ನಗರ ಪೊಲೀಸರಿಗೆ ಇದು ಬಹಳ ಚಿಕ್ಕ ವಿಚಾರ: 112>100…!

ಬೆಂಗಳೂರು, ಆಗಸ್ಟ್ 11, 2021 (www.justkannada.in): ನೀವು ಬೆಂಗಳೂರು ನಗರದಲ್ಲಿ ನೆಲೆಸಿದ್ದು, ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾಗ ಈಗಲೂ 100ಗೆ ಡಯಲ್ ಮಾಡುತ್ತಿರುವಿರಾ? ಹಾಗಾದರೆ ನಿಮಗೆ ಆ ಸಂಖ್ಯೆಗೆ ಸಂಪರ್ಕ ಸಿಕ್ಕಿರುವುದಿಲ್ಲ ಅಲ್ಲವೇ?! ಈ ತುರ್ತು ಸಹಾಯವಾಣಿ ಸಂಖ್ಯೆಯನ್ನು 100 ರಿಂದ 112ಕ್ಕೆ ಬದಲಾಯಿಸಲಾಗಿರುವ ಸುದ್ದಿ ೨೦೧೯ರಲ್ಲೇ ವರದಿಯಾಗಿತ್ತು.

ಆದರೆ ಈ ಸುದ್ದಿ ಇನ್ನೂ ಬಹುಪಾಲು ನಾಗರಿಕರಿಗೆ ತಿಳಿದಿಲ್ಲ. ಸ್ವಾಭಾವಿಕವಾಗಿ ಯಾವುದೇ ತೊಂದರೆಯಲ್ಲಿ ಸಿಲುಕಿಕೊಂಡಾಗ ಈಗಲೂ ನಾಗರಿಕರು ‘೧೦೦’ಕ್ಕೆ ಕರೆ ಮಾಡುವ ವಾಡಿಕೆಯನ್ನು ಹೊಂದಿದ್ದಾರೆ. ಏಕೆಂದರೆ ಹಲವು ದಶಕಗಳಿಂದಲೂ ನಮ್ಮೆಲ್ಲರ ಮನಸ್ಸುಗಳಲ್ಲಿ ಈ ಸಂಖ್ಯೆ ಹಾಸುಹೊಕ್ಕಾಗಿದೆ.

ಆದರೆ ಈಗ 100 ಸಂಖ್ಯೆ ಸಂಪರ್ಕ ಸಾಧ್ಯವಾಗದಿರುವ ಕಾರಣದಿಂದಾಗಿ ಬೆಂಗಳೂರು ನಗರ ಭಾಗದ ಜನರು ಪೇಚಾಡುವಂತಾಗಿದೆ. ತುರ್ತು ಸೇವೆಗಳ ಸಹಾಯವಾಣಿ 112ಕ್ಕೆ ಬದಲಾಗಿರುವ ವಿಷಯವೇ ಯಾರಿಗೂ ಗೊತ್ತಿಲ್ಲ! ಆದರೆ ಪೊಲೀಸರ ಪ್ರಕಾರ ‘100’ ಸಂಖ್ಯೆ ಈಗಲೂ ಕಾರ್ಯನಿರ್ವಹಿಸುತ್ತಿದ್ದಯೆಂತೆ.

