ಯುವ ದಸರಾ: ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶಕ್ಕೆ ಹಕ್ಕೊತ್ತಾಯ ಮಾಡಲು ನಿರ್ಧಾರ

ಮೈಸೂರು,ಆಗಸ್ಟ್,29,2025 (www.justkannada.in): ಯುವ ದಸರಾ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಜಾನಪದ ಕಲಾವಿದರಿಗೆ ಎರಡು ದಿನ ಅವಕಾಶ ನೀಡುವಂತೆ ಹಕ್ಕೊತ್ತಾಯ ಮಾಡಲು ನಿರ್ಧರಿಸಲಾಗಿದೆ.

ಶಾಶ್ವತವಾದ ಜಾನಪದ ದಸರಾ ಸಮಿತಿ ಎಂಬ ಹೆಸರಿನ ಸಮಿತಿ ರಚನೆ ಮಾಡಲಾಗಿ ಪ್ರೋ ನಂಜರಾಜ ಅರಸು ಅವರ ಮಾರ್ಗದರ್ಶನದಲ್ಲಿ ಮೈಸೂರು ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಲು  ನಿರ್ಧಾರ ಮಾಡಲಾಗಿದೆ. ಈ ಕುರಿತು ಇಂದು ಕಲಾಮಂದಿರದ ಚಿಂತಕರ ಚಾವಡಿಯಲ್ಲಿ ಚರ್ಚೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಅರವಿಂದ್ ಶರ್ಮ ಅವರು, ಯುವದಸರಾ ವೇದಿಕೆಯಲ್ಲಿ ಇಂದಿನ ಕಾಲದ ಯುವಕರಿಗೆ ಜಾನಪದ ಹಾಡಿನ ರಸದೌತಣ ಉಣಬಡಿಸಬೇಕು ಮೈಸೂರು ಯುವ ದಸರಾದಲ್ಲಿ ಪಾರಂಪರಿಕ ಸೊಗಡು ಇಲ್ಲದೆ ಕಳೆಗುಂದುತ್ತಿದೆ ಯುವಕರಿಗೆ ಸರಿ ದಾರಿ ತೋರಿಸುವ ಜಾನಪದ ಹಾಡುಗಳು ಅತ್ಯಗತ್ಯ ಮೈಸೂರಿನ ಸುತ್ತಮುತ್ತ ಮಹದೇಶ್ವರನ ಮೇಲೆ ವಿರಚಿತ  , ಕಾಲಜ್ಞಾನಿ ಮಂಟೆಸ್ವಾಮಿಯ ವಿರಚಿತ ಹಾಡುಗಳು ಬಹಳ ಪ್ರಖ್ಯಾತಿ ಹೊಂದಿದೆ. ಹಾಡಿದವರ ಮನವ ಬಲ್ಲೆ ನೀಡಿದವರ ನಿಜವಾಬಲ್ಲೆ , ಆದಿಜ್ಯೋತಿ ಬನ್ಯೋ ಪರಂಜ್ಯೋತಿ ಬನ್ಯೋ , ಸೋಜುಗಾದ ಸೂಜು ಮಲ್ಲಿಗೆ , ಏಳುಮಲೆ ಮೇಲೇರಿ ಕುತಾನಪ್ಪ ಮಹದೇವ , ನಿನ್ನ ಪೂಜೆಗೆ ಬಂದೆ ಮಹದೇಶ್ವರ , ಮತ್ತು ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಲ್ಲಿ ಕಾಣೋ ಹೆಡೆದ ತಾಯಿಯನ್ನು ಕಳಕೊಂಡ ಮೇಲೆ ಮತ್ತೆ ಸಿಗುವಳೇನು , ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಇಂದಿನ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟ್ರೆಂಡ್ ಆಗಿ ಕೋಟ್ಯಾಂತ ಜನರು ವೀಕ್ಷಿಸಿದ್ದಾರೆ. ಯುವಕರು ಹಾಗೂ ಕುಟುಂಬದವರಿಗೆ ಆಕರ್ಷಣೆಯಾಗಿರುವ ಇಂತಹ ಹಲವು ಹಾಡುಗಳನ್ನು ಹಾಡಲು ನಮ್ಮ ಸ್ಥಳೀಯ ಕಲಾವಿದರ ಅತ್ಯಂತ ಕ್ಷಮತೆ ಹೊಂದಿದ್ದಾರೆ ಎಂದರು.

