ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ: ಅಧಿವೇಶನ ಆಪೋಶನ?

ಬೆಂಗಳೂರು:ಜುಲೈ-12: ರಾಜ್ಯದಲ್ಲಿ ಉಂಟಾಗಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಇಂದಿನಿಂದ (ಜು.12) ಆರಂಭವಾಗಲಿರುವ ವಿಧಾನದ ಚಳಿಗಾಲದ ಅಧಿವೇಶನವನ್ನು ಆಪೋಶನ ತೆಗೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಶುಕ್ರವಾರದಿಂದ 11 ದಿನ ಅಧಿವೇಶನ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆಯಾದರೂ, ಕಾಂಗ್ರೆಸ್, ಜೆಡಿಎಸ್ ಶಾಸಕರ ಸುನಾಮಿ ರಾಜೀನಾಮೆ ಹಿನ್ನೆಲೆಯಲ್ಲಿ ಅಧಿವೇಶನದ ಕಲಾಪ ನಡೆ ಯುವುದು ಅನುಮಾನ ಹುಟ್ಟಿಸಿದೆ. ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದನ್ನೇ ನೆಪವಾಗಿಟ್ಟು ಕೊಂಡಿರುವ ಬಿಜೆಪಿ, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡ ಬೇಕು ಎಂದು ಪಟ್ಟು ಹಿಡಿದಿದೆ. ಜತೆಗೆ ಅತೃಪ್ತರ ಬಿಗಿಪಟ್ಟಿನಿಂದ ಸರ್ಕಾರ ಅಸ್ಥಿರತೆಯ ಆಪತ್ತಿಗೆ ಸಿಲುಕುವುದು ಗ್ಯಾರಂಟಿಯಾಗಿದೆ.

2019-20ರ ರಾಜ್ಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಜುಲೈ ಅಂತ್ಯದವರೆಗೆ ಲೇಖಾನುದಾನ ಪಡೆದಿದ್ದರು. ಈಗ ಈ ಅಧಿವೇಶನದಲ್ಲಿ ಹಣಕಾಸು ಮಸೂದೆಗೆ ಅಂಗೀಕಾರ ಪಡೆಯುವ ಅನಿವಾರ್ಯತೆಯಿದೆ. ಇದರ ಜತೆಗೆ ಕೆಲವು ಮಸೂದೆಗಳನ್ನು ಪಾಸ್ ಮಾಡಿಕೊಳ್ಳಲೇಬೇಕಾದ ಸ್ಥಿತಿಯಿದೆ. ಹಾಗಾಗಿ ಅಧಿವೇಶನದಲ್ಲಿ ಏನೇ ಗದ್ದಲ, ಗಲಾಟೆ ನಡೆದರೂ ಹಣಕಾಸು ಸೇರಿ ಕೆಲವು ಬಿಲ್​ಗಳು ಚರ್ಚೆ ಇಲ್ಲದೆ ಅಂಗೀಕಾರಗೊಳ್ಳುವ ಸಾಧ್ಯತೆಗಳಿವೆ. ಹಣಕಾಸು ಮಸೂದೆಗೆ ಅಂಗೀಕಾರ ಬೇಕೇಬೇಕು. ಇಲ್ಲದಿದ್ದರೆ ಸರ್ಕಾರಿ ನೌಕರರಿಗೆ ಸಂಬಳ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ. ಈ ಸಂದಿಗ್ಧ ಸ್ಥಿತಿಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅಧಿವೇಶನವನ್ನು ಯಾವ ರೀತಿ ನಡೆಸಬಲ್ಲರು ಎಂಬುದು ಕುತೂಹಲ ಕೆರಳಿಸಿದೆ. ಸರ್ಕಾರ ಅಲ್ಪಮತಕ್ಕೆ ಕುಸಿಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಯಾವುದೇ ಮಹತ್ವದ ನೀತಿ, ನಿರ್ಧಾರಗಳನ್ನು ಕೈಗೊಳ್ಳದಂತೆ ರಾಜ್ಯಪಾಲರು ಸೂಚಿಸಿದ್ದರು. ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದಂತೆ ಬ್ರೇಕ್ ಹಾಕಿದ್ದರು. ಈಗ ಅಧಿವೇಶನ ವಿಚಾರದಲ್ಲಿ ರಾಜ್ಯಪಾಲರು ಯಾವ ಹೆಜ್ಜೆ ಇಡುತ್ತಾರೆ ಎಂಬುದು ನಿಗೂಢವಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನ ಮುಂದೂಡಲು ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ರಮೇಶ್​ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದು, ಅಧಿವೇಶನ ಬಿಜೆಪಿ ಹಾಗೂ ಜೆಡಿಎಸ್ ಜಿದ್ದಾಜಿದ್ದಿನ ಕಣವಾಗಲಿದೆ. ಗದ್ದಲ, ಗಲಾಟೆ, ವಾಕ್ಸಮರ ಮಾತ್ರವಲ್ಲದೆ, ಕೈ ಕೈ ಮಿಲಾಯಿಸುವ ಸನ್ನಿವೇಶ

