ನಿಶ್ಚಿತಾರ್ಥವಾಗಿದ್ದ ಯುವತಿಗೆ ಮೆಸೇಜ್ ಮಾಡಿ ಟಾರ್ಚರ್: ಯುವಕನ ಬರ್ಬರ ಹತ್ಯೆ

ಚಿಕ್ಕಮಗಳೂರು, ಜನವರಿ,1,2026 (www.justkannada.in): ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥವಾಗಿದ್ದ ಯುವತಿಗೆ  ಇನ್‌ಸ್ಟಾಗ್ರಾಂನಲ್ಲಿ ನಿರಂತರವಾಗಿ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿದ್ದ ಹಿನ್ನೆಲೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ಬಳಿ ನಡೆದಿದೆ.

ಮಂಜುನಾಥ್ (21) ಕೊಲೆಯಾದ ಯುವಕ. ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಯಾಗಿದ್ದು ಪರಿಚಯವಿದ್ದ ಯುವತಿಗೆ ಪದೇಪದೇ ಇನ್‌ ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿದ್ದಳು. ಹೀಗಿದ್ದರೂ ಸಹ ಮಂಜುನಾಥ್ ಯುವತಿಗೆ ಇನ್ ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನು ಯುವತಿ ತನ್ನನ್ನು ಮದುವೆಯಾಗಲಿರುವ ಭಾವಿ ಪತಿ ವೇಣುಗೆ ತಿಳಿಸಿದ್ದಾಳೆ. ಮಂಜುನಾಥನ ನಡೆಯಿಂದ ಬೇಸತ್ತ ಭಾವಿ ಪತಿ ವೇಣು  ಮಾತನಾಡಬೇಕು ಎಂದು ಮಂಜುನಾಥ್ ನನ್ನು ಕರೆಸಿಕೊಂಡಿದ್ದಾನೆ. ಈ ವೇಳೆ ಆತನ ಮೇಲೆ ಸ್ನೇಹಿತರಾದ ಕಿರಣ್, ಅಪ್ಪು ಮತ್ತು ಮಂಜು ಜೊತೆ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮಂಜುನಾಥ್‌ ನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ  ಮಂಜುನಾಥ್ ಸಾವನ್ನಪ್ಪಿದ್ದಾನೆ.

ಈ ಘಟನೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: message, girl,  Young man, murdered