ಹಿರಿಯ ನಟಿ ಜಯಂತಿ ಕೋವಿಡ್ 19 ಪರೀಕ್ಷೆ ಮಾಹಿತಿ ನೀಡಿದ ಪುತ್ರ ಕೃಷ್ಣಕುಮಾರ್

ಬೆಂಗಳೂರು, ಜುಲೈ 08, 2020 (www.justkannada.in): ಹಿರಿಯ ನಟಿ ಜಯಂತಿ ಅವರನ್ನು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ 19 ಟೆಸ್ಟ್ ಮಾಡಿದ್ದು, ಇದೀಗ ಅದರ ವರದಿ ಬಂದಿದೆ. ಈ ಕುರಿತು ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ.

ವರದಿಯಲ್ಲಿ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ ಎಂದು ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಜಸ್ಟ್ ಕನ್ನಡ ಗೆ ಮಾಹಿತಿ ನೀಡಿದ್ದಾರೆ. JK ಜತೆ ಮಾತನಾಡಿದ ಅವರು, ಈ ಹಿಂದೆ ಜಯಂತಿ ಅವರು ಅಸ್ತಮಾ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ವಿಕ್ರಂ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೋವಿಡ್ 19 ಆತಂಕ ಎದುರಾಗಿತ್ತು. ಆದರೀಗ ವರದಿ ಬಂದಿದ್ದು, ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಐಸಿಯುನಲ್ಲಿ ನನ್ನನ್ನು ಅವರು ಗುರುತಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈ ಹಿಂದೆಯೂ ವಿಕ್ರಂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಅವರು ಇದೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಎಲ್ಲರಿಗೂ ಅವರನ್ನು ನೋಡಲು ಅವಕಾಶ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದರು.