ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಯುವತಿಯ ಕೈ ಮರುಜೋಡಣೆ ಯಶಸ್ವಿ

ಬೆಂಗಳೂರು,ಆಗಸ್ಟ್,25,2023(www.justkannada.in):  ಆಯುರ್ವೇದಿಕ್‌ ಪೌಡರ್‌ ತಯಾರಿಕ ಘಟಕದಲ್ಲಿ ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕೈ ತುಂಡಾಗಿದ್ದ 28 ವರ್ಷದ ಯುವತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಕೈ ಮರುಜೋಡಣೆ ಮಾಡಿದ್ದಾರೆ.

ಫೋರ್ಟಿಸ್‌ ಆಸ್ಪತ್ರೆಯ ಮೂಳೆಚಿಕಿತ್ಸಕರು ಮತ್ತು ಅರಿವಳಿಕೆ ತಂಡದ ಡಾ. ಸತ್ಯ ನೇತೃತ್ವದಲ್ಲಿ ಡಾ. ಎನ್‌. ಪ್ರದೀಪ್ ಕುಮಾರ್, ಡಾ. ಸಮೀರ್ ಹಲಗೇರಿ, ಡಾ. ಎಸ್‌. ರಿಷಿರಾಜ್ ಮತ್ತು ಡಾ. ಡಿ.ವಿ. ಅಶೋಕಾನಂದ ಅವರು ಈ ಯಶಸ್ವಿ ಚಿಕಿತ್ಸೆಗೆ ಕಾರಣಕರ್ತರು.

ಈ ಕುರಿತು ಮಾತನಾಡಿದ ಮೂಳೆತಜ್ಞ ಡಾ. ಸತ್ಯ, 28 ವರ್ಷದ ಈ ಯುವತಿಯು  ಕೆಲಸ ಮಾಡುವ ಸಂದರ್ಭದಲ್ಲಿ ಅಚಾನಕ್ಕಾಗಿ ಯಂತ್ರಕ್ಕೆ ಸಿಲುಕಿ ತನ್ನ ಮೊಣಕೈವರೆಗೂ ಸಂಪೂರ್ಣವಾಗಿ ತುಂಡಾಗಿದೆ. ಕೂಡಲೇ ಆಕೆಯನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಯಿತು, ಜೊತೆಗೆ, ತುಂಡಾಗಿದ್ದ ಕೈನನ್ನು ಸಹ ಸುರಕ್ಷಿತವಾಗಿ ಆಸ್ಪತ್ರೆಗೆ ತರಲಾಗಿತ್ತು. ಕೂಡಲೇ ನಮ್ಮ ತಂಡ ಶಸ್ತ್ರಚಿಕಿತ್ಸೆಗೆ ಮುಂದಾದೆವು.

ತುಂಡಾದ ಕೈ ಸಮವಾಗಿರದ ಕಾರಣ, ಅದನ್ನು ಸ್ವಲ್ಪ ಪ್ರಮಾಣದಲ್ಲಿ ಕತ್ತರಿಸಿ, ಸಮನಾಗಿಸಿ ಬಳಿಕ ಅಪಧಮನಿಗಳು, ರಕ್ತನಾಳಗಳು ಮತ್ತು ನರಗಳ ಸೂಕ್ಷ್ಮಮರುಸಂಪರ್ಕವಾಗುವಂತೆ ಜೋಡಿಸಿ, ಹೊಲೆಯಲಾಗಿತು. ಈ ಶಸ್ತ್ರಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ತುಂಡಾದ ಕೈಯನ್ನು ಜೋಡಿಸಲಾಗಿದೆ. ಸತತ ಆರು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಕತ್ತರಿಸಲ್ಪಟ್ಟ ಕೈನನ್ನು ಮರುಜೋಡಣೆ ಮಾಡಲಾಯಿತು. ಜೋಡಿಸಲಾದ ಕೈ ಸಂಪೂರ್ಣವಾಗಿ ಗುಣವಾಗಲು ಕನಿಷ್ಠ 6 ತಿಂಗಳ ಕಾಲಾವಧಿ ಬೇಕಾಗಲಿದೆ, ಬಳಿಕ ಜೋಡಣೆಯಾದ ಕೈ ಮೊದಲಿನಂತೆಯೇ ಕೆಲಸ ಮಾಡಲಿದೆ ಎಂದು ವಿವರಿಸಿದರು.

ಡಾ ವಂಶಿ ಮಾತನಾಡಿ, ಯಾವುದೇ ಭಾಗ ತುಂಡಾದ ಬಳಿಕ ಅದನ್ನು ಮರುಜೋಡಿಸುವ ತಂತ್ರಜ್ಞಾನ ನಮ್ಮಲ್ಲಿದೆ ಆದರೆ, ತುಂಡಾದ ಭಾಗವನ್ನು ತೇವವಾದ ಬಟ್ಟೆಯಲ್ಲಿ ಇಟ್ಟು ಸುರಕ್ಷಿತವಾಗಿ ಆಸ್ಪತ್ರೆಗೆ ಶೀಘ್ರವಾಗಿ ತೆಗೆದುಕೊಂಡು ಬರಬೇಕು, ಆದರೆ, ಕೆಲವರು ಆ ಭಾಗವನ್ನು ನೀರಿನಲ್ಲಿ ಮುಳುಗಿಸಿ ಅಥವಾ ಫ್ರೀಜ್‌ ಮಾಡಿಬಿಡುತ್ತಾರೆ. ಇದು ಅತ್ಯಂತ ಅಪಾಯಕ, ಇದರಿಂದ ತುಂಡಾದ ಭಾಗ ಹಾನಿಯಾಗಬಹುದು, ಹೀಗಾಗಿ ಕೇವಲ ತೇವಾಂಶವಿರುವಂತೆ ತೆಗೆದುಕೊಂಡು ಬರಬೇಕು, ಶೀಘ್ರವೇ ತುಂಡಾದ ಅಂಗವನ್ನು ಜೋಡಿಸಿದರೆ, ಪುನಃ ಆ ಅಂಗ ಕೆಲಸ ಮಾಡುವ ಸಾಧ್ಯತೆ ಇರಲಿದೆ. ಈ ಬಗ್ಗೆ ಜನರಲ್ಲೂ ಜಾಗೃತಿ ಹೆಚ್ಚಬೇಕು ಎಂದು ಹೇಳಿದರು.

Key words: young woman- hand – successfully- reattached – Fortis Hospital