ಉದಾಹರಣೆಗೆ, ಇತ್ತೀಚೆಗೆ ಮಲ್ಲೇಶ್ವರಂ 18ನೇ ತಿರುವಿನಲ್ಲಿ ಮಹಿಳೆಯೋರ್ವರು ಸುಮಾರು ರಾತ್ರಿ ೯.೩೦ರ ವೇಳೆಯಲ್ಲಿ ಅವರ ಮನೆಯ ಬಳಿ ವಾಯುವಿಹಾರಕ್ಕೆ ತೆರಳಿದ್ದಾಗ ದ್ವಿಚಕ್ರವಾಹನದಲ್ಲಿ ಬಂದಂತಹ ಇಬ್ಬರು ಕಿಡಿಗೇಡಿಗಳು ಅವರ ಮೊಬೈಲ್ ಕಸಿದುಕೊಂಡು ಕಣ್ಮರೆಯಾದರಂತೆ. ಆಗ ಆ ಮಹಿಳೆ ಕೂಗಿಕೊಂಡಿದ್ದಾರೆ. ಸುತ್ತಮುತ್ತಲೂ ಇದ್ದಂತಹ ಜನರು ಆಕೆಯ ನೆರವಿಗೆ ಬಂದಿದ್ದಾರೆ. ಆಗ ಅವರ ಪೈಕಿ ಕೆಲವರು ತುರ್ತು ಸೇವಾ ಸಹಾಯವಾಣಿ ಸಂಖ್ಯೆ ‘100’ ಕ್ಕೆ ಡಯಲ್ ಮಾಡಿದ್ದಾರೆ. ಆದರೆ ಆ ಕರೆ ಸಾಧ್ಯವಾಗಲೇ ಇಲ್ಲ. ಸ್ವಲ್ಪ ಹೊತ್ತಿನಲ್ಲಿ ಆ ಮಹಿಳೆಯ ಪತಿ ಅಲ್ಲಿಗೆ ಆಗಮಿಸಿ ಮನೆಗೆ ಹಿಂದಿರುಗಲು ತೀರ್ಮಾನಿಸಿದರು. ಏಕೆಂದರೆ ಆ ಹೊತ್ತಿಗಾಗಲೇ ಬಹಳ ತಡವಾಗಿತ್ತು. ಹಾಗಾಗಿ, ಮರು ದಿನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡೋಣ ಎಂದರಂತೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಆ ರಸ್ತೆಯಲ್ಲಿ ಪೊಲೀಸ್ ಗಸ್ತು ವಾಹನವೊಂದು ಬಂದಿದೆ. ಆಗ ನೆರೆಯವರು ಪೊಲೀಸರನ್ನು ನಿಲ್ಲಿಸಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ಆಗ ಪೊಲೀಸರು ಹೊಯ್ಸಳ ವಾಹನದ ಮೇಲೆ ಬರೆದಿದ್ದಂತಹ ‘112’ ಸಂಖ್ಯೆಯನ್ನು ತೋರಿಸಿದರಂತೆ. ಆದರೆ ಅಲ್ಲಿದ್ದವ್ಯಾರಿಗೂ ಆ ಬಗ್ಗೆ ಅರಿವೇ ಇರಲಿಲ್ಲ. ಜೊತೆಗೆ ಇ-ಲಾಸ್ಟ್  ಎಂಬ ಆ್ಯಪ್ ಮೂಲಕವೂ ದೂರು ದಾಖಲಿಸುವಂತೆ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಆ ವೇಳೆಯಲ್ಲಿ ‘100’ ಸಂಖ್ಯೆ ಸಂಪರ್ಕ ಸಾಧ್ಯವಾಗಿದ್ದರೆ, ಬಹುಶಃ ಕಿಡಿಗೇಡಿಗಳನ್ನು ಹಿಡಿಯಬಹುದಿತ್ತೇನೋ ಎನ್ನುವುದು ಮಹಿಳೆಯ ಅನಿಸಿಕೆ. “ಮೇಲಾಗಿ ಆ ಸಮಯದಲ್ಲಿ ನಮಗೇನಾದರೂ ಅಪಾಯವಾಗಿದ್ದರೇ, ಏನು ಮಾಡುವುದು,? ಎನ್ನುವುದು ಅವರ ಭಯ.

ಕಮ್ಯಾಂಡ್ ಕೇಂದ್ರದ ಡಿಸಿಪಿ ಇಶಾ ಪಂತ್ ಅವರ ಪ್ರಕಾರ, ತುರ್ತು ಸಹಾಯವಾಣಿ ‘100’ ಇನ್ನೂ ತೆಗೆದುಹಾಕಿಲ್ಲ ಮತ್ತು ಇನ್ನೂ ಆ ಸಂಖ್ಯೆಗೆ ಕರೆಗಳು ಬರುತ್ತಿವೆ ಎನ್ನುತ್ತಾರೆ. “ನಾವು ನಿಧಾನವಾಗಿ ಎಲ್ಲಾ ತುರ್ತು ಕರೆಗಳನ್ನೂ ಸಹ 100 ಇಂದ ‘112’ಕ್ಕೆ ವರ್ಗಾಯಿಸುತ್ತಿದ್ದು, ಭವಿಷ್ಯದಲ್ಲಿ ‘100 ಸಂಖ್ಯೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತೇವೆ. ‘೧೧೨’ ಸಂಖ್ಯೆಗೆ ಡಯಲ್ ಮಾಡುವ ಕುರಿತು ಇಲಾಖೆ ಅರಿವನ್ನು ಮೂಡಿಸುತ್ತಿದೆ. ಆ ಸಂಖ್ಯೆಯನ್ನು ನಾವು ಎಲ್ಲಾ ಹೊಯ್ಸಳ ವಾಹನಗಳ ಮೇಲೂ ಪ್ರದರ್ಶಿಸಿದ್ದೇವೆ,” ಎನ್ನುತ್ತಾರೆ.

