ಮಂಡ್ಯ,ಮೇ,24,2025 (www.justkannada.in): ನಾಗಮಂಗಲವು ಐತಿಹಾಸಿಕವಾಗಿ ಪ್ರಸಿದ್ಧವಾಗಿದ್ದು, ದೇವಾಲಯಗಳ ನಾಡೆಂದು ಪ್ರಖ್ಯಾತಿಯಾಗಿದೆ. ಈ ಭಾಗದಲ್ಲಿ ಗಂಗರ ನಾಲ್ಕು, ಹೊಯ್ಸಳರ 46, ವಿಜಯನಗರ ಅರಸರ 19, ಮೈಸೂರು ದೊರೆಗಳ ಮೂರು ಶಾಸನಗಳು ಹಾಗೂ ಇತರೆ 113 ಶಾಸನಗಳು ದೊರೆತಿದ್ದು ಸುಮಾರು 185 ಶಾಸನಗಳನ್ನು ಪತ್ತೆಹಚ್ಚಲಾಗಿದೆ.
ಕೆಆರ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಣ್ ಕುಮಾರ್. ಅರ್ ಅವರು “ಮಂಡ್ಯ ಜಿಲ್ಲೆಯ ಸ್ಮಾರಕ ಶಿಲ್ಪಗಳ”ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಮಹಾರಾಜ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರತತ್ವ ಶಾಸ್ತ್ರ ಪ್ರಾಧ್ಯಾಪಕ ಡಾ. ಸಿ ಲೋಕೇಶ್ ಇವರ ಮಾರ್ಗದರ್ಶನದಲ್ಲಿ ನಾಗಮಂಗಲ ತಾಲೂಕಿನ ಕ್ಷೇತ್ರ ಕಾರ್ಯದಲ್ಲಿ ಮಹಮ್ಮದ್ ಕಲೀಮ್ ಉಲ್ಲಾ ಅವರ ಅನುಭವ ಮಾಹಿತಿಯೊಂದಿಗೆ ಸಂಶೋಧನೆಯಲ್ಲಿ ತೊಡಗಿದ್ದಾಗ ನಾಲ್ಕು ಅಪ್ರಕಟಿತ ವೀರಗಲ್ಲು ಶಾಸನಗಳು ಹಾಗೂ ಎರಡು ಇತರೆ ಶಾಸನಗಳು ದೊರೆತಿವೆ.
ಸಂತೆ ಬಾಚಳ್ಳಿ ಡಾ. ನಂಜುಂಡಸ್ವಾಮಿಯವರು “ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ” ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಪ್ರಕಟ ಮಾಡಿದ್ದು ಈ ಶಾಸನಗಳನ್ನ ಓದಲು ಸಂಪೂರ್ಣವಾಗಿ ಸಹಕರಿಸಿದ್ದಾರೆ. ನಾಲ್ಕು ವೀರಗಲ್ಲು ಶಾಸನಗಳಲ್ಲಿ ಎರಡು ವೀರಗಲ್ಲು ಶಾಸನಗಳು ಗಂಗರ ಕಾಲದ್ದಾಗಿದ್ದು ಇನ್ನೆರಡು ಹೊಯ್ಸಳರ ಕಾಲಕ್ಕೆ ಸೇರಿದೆ. ಇತರೆ ಶಾಸನಗಳಲ್ಲಿ ಒಂದು ಹೊಯ್ಸಳರ ಕಾಲದ ತಮಿಳು ಧಾನಶಾಸನವಾಗಿದೆ. ಇನ್ನೊಂದು ಶಾಸನ ವಿಜಯನಗರ ಕಾಲದ ಶಾಸನವಾಗಿದೆ.
ಒಂದನೇ ವೀರಗಲ್ಲು ಶಾಸನವು ನಾಗಮಂಗಲ ಕಸಬಾಕೆ ಸೇರಿದ ಬ್ಯಾಡರಹಳ್ಳಿಯ ಸುರೇಶ್ ಅವರ ಹೊಲದಲ್ಲಿ ದೊರೆತ ಮೂರು ಹಂತದ ತುರುಗೋಳ್ ಶಾಸನ ವಾಗಿದ್ದು, ಸುಮಾರು ಉದ್ದ 5.10 ಅಡಿ ಅಗಲ- ನಾಲ್ಕು ಅಡಿ ದಪ್ಪ-15cm ಇದೆ. ಈ ಶಾಸನದ ಸಾರವು 10ನೇ ಶತಮಾನದ ಗಂಗರ ಶಾಸನ ಸತ್ಯ ವಾಕ್ಯ (ರಾಚ ಮಲ್ಲ) ಆಳ್ವಿಕೆಕಾಲ (ಬಹುಶ: 974-985 )ಶ್ರೀ ಮಾರ ಕುಡಿಯಣ್ಣನು ತುರುಗೋಳಿನಲ್ಲಿ ಕಾದಿ ತುರುಗಳು ಹಿಂದಿರುಗಿಸಿ ಸತ್ತಿದ್ದಾನೆ. ಲಿಪಿಯಲ್ಲಿ ಪಾ ಅತಿಶೆ ಬಾ ಅತಿಶೆ ಪದಗಳಿದ್ದು ಇದರರ್ಥ ಯಾವುದು ಸ್ಥಳ ಇರಬಹುದು ಲಿಪಿ ಹತ್ತನೇ ಶತಮಾನದ ಗಂಗರ ಲಿಪಿ ಎಂದು ಹೇಳಬಹುದು.
