ಸೂಚಿಸಿದರು.
ಶೌಚಾಲಯ ದುರಸ್ತಿ ಮಾಡಲು ಗ್ರಾ.ಪಂ.ಗೆ ಸೂಚನೆ:
ಶಾಲೆ ಮತ್ತು ಸಾರ್ವಜನಿಕರ ಬಳಕೆಗಾಗಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸದರಿ ಶೌಚಾಲಯದ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದ್ದು ಟ್ಯಾಂಕ್ ಅನ್ನು ಸರಿಪಡಿಸಿ, ಬಣ್ಣ ಬಳಿಸುವಂತೆ ಸೂಚಿಸಿದರು ಹಾಗೂ ಶಾಲೆಯ ಮಕ್ಕಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ ಅನ್ನು ಒದಗಿಸಲು ಶಾಲೆಗಳಲ್ಲಿ ಅನುದಾನದ ಕೊರತೆಯಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಹೊಳಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಾಮಫಲಕ ಅಳವಡಿಸದಿರುವ ಬಗ್ಗೆ ಗಮನಿಸಿದ ಸಿಇಓರವರು ಕೂಡಲೇ ನಾಮಫಲಕ ಅಳವಡಿಸುವಂತೆ ಸೂಚಿಸಿದರು.
ಗ್ರಾ.ಪಂ. ಕಚೇರಿಗೆ ಭೇಟಿ ನೀಡಿದ ಅವರು ಕಚೇರಿಯ ದಾಖಲೆಗಳನ್ನು ಸಂಗ್ರಹಿಸಿರುವ ಅಭಿಲೇಖಾಲಯವನ್ನು ಪರಿಶೀಲಿಸಿ ಕಡತಗಳು ಹಾಗೂ ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ಎ, ಬಿ, ಸಿ, ಡಿ ಎಂದು ವಿಂಗಡಿಸಿ ಜೋಡಣೆ ಮಾಡುವಂತೆ ಗ್ರಾ.ಪಂ. ಸಿಬ್ಬಂದಿಗಳಿಗೆ ಸಿಇಒ ನಂದಿನಿ ಅವರು ಸೂಚಿಸಿದರು.
ಸರ್ಕಾರದ ವಿವಿಧ ಯೋಜನೆಗಳಾದ ನರೇಗಾ, ಸ್ವಚ್ಛ ಭಾರತ ಮಿಷನ್, ಜಲ ಜೀವನ ಮಿಷನ್, ವಸತಿ ಯೋಜನೆ ಸೇರಿದಂತೆ ಇತರೆ ಕಾರ್ಯಕ್ರಮಗಳ ಮಾಹಿತಿ ಪಡೆದರು. ತೆರಿಗೆ ವಸೂಲಾತಿಯಲ್ಲಿ ಗ್ರಾ.ಪಂ.ನ ಪ್ರಗತಿ ಹಾಗೂ ಸಕಾಲದಲ್ಲಿ ಇ-ಸ್ವತ್ತು ವಿತರಣೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕರನ್ನು ಅಲೆದಾಡಿಸದೇ ಕೆಲಸ ಕಾರ್ಯಗಳನ್ನು ನಿಗಧಿತ ಅವಧಿಯೊಳಗೆ ಮಾಡಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕರಾದ ರೂಪಶ್ರೀ, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ತಾಲ್ಲೂಕು ಪಂಚಾಯತ್ ನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಗಿರೀಶ್ .ಡಿ, ಹಾಗೂ ಶಾಲೆಯ ಮುಖ್ಯೋಪದ್ಯಾಯರಾದ ಬಸವರಾಜು ಹಾಗೂ ಇತರರು ಹಾಜರಿದ್ದರು.
Key words: ZP, CEO, Nandini KR, visits, inspects, government schools, Gram Panchayats







