ಮೈಸೂರು,ಆಗಸ್ಟ್,19,2025 (www.justkannada.in): ಪತ್ರಿಕಾ ಛಾಯಾಗ್ರಹಣ ಒಂದು ವಿಶೇಷ ವೃತ್ತಿಯಾಗಿದ್ದು ಇದು ಸವಾಲೊಡ್ಡುವ ಜೊತೆಗೆ ಹೆಚ್ಚು ಖುಷಿ ಕೊಡುತ್ತದೆ ಎಂದು ಹಿರಿಯ ಛಾಯಾಗ್ರಾಹಕ ಸಗ್ಗೆರೆ ರಾಮಸ್ವಾಮಿ ನುಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಸುದ್ದಿ ಛಾಯಾಗ್ರಹಣ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಸಗ್ಗೆರೆ ರಾಮಸ್ವಾಮಿ ಮಾತನಾಡಿದರು.
ಪತ್ರಿಕಾ ಛಾಯಾಗ್ರಹಣದಿಂದ ಘಟನೆಗಳನ್ನು ಸಾಕ್ಷೀಕರಿಸುವ ಅಪೂರ್ವ ಅವಕಾಶ ಪತ್ರಿಕಾ ಛಾಯಾಗ್ರಾಹಕರಿಗೆ ಸಿಗುತ್ತದೆ. ಬಹುತೇಕ ಸ್ಪರ್ಧೆಗಳಲ್ಲಿ ರಾಜಕೀಯ ಆಧಾರಿತ ಛಾಯಾಚಿತ್ರಗಳೇ ಇರುತ್ತವೆ. ಆದರೆ ಇಲ್ಲಿ ಮೈಸೂರು ಸಾಂಸ್ಕೃತಿಕ ನಗರಿ ಎಂಬುದನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳಿರುವುದು ಸಂತಸವುಂಟು ಮಾಡಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ವೈವಿದ್ಯತೆಯಿಂದ ಕೂಡಿದ ಭಾರತ ದೇಶದಲ್ಲಿ ಸೌಹಾರ್ದತೆ, ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಸಂದರ್ಭಾನುಸಾರ ಛಾಯಾಚಿತ್ರದ ಮೂಲಕ ಸಾಕ್ಷೀಕರಿಸುವ ಪತ್ರಿಕಾ ಛಾಯಾಗ್ರಾಹಕರ ಸೇವೆ ಮೆಚ್ಚವಂತಹದ್ದು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಜಗತ್ತಿನ ಎಲ್ಲೇ ಛಾಯಾಚಿತ್ರ ಸ್ಪರ್ಧೆ ನಡೆದರೂ ಮೈಸೂರಿನವರ ಛಾಯಾಚಿತ್ರಗಳು ಇದ್ದೇ ಇರುತ್ತವೆ. ಬಹುಮಾನಗಳಂತೂ ಇವುಗಳಿಗೆ ಬರುವುದು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಮೈಸೂರು ಪತ್ರಿಕೆಗಳು ಪ್ರತಿಭಾವಂತ ಛಾಯಗ್ರಾಹಕರನ್ನು ಬೆಳೆಸಿವೆ ಎಂದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉದಯ್ ಶಂಕರ್, ಗವಿಮಠ ರವಿ, ಮಧುಸೂದನ್, ಅನೂಪ್ ಅವರಿಗೆ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಪಿ ಕೆ.ಎಸ್. ಸುಂದರ್ರಾಜ್, ಉದ್ಯಮಿ ಡಾ.ವಿ. ಕಾರ್ತಿಕ್, ರೆಡ್ಕೋ ಅಧ್ಯಕ್ಷ ವಿ.ಸಿ. ರವಿಕುಮಾರ್, ಮಮತಾ, ಜಿಲ್ಲಾ ಪತ್ರಿಕಾ ಸಂಘದ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಉಪಾಧ್ಯಕ್ಷ ರವಿ ಪಾಂಡವಪುರ ಉಪಸ್ಥಿತರಿದ್ದರು.
Key words: World Photography Day, Mysore, Photojournalism, Saggere Ramaswamy