ಇನ್ನೊಂದು ವಿರಗಲ್ಲು ಶಾಸನ ಹಾಲತಿ ಹೋಗುವ ದಾರಿಯ ರಸ್ತೆಯಲ್ಲಿ ಎಡಭಾಗದ ಗೌರಮ್ಮನ ಹೊಲದಲ್ಲಿ ದೊರೆತ ವೀರಗಲ್ಲು ಶಾಸನ ಆಗಿದ್ದು ಸುಮಾರು ಉದ್ದ 4.8 ಅಡಿ ಅಗಲ- 3.4 ಅಡಿ ದಪ್ಪ- 18cm ಇದೆ. ಇದು ವೀರರ ಗುಡಿಯಾಗಿದ್ದು ಮೇಲ್ಚಾವಣಿ ಮರಿದುಹೋಗಿದೆ. ಇದು ಸಹ ಮೂರಂತದ ವೀರಗಲ್ಲು ಶಾಸನವಾಗಿದ್ದು ಪ್ರಮುಖ ದಂಡನಾಯಕನ ವೀರಗಲ್ಲು ಶಾಸಲು ಆಗಿದೆ. ಲಿಪಿ ಮತ್ತು ವೀರಗಲ್ಲು ಲಕ್ಷಣಗಳ ಆಧಾರದ ಮೇಲೆ ಗಂಗರ ಕಾಲದ್ದು ಆಗಿದ್ದು ಕೆಲವು ಅಕ್ಷರಗಳು ಮಾತ್ರ ಉಳಿದಿದೆ. ಇನ್ನುಳಿದವು ಅಳಿಸಿವೆ ಕ್ರಿಸ್ತಶಕ 10ನೇ ಶತಮಾನ ಎಂದು ಹೇಳಬಹುದು.
ಮೂರನೇ ವೀರಗಲ್ಲು ಶಾಸನವು ಬೆಳ್ಳೂರು ಹೋಬಳಿಯ ನಾಲ್ಕು ಸಾಲುಗಳ ಶಾಸನ ಆಗಿದ್ದು ಕಾಡು ಅಂಕನಹಳ್ಳಿಯಲ್ಲಿ ದೊರೆತಿದೆ. ಇದು ಮೂರು ಹಂತದ ವೀರಗಲ್ಲಾಗಿದ್ದು ವೀರರ ಗುಡಿಯಾಗಿದೆ. ಸುಮಾರು ಉದ್ದ 5.2 ಅಡಿ ಅಗಲ-2.8 ಅಡಿ ದಪ್ಪ 1 ಅಡಿ ಇರುವ ಈ ಶಾಸನ ಪದ್ಯದ ರೂಪದಲ್ಲಿದ್ದು ‘ಬೀರಗಲ್ಲು’ಎಂಬ ಪದ ಓದಲು ಮೇಲ್ನೋಟಕ್ಕೆ ಕಾಣುತ್ತದೆ. ಲಿಪಿ ಆಧಾರದ ಮೇಲೆ ಹೊಯ್ಸಳರ ಕಾಲದ ಶಾಸನವಾಗಿದ್ದು ಪ್ರಮುಖ ದಂಡನಾಯಕನಿಗೆ ಸೇರಿದ ಶಾಸನವೆಂದು ಲಿಪಿಯಿಂದ ಹೇಳಬಹುದಾಗಿದೆ (11-12ನೇ ಶತಮಾನ ಎಂದು ಹೇಳಬಹುದು).
ಇದೇ ಊರಿನಲ್ಲಿ ಇನ್ನೊಂದು ಶಾಸನ ದೊರೆತಿದ್ದು ಕಾಳಿಂಗನ ಹಳ್ಳಿಗೆ ಹೋಗುವ ರಸ್ತೆ ಎಡ ಭಾಗದಲ್ಲಿ ದೊರೆತಿದೆ. ಇದು ಸುಮಾರು ಉದ್ದ 3.8 ಅಡಿ ಅಗಲ- 1.9 ಅಡಿ ದಪ್ಪ -15cm ಇದೆ. ಅದರ ಪಕ್ಕದಲ್ಲಿ ಎರಡು ವೀರಗಲ್ಲುಗಳಿವೆ. ಲಿಪಿಯ ಆಧಾರದ ಮೇಲೆ ಹೊಯ್ಸಳರ ಕಾಲದ ವೈಷ್ಣವ ಧರ್ಮದ ತಮಿಳು ಭಾಷೆಯ ದಾರಾ ಶಾಸನವಾಗಿದೆ. ಶಾಸನ ಕಲ್ಲಿನಲ್ಲಿ ಸೂರ್ಯ, ಚಂದ್ರ, ಶಂಖ ಚಕ್ರ ಇದ್ದು ಹದಿನಾಲ್ಕು ಸಾಲುಗಳಿಂದ ಕೂಡಿದೆ. ಶಾಸನದ ಪಡಿ ಹೆಚ್ಚು ತೆಗೆಯಬೇಕಾಗಿರುವುದರಿಂದ ಶಾಸನ ಸಂಪೂರ್ಣವಾಗಿ ಓದಿದ ನಂತರ ಮಾಹಿತಿ ತಿಳಿಸಲಾಗುವುದು(11-12ನೇ ಶತಮಾನ ಎಂದು ಹೇಳಬಹುದು) ಎಂದು ಸಂಶೋಧಕರು ತಿಳಿಸಿದ್ದಾರೆ.
