ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಯೋಗ ಗುರು ವನಿತಕ್ಕ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ….

ಬೆಂಗಳೂರು,ಅ,28,2019(www.justkannada.in): ಯೋಗ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಯೋಗ ಗುರು ವನಿತಕ್ಕ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗಿರಿನಗರದ  ವಿವೇಕಾನಂದ ಪಾರ್ಕ್ ಪಕ್ಕದಲ್ಲಿ ಯೋಗಶ್ರೀ ಎನ್ನುವ ಯೋಗ ತರಬೇತಿ ಕೇಂದ್ರವನ್ನು ಆರಂಭಿಸಿ ಹಲವಾರು ವರ್ಷಗಳಿಂದಲೂ ಅನೇಕ ಯುವಕ-ಯುವತಿಯರಿಗೆ,ಮಾತೆಯರಿಗೆ ಮಕ್ಕಳು ಹಾಗೂ ಹಿರಿಯರಿಗೆ ಯೋಗದ ಮೂಲಕವೇ ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡುವಂತೆ ಪ್ರೇರಣೆ ನೀಡಿದ್ದಾರೆ.

ಕೈಬೆರಳೆಣಿಕೆಯಷ್ಟು ಯೋಗಾಸಕ್ತರಿಂದ ಆರಂಭವಾದ ಯೋಗಶ್ರೀ ಇಂದು ಹೆಮ್ಮರದಂತೆ ಬೆಳೆದು ನಿಂತಿದ್ದು ಇದರ ಹಿಂದೆ ವನಿತಕ್ಕ ಅವರ ಅಪಾರ ಶ್ರಮವಿದೆ.ಅವರೆಂದೂ ಯೋಗಶ್ರೀ ಮಾಲೀಕರಂತೆ ಯಾರಿಗೂ ಗೋಚರವಾಗಿಲ್ಲ.ಸ್ವತಃ ಯೋಗಾಭ್ಯಾಸ ಮಾಡುತ್ತಾ ಇತರರಿಗೂ ಯೋಗದ ಮಹತ್ವ ತಿಳಿಸುವುದು ಅನೇಕ ವರ್ಷಗಳಿಂದ ಅವರು ಮುಂದುವರಿಸಿರುವ ಕಾಯಕ.ಅವರು ನೀಡುವ ಯೋಗ ತರಬೇತಿಯಿಂದ ಅದೆಷ್ಟೋ ಸಾಮಾನ್ಯ ವ್ಯಕ್ತಿಗಳು ಸ್ವತಃ ಯೋಗ ಶಿಕ್ಷಕರಾಗಿ ರೂಪುಗೊಂಡಿದ್ದಾರೆ.

ಯೋಗದ ಜೊತೆಗೆ ಅನೇಕ ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಷ್ಟ್ರ ಚಿಂತನೆಯ ಕಾರ್ಯಗಳಲ್ಲಿ ತಮ್ಮ ಸಂಪರ್ಕಕ್ಕೆ ಬರುವವರನ್ನು ಜೋಡಿಸುತ್ತಾ ಎಲೆಮರೆಯ ಕಾಯಿಯಂತೆ ಕಾರ್ಯ ಪ್ರವೃತ್ತರಾಗಿರುವ ವನಿತಕ್ಕ ಅವರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

Key words: Yoga Guru -Vanithakka – Kannada Rajyotsava Award