ದುರಂಹಕಾರದ ಮಾತುಗಳಿಗೆ ಚಡಿಏಟು! ಕಣ್ಣೀರ ಕರೆಗೆ ಮಿಡಿದ ಮತದಾರ…

ಮೈಸೂರು, ಮೇ 13, 2023 (www.justkannada.in): ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಮತದಾರರು ಕಣ್ಣೀರ ಕರೆಗೂ ಮಿಡಿದಿದ್ದಾರೆ.

ಹೌದು. ಹಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ಅನುಕಂಪವೂ ಕೆಲಸ ಮಾಡಿದೆ. ನಂಜನಗೂಡು ವಿಧಾನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಧ್ರುವನಾರಾಯಣ್, ಮಂಡ್ಯ ಜಿಲ್ಲೆಯ ಪಾಂಡವಪುರ ಕ್ಷೇತ್ರದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರ ಗೆಲುವುದು ಇದನ್ನು ಸಾಬೀತು ಪಡಿಸಿದೆ.

ತಂದೆ ಸಾವಿನ ನಂತರ ಚುನಾವಣಾ ಕಣಕ್ಕಿಳಿದಿದ್ದ ದರ್ಶನ್ ಧ್ರುವನಾರಾಯಣ್ ಅವರು ಗೆಲುವಿನ ಸನಿಹ ಬಂದಿದ್ದಾರೆ. ಈ ಮೂಲಕ ಕ್ಷೇತ್ರದ ಜನ ಅಪ್ಪನ ಸಾವಿನ ದುಖಃದಲ್ಲಿರುವ ಪುತ್ರನ ಕೈ ಹಿಡಿದಿದ್ದಾರೆ.

ಇನ್ನು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಾವಿನ ನಂತರ ನಡೆದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ದರ್ಶನ್ ಪುಟ್ಟಣ್ಣಯ್ಯ ಕೂಡ ಗೆಲುವಿನ ಸನಿಹ ದಲ್ಲಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದು ಜತೆಗೆ ಚುನಾವಣೆಯಲ್ಲಿ ಕೈಹಿಡಿಯುವಂತೆ ಮಾಡಿದ್ದ ಕಣ್ಣೀರಿನ ಕರೆಗೆ ಜನರ ಮನಸ್ಸು ಮಿಡಿದಿದೆ.

ಸತತ ಸೋಲಿನಿಂದ ಕಂಗೆಟ್ಟಿದ್ದ ಕುಟುಂಬಗಳಿಗೆ ಮತದಾರರು ಗೆಲುವಿನ ಸಿಹಿ ನೀಡಿದ್ದಾರೆ. ಇದಕ್ಕೆ ಉದಾಹರಣೆ ಕೆ.ಆರ್.ನಗರ ಕ್ಷೇತ್ರದ ಕಾಂಗ್ರೆಸ್ ರವಿಶಂಕರ್ ಗೆಲುವು.

ಇನ್ನು ದುರಂಹಕಾರದ ಮಾತುಗಳಿಗೂ ಮತದಾರರು ಪಾಠ ಕಲಿಸಿದ್ದಾರೆ. ಕೆ.ಆರ್.ನಗರದಲ್ಲಿಹಾಲಿ ಶಾಸಕ ಸಾರಾ ಮಹೇಶ್, ಹಾಸನ ಕ್ಷೇತ್ರದ ಪ್ರೀತಂ ಗೌಡ, ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಅವರ ‘ದರ್ಪದ’ ಮಾತುಗಳಿಗೂ ಮತದಾರರು ಚಡಿಏಟು ನೀಡಿದ್ದಾರೆ.