5ನೇ ಶಾಸನವೂ ಬೆಳ್ಳೂರು ಹೋಬಳಿ ಕತ್ರಿಗುಪ್ಪೆ ಗ್ರಾಮದಲ್ಲಿ ವಿಜಯಲಕ್ಷ್ಮಿ ರವರದಲ್ಲಿ ವಿಜಯನಗರ ಕಾಲದ ಶಾಸನ ದೊರೆತಿದ್ದು ಶಾಸನ ಕಲ್ಲಿನ ಅರ್ಧ ಭಾಗ ಮಣ್ಣಿನಲ್ಲಿ ಹುದುಗಿದೆ. ಅರ್ಧ ಭಾಗದ ಶಾಸನ ಸಾಲು ದೊರೆತಿದ್ದು ಎಪಿ ಆಧಾರದ ಮೇಲೆ ವಿಜಯನಗರ ಕಾಲಕ್ಕೆ ಸೇರಿದ್ದು ಎಂದು ಹೇಳಬಹುದು. ಪಡಿಯಚ್ಚು ತೆಗೆದ ಮೇಲೆ ವಿವರಿಸಲಾಗುವುದು. (ಕಾಲ 14ನೇ ಶತಮಾನ ಎಂದು ಹೇಳಬಹುದು)
ನಾಲ್ಕನೇ ವೀರಗಲ್ಲು ಶಾಸನ ಬೀರೇಶ್ವರ ಹಳ್ಳಿಯಲ್ಲಿ ದೊರೆತಿದ್ದು ಮಹಮ್ಮದ್ ಕಲೀಮ್ ಉಲ್ಲಾ ಅವರು ಇದನ್ನ ಪತ್ತೆ ಹಚ್ಚಿದ್ದಾರೆ. ಇವರು ನಿವೃತ್ತ ಶಿಕ್ಷಕರಾಗಿ ಹವ್ಯಾಸಿ ಸಂಶೋಧಕರಾಗಿ ಸ್ಮಾರಕ ಶಿಲ್ಪಗಳ ಉಳಿವಿಗೆ ಸದಾ ಶ್ರಮಿಸುತ್ತ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ ಚರಂಡಿಯಲ್ಲಿ ಬಿದ್ದಿದ್ದ ವೀರಗಲ್ಲು ಶಾಸ್ತ್ರವನ್ನು ಸಂರಕ್ಷಿಸಿ ವೀರಭದ್ರ ಸ್ವಾಮಿ ದೇವಾಲಯದ ಪಕ್ಕದಲ್ಲಿ ಇರಿಸಿದ್ದು ಲಿಪಿ ಮತ್ತು ಬಳಸಿರುವ ಕಲ್ಲಿನ ಆಧಾರದ ಮೇಲೆ ಹೊಯ್ಸಳರ ಕಾಲಕ್ಕೆ ಸೇರಿದೆ. ಲಿಪಿಯ ಕೆಲವು ಅಕ್ಷರಗಳು ಪತ್ತೆಯಾಗಿದ್ದು ಇನ್ನುಳಿದವು ಸಂಪೂರ್ಣವಾಗಿ ಅಳಿಸಿವೆ ಶಾಸನ ಓದಲು ಸಾಧ್ಯವಿಲ್ಲ ಆದರೂ ಶಾಸನೊಕ್ತ ವೀರಗಲ್ಲು ಎಂದು ಹೇಳಬಹುದು. ಮೂರು ಹಂತದ ವೀರಗಲ್ಲಾಗಿದ್ದು ಶಿಲ್ಪಕಲಾ ದೃಷ್ಟಿಯಿಂದ ಸುಂದರವಾಗಿದ್ದು, ಯುದ್ಧದ ಹೋರಾಟದ ದೃಶ್ಯ ಸ್ವರ್ಗದ ಕಲ್ಪನೆ ಶಿವ ಸಾನಿಧ್ಯವನ್ನು ಚಿತ್ರಿಸಲಾಗಿದೆ. (11-12ನೇ ಶತಮಾನ ಎಂದು ಹೇಳಬಹುದು)
Key words: Ancient, Veergallu inscriptions, discovered, Mandya