‘JK Journey@15’ ವಿಡಿಯೋ ಟ್ರೈಲರ್ ಗೆ ಸಂಸದ ಯದುವೀರ್, ಸುತ್ತೂರು ಶ್ರೀ ಚಾಲನೆ

ಮೈಸೂರು,ನವೆಂಬರ್,3,2025 (www.justkannada.in): ಡಿಜಿಟಲ್ ಮಾಧ್ಯಮದಲ್ಲಿ ಛಾಪು ಮೂಡಿಸಿರುವ ‘ಜಸ್ಟ್ ಕನ್ನಡ’ ಆನ್ ಲೈನ್ ದಿನಪತ್ರಿಕೆಯ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರೂಪಗೊಂಡ ‘JK Journey@15 ’  ನಡೆದು ಬಂದ ಹಾದಿಯ ವಿಡಿಯೋವನ್ನ ಸುತ್ತೂರು ದೇಶಿಕೇಂದ್ರ ಮಹಾಸ್ವಾಮಿ ಹಾಗೂ ಮೈಸೂರು-ಕೊಡಗು ಸಂಸದ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ವಿಡಿಯೋ ಕ್ಲಿಪ್ ಮಾಡುವ ಮೂಲಕ  ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುತ್ತೂರು ದೇಶಿಕೇಂದ್ರ ಮಹಾಸ್ವಾಮಿ , ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮಾಧ್ಯಮ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಶೀಘ್ರವಾಗಿ ಸುದ್ದಿಗಳು ಜನರನ್ನ ತಲುಪುತ್ತಿವೆ. ಇದಕ್ಕೆ ಪೂರಕವಾಗಿ ‘ಜಸ್ಟ್ ಕನ್ನಡ’ ನಿರಂತರವಾಗಿ ಸುದ್ದಿಗಳನ್ನ ಬಿತ್ತರಿಸುತ್ತಿದೆ.  ಜನರ ಕೈಗೆ ಕುಳಿತಲ್ಲಿಯೇ ಸುದ್ದಿಗಳನ್ನ ಉಣಬಡಿಸುವ ಮೂಲಕ ಜನಮನ್ನಣೆ ಗಳಿಸಿದೆ.  ಈ ಮಾಧ್ಯಮ ಮತ್ತಷ್ಟು ಜನಪ್ರಿಯವಾಗಲಿ ಎಂದು ಶುಭಾ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ‘JK Journey@15’    ವಿಡಿಯೋಗೆ ಚಾಲನೆ ನೀಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸುದ್ದಿಗಳನ್ನ ಸುದ್ದಿಗಳ ರೀತಿಯಲ್ಲಿ ನೀಡುವ ಏಕೈಕ ಮಾಧ್ಯಮ ‘ಜಸ್ಟ್ ಕನ್ನಡ’ ಎಂದು ಬಣ್ಣಿಸಿದರು.  ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಅತಿರೇಕ ವರ್ಣನೆ ರಂಜನೆ ತೋರದೆ  ಸುದ್ದಿಯನ್ನ ಕೇವಲ ಸುದ್ದಿಯಾಗಿ ನೀಡುವ ಮೂಲಕ ‘ಜಸ್ಟ್ ಕನ್ನಡ’ ಎಲ್ಲರ ಗಮನ ಸೆಳೆದಿದೆ. ಇದರ ಪಯಣ ಮತ್ತಷ್ಟು ದೀರ್ಘಕಾಲ ಸಾಗಲಿ. ಸುದ್ದಿಲೋಕದಲ್ಲಿ ಹೊಸ ಕ್ರಾಂತಿ ಮೂಡಿಸಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಾಜಿ ಸಚಿವೆ ಗೀತಾ ಮಹದೇವ್ ಪ್ರಸಾದ್, ಜಸ್ಟ್ ಕನ್ನಡ ಸಂಪಾದಕ ವಿ.ಮಹೇಶ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Key words: MP, Yaduveer, Suttur Shri, launch, video trailer, ‘JK Journy@15’