ಮೈಸೂರು,OCT.07,2026: ರಾಜಕೀಯದಲ್ಲಿ ಯಾರ ನಾಯಕರು ಇಷ್ಟ, ಯಾರಿಷ್ಟವಿಲ್ಲ ಎಂಬ ಪ್ರಶ್ನೆಗೆ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ನಮಗೆ ಒಂದಷ್ಟು ಇಷ್ಟದ ನಾಯಕರು ಇದ್ದಾರೆ. ಅದಕ್ಕಾಗಿಯೇ ಬಿಜೆಪಿ ಪಕ್ಷದಲ್ಲಿದ್ದೇವೆ. ರಾಜಕೀಯ ಬೇರೆ, ವೈಯಕ್ತಿಕ ಇಷ್ಟ ಬೇರೆ” ಎಂದು ಅವರು ಹೇಳಿದ್ದಾರೆ.
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಯದುವೀರ್, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತವನ್ನು ಶ್ಲಾಘಿಸಿದರು. ಸಣ್ಣ ಸಮುದಾಯದಿಂದ ಬಂದರೂ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಆಡಳಿತ ನಡೆಸಿದ್ದರು ಎಂದರು. ಇದೇ ವೇಳೆ “ಸಿದ್ದರಾಮಯ್ಯ ಕೂಡ ರಾಜಕೀಯವಾಗಿ ಒಳ್ಳೆಯ ನಾಯಕರು. ಸದ್ಯದ ರಾಜಕೀಯದಲ್ಲಿ ಅವರು ಇಷ್ಟವಾಗುತ್ತಾರೆ” ಎಂದು ಹೇಳಿದರು.

ಮಹಿಷ ದಸರಾಕ್ಕೆ ಸ್ಪಷ್ಟ ವಿರೋಧ
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ತಮ್ಮ ಸ್ಪಷ್ಟ ವಿರೋಧವಿದೆ ಎಂದು ಯದುವೀರ್ ತಿಳಿಸಿದರು. “ಕೇವಲ ಆರಾಧನೆಯಾಗಿ, ಯಾರ ಭಾವನೆಗೂ ಧಕ್ಕೆ ಆಗದ ರೀತಿಯಲ್ಲಿ ಆಚರಿಸಿದರೆ ನಮ್ಮ ವಿರೋಧವಿಲ್ಲ. ಆದರೆ ಇದರ ಹಿಂದೆ ಸೈದ್ಧಾಂತಿಕ ಹೋರಾಟವಿದ್ದರೆ ಅದನ್ನು ಮಾಡಬಾರದು” ಎಂದು ಹೇಳಿದರು.

“ನಾಳೆಯೇ ಚುನಾವಣೆ ನಡೆದರೂ ಸ್ಪರ್ಧೆಗೆ ಸಿದ್ಧ”
ತಮ್ಮ ಸಂಸದೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಯದುವೀರ್, “ನಾಳೆಯೇ ಚುನಾವಣೆ ನಡೆದರೂ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಸ್ಪರ್ಧಿಸಲು ಸಿದ್ಧ” ಎಂದು ಹೇಳಿದರು.
ಮೈಸೂರು–ಕೊಡಗು ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಯೋಜನೆಗಳನ್ನು ಉತ್ತಮವಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಪರಿಕಲ್ಪನೆಯಡಿ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದರು.
ದಸರಾ ವೇಳೆ ಕಂಬಳ ಆಯೋಜನೆಗೂ ವಿರೋಧ:

ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ವಿಚಾರದಲ್ಲೂ ಯದುವೀರ್ ತಮ್ಮ ವಿರೋಧ ವ್ಯಕ್ತಪಡಿಸಿದರು.
“ಕಂಬಳಕ್ಕೆ ಕರಾವಳಿ ಭಾಗದಲ್ಲಿ ಅದರದ್ದೇ ಆದ ಮಹತ್ವವಿದೆ. ಆದರೆ ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಆರಂಭದಿಂದಲೂ ನಮ್ಮ ವಿರೋಧವಿದೆ. ಜನಸಾಮಾನ್ಯರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ಸಂದರ್ಭದಲ್ಲಿ ಕಂಬಳ ಆಯೋಜಿಸಬಹುದಿತ್ತು” ಎಂದು ಅವರು ಹೇಳಿದರು.
ನೂತನ ಪತ್ರಕರ್ತರ ಭವನಕ್ಕೆ ₹25 ಲಕ್ಷ
ಸಂವಾದದ ವೇಳೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಂಸದರ ಅನುದಾನದಿಂದ ₹25 ಲಕ್ಷ ನೀಡುವುದಾಗಿ ಯದುವೀರ್ ಘೋಷಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಅರಮನೆಯ ಖಾಸಗಿ ದಸರಾ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದರು.

KEY WORDS:
Yaduveer Wadiyar, Siddaramaiah, Devaraj Urs, Mysuru-Kodagu MP, Karnataka politics, Mysuru journalists’ interaction, BJP Karnataka, political leaders







