ವಿಜಯ್ ಮಲ್ಯಗಾಗಿ ಇನ್ನೂ ಹೆಚ್ಚು ದಿನ ಕಾಯಲಾಗುವುದಿಲ್ಲ, ಜ.18 ರಂದು ಶಿಕ್ಷೆ ಘೋಷಣೆ ದಿನಾಂಕ ನಿಗಧಿ: ಸರ್ವೋಚ್ಛ ನ್ಯಾಯಾಲಯ.

 

ನವೆಂಬರ್ ೩೦, ೨೦೨೧ (www.justkannada.in): ಮಾನ್ಯ ಸರ್ವೋಚ್ಛ ನ್ಯಾಯಾಲಯ ಮಂಗಳವಾರ ದೇಶ ಬಿಟ್ಟು ಪಲಾಯನ ಮಾಡಿರುವ ಕೈಗಾರಿಕೋದ್ಯಮಿ ವಿಜಯ್ ಮಲ್ಯಾಗಾಗಿ ಇನ್ನೂ ಹೆಚ್ಚಿನ ದಿನಗಳವರೆಗೆ ಕಾಯಾಲಾಗುವುದಿಲ್ಲವೆಂದು ತಿಳಿಸಿ, ೨೦೧೭ರ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನವರಿ ೧೮ರಂದು ಶಿಕ್ಷೆ ಘೋಷಿಸುವ ದಿನಾಂಕವನ್ನು ನಿಗಧಿಪಡಿಸಿದೆ.

ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಅಧ್ಯಕ್ಷತೆಯ ನಾಲ್ಕು ಸದಸ್ಯರ ಪೀಠ ಈ ಕುರಿತು ಇಂದು ಮಾಹಿತಿ ನೀಡುತ್ತಾ, “ಇನ್ನು ಕಾಯಲಾಗುವುದಿಲ್ಲ. ಮಲ್ಯಾ ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕು ಅಥವಾ ತಮ್ಮ ವಕೀಲರ ಮೂಲಕ ವಾದವನ್ನು ಮಂಡಿಸುವ ವ್ಯವಸ್ಥೆ ಮಾಡಬೇಕು, ೨೦೧೭ರಿಂದಲೂ ಈ ಪ್ರಕರಣ ಮುಂದೂಲ್ಪಡುತ್ತಿದ್ದು, ಆತ ತಪ್ಪಿತಸ್ಥ ಎಂದು ಗುರುತಿಸಿದ ನಂತರ ಇದಕ್ಕೆ ಒಂದು ಅಂತ್ಯ ಹಾಡಬೇಕಿದೆ. ಕಳೆದ ನಾಲ್ಕು ವರ್ಷಗಳಿಂದ ಕೇವಲ ಶಿಕ್ಷೆ ಘೋಷಣೆಯೊಂದು ಬಾಕಿ ಉಳಿದಿದೆ,” ಎಂದಿದ್ದಾರೆ.

ಕೇಂದ್ರದ ಪರ ವಾದಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಪರಿಗಣನೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಟಿಪ್ಪಣಿಯೊಂದನ್ನು ಕಳುಹಿಸಿದ್ದಾರೆ.

ಈ ಟಿಪ್ಪಣಿಯನ್ನು ನೋಡಿದ ನಂತರ ಪೀಠವು ಮಲ್ಯಾ ಅವರು ಯುಕೆ ನ್ಯಾಯಾಲಯದ ಎಲ್ಲಾ ಮೇಲ್ಮನವಿಗಳನ್ನೂ ಮೀರಿರುವ ಹಿನ್ನೆಲೆಯಲ್ಲಿ ಅವರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತವನ್ನು ತಲುಪಿದೆ. ಆದರೆ ಇನ್ನೂ ಯುಕೆ ದೇಶವು ಬಹಿರಂಗಪಡಿಸದಿರುವಂತಹ ಕೆಲವು ನಿರ್ಧಿಷ್ಟವಾದ ಗೌಪ್ಯ ವಿಚಾರಣೆಗಳು ಮುಂದುವರೆದಿದೆ. ಈ ಪ್ರಕ್ರಿಯೆಗಳಿಂದಾಗಿ, ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ ಮಲ್ಯಾ ಅವರನ್ನು ಹಾಜರುಪಡಿಸುವಲ್ಲಿ ವಿಳಂಬವಾಗುತ್ತಿದೆ. ನ್ಯಾಯಾಲಯ ನಿಂದನೆಯ ವಿಷಯಕ್ಕೆ ಸಂಬಂಧಿಸಿದಂತೆ ಮಲ್ಯಾ ಅವರಿಗೆ ಶಿಕ್ಷೆ ಘೋಷಿಸುವ ಪ್ರಕ್ರಿಯೆ ಮುಗಿಯಲೇ ಬೇಕಿದೆ. ಏಕೆಂದರೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಇದಕ್ಕಾಗಿ ಸಾಕಷ್ಟು ಸಮಯದವರೆಗೂ ಕಾದಿದೆ ಎಂದು ತಿಳಿಸಿ, ಶಿಕ್ಷೆ ವಿಚಾರಣೆಯನ್ನು ಜನವರಿ ೧೮, ೨೦೨೨ಕ್ಕೆ ನಿಗಧಿಪಡಿಸಿದೆ.

