ವಿಶ್ವಕಪ್ ಶೂಟಿಂಗ್: ಭಾರತಕ್ಕೆ ಐದು ಚಿನ್ನ

ಮುಂಬೈ, ಸೆಪ್ಟೆಂಬರ್ 03, 2019 (www.justkannada.in): ಬ್ರೆಝಿಲ್‌ನ ರಿಯೊ ಡಿ ಜನೈರಾದಲ್ಲಿ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆಗಳ ಒಕ್ಕೂಟ (ಐಎಸ್‌ಎಸ್‌ಎಫ್) ವಿಶ್ವ ಕಪ್ ಸ್ಪರ್ಧೆಯಲ್ಲಿ ಭಾರತ ಐದು ಚಿನ್ನದ ಪದಕಗಳನ್ನು ಗೆದ್ದಿದೆ.

ನಿನ್ನೆ ಮನು ಬಕೇರ್ ಸೌರಭ್ ಚೌಧರಿ ಅವರನ್ನೊಳಗೊಂಡ ತಂಡ ಅಂತಿಮ ಸ್ಪರ್ದೆಯಲ್ಲಿ ಭಾರತದವರೇ ಆದ ಯಶಸ್ವಿನಿ ದೇಸ್ವಾಯಿ- ಅಭಷೇಕ್ ವರ್ಮಾ ಅವರ ತಂಡವನ್ನು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೋಲಿಸಿ, ಚಿನ್ನದ ಸಾಧನೆ ಮಾಡಿತು.

ಕೂಟದಲ್ಲಿ ಭಾರತ ಒಟ್ಟು 5 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಂತಾಗಿದೆ. 2019ರ ಐಎಸ್‌ಎಸ್‌ಎಫ್ ಹಿರಿಯರ ವಿಶ್ವಕಪ್ ಸ್ಪರ್ಧೆಗಳಲ್ಲಿ ಭಾರತ ಒಟ್ಟು 16 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದು ಅಗ್ರಗಣ್ಯ ದೇಶವಾಗಿ ಹೊರಹೊಮ್ಮಿದೆ.

ಅಂತಿಮ ದಿನವಾದ ಸೋಮವಾರ ಮುಂಜಾನೆ ಭಾರತದ ಅಪೂರ್ವಿ ಚಾಂಡೇಲ ಮತ್ತು ದೀಪಕ್ ಕುಮಾರ್ ಜೊಡಿ ಭಾರತಕ್ಕೆ ನಾಲ್ಕನೇ ಚಿನ್ನ ಗೆದ್ದುಕೊಟ್ಟಿತ್ತು. ಈ ಜಯದೊಂದಿಗೆ ಭಾರತ, ಐಎಸ್‌ಎಸ್‌ಎಫ್ ಕಿರಿಯರ ವಿಶ್ವಕಪ್ ಸೇರಿದಂತೆ ಎಲ್ಲ ನಾಲ್ಕು ಐಎಸ್‌ಎಸ್‌ಎಫ್ ವಿಶ್ವಕಪ್ ಕೂಟಗಳಲ್ಲೂ ಅಗ್ರಸ್ಥಾನವನ್ನು ಇದೇ ಮೊದಲ ಬಾರಿಗೆ ಗಳಿಸಿದೆ.