ಬೆಂಗಳೂರಿನ ಸಿಟಿಜನ್ಸ್ ಅಜೆಂಡಾದ ಸಂಚಾಲಕ ಸಂದೀಪ್ ಅನಿರುದ್ಧನ್ ಅವರು ಹೇಳುವಂತೆ ಅವರಂತೆ ಇನ್ನೂ ಅನೇಕರಿಗೆ ‘100’ ಸಂಖ್ಯೆಗೆ ಸಂಪರ್ಕ ಸಾಧ್ಯವಾಗಿಲ್ಲವಂತೆ. ‘೧೦೦ ಸಂಖ್ಯೆ ಜುಲೈ ಮೂರನೇ ವಾರದಿಂದಲೂ ಕೆಲಸ ನಿರ್ವಹಿಸುತ್ತಿಲ್ಲ. ಜುಲೈ 21ರಂದು ರಾತ್ರಿ ನನಗೆ ಒಂದು ಶಬ್ದ ಕೇಳಿಸಿತು. ಆಗ ನಾನು ‘100’ಕ್ಕೆ ಡಯಲ್ ಮಾಡಲು ಪ್ರಯತ್ನಿಸಿದೆ. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ಅದು ‘ನಾಟ್ ವ್ಯಾಲಿಡ್’ ಎಂದು ಬರುತಿತ್ತು. ನನಗೂ ಸಹ ‘112’ರ ಬಗ್ಗೆ ಅರಿವಿರಲಿಲ್ಲ. ಒಂದು ವೇಳೆ 100 ಸಂಖ್ಯೆ ‘112’ಗೆ ಬದಲಾಗಿದ್ದರೂ ಸಹ ಪೊಲೀಸರು ಇಷ್ಟು ಬೇಗ ಹಳೆಯ ಸಂಖ್ಯೆಯನ್ನು ನಿಲ್ಲಿಸಬಾರದಿತ್ತು. ನಾನು ಈ ಕುರಿತಂತೆ ಸುತ್ತಮುತ್ತಲಿನ ಜನರಲ್ಲಿ ವಿಚಾರಿಸಿದೆ. ಆದರೆ ಯಾರಿಗೂ ಸಹ 112 ಬಗ್ಗೆ ಗೊತಿಲ್ಲ,” ಎನ್ನುತ್ತಾರೆ.

ಇದಕ್ಕೆ ಬದಲಾಗಿ ಪೊಲೀಸರು ‘100’ಗೆ ಬರುವ ಕರೆಗಳನ್ನು ‘೧೧೨’ಕ್ಕೆ ಡೈವರ್ಟ್ ಮಾಡಬಹುದಿತ್ತು. “ನಾವು ದಶಕಗಳಿಂದಲೂ ‘100’ ಸಂಖ್ಯೆಯನ್ನೇ ಬಳಸಿ ಅಭ್ಯಾಸವಾಗಿದೆ. ಇಂತಹ ವಿಚಾರಗಳಲ್ಲಿ ಬದಲಾವಣೆ ತರುವುದಕ್ಕೆ ಮುಂಚೆ ಒಮ್ಮೆ ಸಾರ್ವಜನಿಕರನ್ನು ಸಂಪರ್ಕಿಸಬೇಕು. ‘112’ ಇನ್ನೂ ಸಾರ್ವಜನಿಕರ ಮನಸ್ಸಿನಲ್ಲಿ ನೋಂದಣಿ ಆಗಿಲ್ಲ. ‘100’ರಂತೆ ‘112’ ಎನ್ನುವ ಸಂಖ್ಯೆ ಅಷ್ಟು ಸಲೀಸಾಗಿ ಮೆದುಳುಗಳಲ್ಲಿ ನುಸುಳುವುದಿಲ್ಲ,” ಎನ್ನುವುದು ಅವರ ಅಭಿಪ್ರಾಯ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: very -minor- issue – city- police-112> 100.