ಜುಲೈ ೧೪, ೨೦೧೭ರಂದು ಕರ್ನಾಟಕ ಮೂಲದ ಕೈಗಾರಿಕೋದ್ಯಮಿ ವಿಜಯ್ ಮಲ್ಯಾ ಅವರು, ಬ್ಯಾಂಕುಗಳಿಗೆ ಬಾಕಿ ಪಾವತಿಸಬೇಕಾಗಿದ್ದಂತಹ ರೂ.೯,೦೦೦ ಕೋಟಿ ಹಣವನ್ನು ಮರಳಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ ಆದೇಶದ ಹೊರತಾಗಿಯೂ ಅವರ ಮಕ್ಕಳ ಖಾತೆಗಳಿಗೆ ೪೦ ದಶಲಕ್ಷ ಡಾಲರ್‌ಗಳ ವರ್ಗಾವಣೆಯ ವಿಚಾರದ ವಿವರಗಳನ್ನು ಬಹಿರಂಗಗೊಳಿಸುವಲ್ಲಿ ವಿಫಲರಾಗಿದ್ದರು. ಇದು ನ್ಯಾಯಾಂಗ ಉಲ್ಲಂಘನೆಯಾಗಿತ್ತು. ಕೋವಿಡ್-೧೯ ಸಾಂಕ್ರಾಮಿಕವೂ ಸೇರಿದಂತೆ ಮಲ್ಯಾ ಅವರ ವಿರುದ್ಧದ ಶಿಕ್ಷೆ ಘೋಷಣೆ ಹಲವು ಕಾರಣಗಳಿಂದಾಗಿ ಬಾಕಿ ಉಳಿದುಕೊಂಡಿತ್ತು.

ಕೇಂದ್ರ ಸರ್ಕಾರ ಮಲ್ಯಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ವಿಫಲವಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ನಡೆಯುತ್ತಿರುವ ಕೆಲವು ಗೌಪ್ಯ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮಲ್ಯಾ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

ಉದ್ಯಮಿ ಮಲ್ಯಾ ಬ್ಯಾಂಕುಗಳಿಂದ ರೂ.೯,೦೦೦ ಕೋಟಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಫಲರಾಗಿದ್ದು ಕಾನೂನು ಜಾರಿ ಪ್ರಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗಿದ್ದಾರೆ. ಮೇ ೨೦೨೦ರಲ್ಲಿ ಆತನನ್ನು ನಮ್ಮ ದೇಶಕ್ಕೆ ಹಸ್ತಾಂತರಿಸಲು ಅಲ್ಲಿನ ನ್ಯಾಯಾಲಯ ಅನುಮತಿಸಿರುವ ಹಿನ್ನೆಲೆಯಲ್ಲಿ ಮಲ್ಯಾಗೆ ದೊಡ್ಡ ಹಿನ್ನೆಡೆಯಾಗಿದೆ.

ಆಗಸ್ಟ್ ೨೦೨೦ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮಲ್ಯಾ ವಿರುದ್ಧ ೨೦೧೭ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವೊಂದರ ಸಂಬಂಧ ಸಲ್ಲಿಸಿದ್ದಂತಹ ಮರುಪರಿಶೀಲನೆ ಅರ್ಜಿಯನ್ನು ವಜಾಗೊಳಿಸಿತ್ತು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : vijay-mallya-supreme-court-conviction-date-January