ಗಳು ಸೃಷ್ಟಿಯಾದರೂ ಅಚ್ಚರಿಪಡಬೇಕಿಲ್ಲ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗುತ್ತದೆ. ವಿಶೇಷವಾಗಿ ರಾಜೀನಾಮೆ ನೀಡಿರುವ ಶಾಸಕರು ಅಧಿವೇಶನಕ್ಕೆ ಹಾಜರಾದರೆ ರಕ್ಷಣೆ ಒದಗಿಸಲಾಗುತ್ತದೆ.

ಸ್ಪೀಕರ್ ವಿರುದ್ಧವೂ ಹೋರಾಟ

ಶಾಸಕರ ರಾಜೀನಾಮೆ ಸ್ವೀಕರಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾರಣರಾದ ರಮೇಶ್​ಕುಮಾರ್ ವಿರುದ್ಧವೂ ಬಿಜೆಪಿ ಸದನದಲ್ಲಿ ಹೋರಾಟ ನಡೆಸುವ ಸಾಧ್ಯತೆಗಳಿವೆ. ಸ್ಪೀಕರ್ ತಕ್ಷಣ ರಾಜೀನಾಮೆ ಅಂಗೀಕರಿಸದೆ ಸರ್ಕಾರವನ್ನು ಅತಂತ್ರ ಸ್ಥಿತಿಯಲ್ಲಿಟ್ಟಿದ್ದು, ಮೈತ್ರಿ ಪಕ್ಷಗಳಿಗೆ ಸರ್ಕಾರ ಉಳಿಸಿಕೊಳ್ಳಲು ಹೆಚ್ಚು ಕಾಲಾವಕಾಶ ನೀಡುತ್ತಿದ್ದಾರೆ ಎಂಬ ಆರೋಪ ಬಿಜೆಪಿಯದ್ದಾಗಿದೆ. ಇದು ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಲಿದೆ.

ಅಭಿವೃದ್ಧಿ ಮರೀಚಿಕೆ…

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ವರ್ಗಾವಣೆ ದಂಧೆ, ಜಿಂದಾಲ್​ಗೆ ಭೂಮಿ ಮಾರಾಟ, ಬೇರೆ ಇಲಾಖೆಯಲ್ಲೂ ಲೋಕೋಪಯೋಗಿ ಸಚಿವರ ಹಸ್ತಕ್ಷೇಪವನ್ನು ಅಸ್ತ್ರವನ್ನಾಗಿ ಬಿಜೆಪಿ ಬಳಸಿಕೊಳ್ಳಲು ಅವಕಾಶ ಇದೆ. ಆದರೆ ರಾಜಕೀಯ ಮೇಲಾಟದಲ್ಲಿ ಈ ವಿಚಾರಗಳ ಚರ್ಚೆಗೆ ಅವಕಾಶ ಸಿಕ್ಕುವ ಸಾಧ್ಯತೆ ಕಡಿಮೆ. ಸಚಿವರು ರಾಜೀನಾಮೆ ನೀಡಿದ ಮೇಲೆ ನಡೆದ ಕಡತ ವಿಲೇವಾರಿ, ವರ್ಗಾವಣೆ, ಸಂಪುಟ ಸಭೆಗಳು ಪ್ರತಿಪಕ್ಷ ಬಿಜೆಪಿಗೆ ಆಹಾರವಾಗಲಿದೆ. ರಾಜ್ಯದ ಬಹತೇಕ ಭಾಗದಲ್ಲಿ ಭೀಕರ ಬರಗಾಲವಿದೆ, ಕುಡಿಯುವ ನೀರಿಗೂ ಸಮಸ್ಯೆ ಇದೆ. ಆದರೆ ಈ ವಿಚಾರ ಚರ್ಚೆಗೆ ಬರುತ್ತದೆಯೇ ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.