ಸಿದ್ದರಾಜು ಸೋಸಲೆ ಮಾತನಾಡಿ, ಪ್ರತೀ ವರ್ಷ ಲಕ್ಷಾಂತರ ಹಣವನ್ನು ಯುವ ದಸರಾದಲ್ಲಿ ಹಾಡುವ ಸಿನಿಮಾ ಕಲಾವಿದರಿಗೆ ನೀಡುತ್ತಾ ಬಂದಿದ್ದಾರೆ. ಆದರೆ ನಮ್ಮ ಜಾನಪದ ಕಲಾವಿದರಿಗೆ ಸಣ್ಣ ವೇದಿಕೆ ಅಷ್ಟೇ ಸೀಮಿತವಾಗಿದೆ ಹೊರತು ರಾಷ್ಟೀಯ ಮಟ್ಟದಲ್ಲಿ ಹೆಸರಾಗಿರುವ ಯುವ ದಸರಾ ವೇದಿಕೆ ಜಾನಪದ ಹಾಡುವವರಿಗೆ ವೇದಿಕೆ ಇಲ್ಲದೆ ಇರುವುದು ಶೋಚನೀಯ.  ನಮಗೆ ಯುವ ದಸರಾ ಮುಖ್ಯ ವೇದಿಕೆಯಲ್ಲೇ ಪೂರ್ತಿ ಎರಡೂ ದಿನ ಜಾನಪದ ಝೇಂಕಾರಕ್ಕೆ ಅವಕಾಶ ನೀಡಬೇಕು ಇದಕ್ಕೆ ಪೂರಕ ಪ್ರದರ್ಶನ ನೀಡಲು ಸ್ಥಳೀಯ ಕಲಾವಿದರು ಸಿದ್ದವಿದ್ದೇವೆ.  ನಮಗೂ ಇಂದಿನ ಯುವ ಜನತೆಯನ್ನು ಮಂತ್ರಮುಗ್ಥಗೊಳಿಸುವ ಶಕ್ತಿ ಇದೆ. ಈ ಸಮಿತಿಯ ನೇತೃತ್ವದಲ್ಲೆ ಮುಂದೆ ಸರ್ಕಾರದ ಗಮನ ಸೆಳೆಯಬೇಕು ಹಾಗೂ ಕಲಾವಿದರು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಒಗ್ಗಟ್ಟಾಗಿದ್ದರೆ ಆಡಳಿತದಲ್ಲಿರುವವರು ನಮ್ಮ ಮಾತನ್ನು ಕೇಳಿ ಅವಕಾಶಗಳನ್ನು ನೀಡುತ್ತಾರೆ ಅದಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ,ಜಯಶಂಕರ ಮೇಸ್ತ್ರಿ , ಅಮ್ಮ ರಾಮಚಂದ್ರ, ಶ್ರೀಕಂಠೇಶ್ , ಮಹಾಲಿಂಗ ಎಮ್, ದೇವಾನಂದ ವರಪ್ರಸಾದ್,  ರಮೇಶ್ ತಾಯೂರು, ಸಿದ್ದೇಶ್ವರ ಬದನವಾಳು, ಸಿಂಚನ ಚಿಕ್ಕಕ್ಕೂಳಲೆ, ದಿನೇಶ್ ಚಮ್ಮಳಿಗೆ, ಜೋಗಪ್ಪ , ನವೀನ್ ಕುಮಾರ್ ಎಸ್, ರವಿಕುಮಾರ್, ಡಾ,ಲೋಕೇಶ್, ವೆಂಕಟಮ್ಮ, ರಶ್ಮಿ ಆರ್, ಕೃಷ್ಣಮೂರ್ತಿ ತಲಕಾಡು, ಸಂತೋಷ್ ಕಲಾವಿದ, ಭವತಾರಿಣಿ ಕೆ ಎಸ್, ವಿಶ್ವನಾಥ್ ಎಲ್ , ನಾಗೇಶ್ ಕಂದೆಗಾಲ, ಉಪಸ್ಥಿತರಿದ್ದರು.

Key words: Yuva Dasara, Decision, opportunity, local, folk artists