ಸಂತಾಪ ಸೂಚಕಕ್ಕೆ ಸೀಮಿತ ಕಲಾಪ

ಪ್ರಸಕ್ತ ವಿಧಾನಸಭೆಯ ನಾಲ್ಕನೇ ಅಧಿವೇಶನದ ಮೊದಲ ದಿನ ಕೇವಲ ಸಂತಾಪ ಸೂಚಕಕ್ಕೆ ಸೀಮಿತವಾಗಲಿದೆ. ಕಲಘಟಗಿ ಕ್ಷೇತ್ರದ ಹಾಲಿ ಶಾಸಕ ಸಿ.ಎಸ್.ಶಿವಳ್ಳಿ ಮಾ.22ರಂದು ನಿಧನರಾಗಿದ್ದರು. ಆ ನಂತರದ ಮೊದಲ ಅಧಿವೇಶನ ಇದಾಗಿರುವುದರಿಂದ ಸಂಪ್ರದಾಯದಂತೆ ಶುಕ್ರವಾರ ಉಭಯ ಸದನಗಳಲ್ಲಿ ಸಂತಾಪ ಸಲ್ಲಿಸಿ ಸೋಮವಾರಕ್ಕೆ ಮುಂದೂಡಲಾಗುತ್ತದೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿಯು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಹೆಚ್ಚಾಗಿದೆ. ಸರ್ಕಾರಕ್ಕೆ ಬಹುಮತ ಇಲ್ಲದ್ದರಿಂದ ಸಿಎಂ ರಾಜೀನಾಮೆ ಕೊಡಬೇಕೆಂದು ಪಟ್ಟುಹಿಡಿಯಲಿದೆ ಎನ್ನಲಾಗಿದೆ.

ದೋಸ್ತಿಗಳಿಂದ ವಿಪ್

ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಂತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿವೆ. ಶಾಸಕರು ರಾಜೀನಾಮೆ ನೀಡಿರುವು ದರಿಂದ ಅಧಿವೇಶನಕ್ಕೆ ಸೆಳೆಯುವ ಸಲುವಾಗಿ ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಪ್ ಜಾರಿ ಮಾಡಿದ್ದು, ಸದನದಲ್ಲಿ ಹಾಜರಿದ್ದು ಸರ್ಕಾರದ ಪರ ಮತ ಚಲಾಯಿಸಬೇಕು ಎಂದು ಸೂಚಿಸಿದ್ದಾರೆ. ಸದನಕ್ಕೆ ಹಾಜರಾಗದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದ್ದು, ರಾಜೀನಾಮೆ ನೀಡಿರುವ ಶಾಸಕರಿಗೆ ಶಾಸಕರ ಭವನದ ಅವರ ಕೊಠಡಿ ಬಾಗಿಲಿಗೆ ವಿಪ್ ಅಂಟಿಸಲಾಗಿದೆ.
ಕೃಪೆ:ವಿಜಯವಾಣಿ

ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ: ಅಧಿವೇಶನ ಆಪೋಶನ?
vidhan-sabha-session-may-affected-by-resignation-high-drama