ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನಶಿಲ್ಪ ಪತ್ತೆ.

ಮಂಡ್ಯ,ಜನವರಿ,25,2023(www.justkannada.in): ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಕೇಂದ್ರದಿಂದ ಪಶ್ಚಿಮ ದಿಕ್ಕಿಗೆ ಸುಮಾರು ಆರು ಕಿ.ಮೀ. ದೂರದಲ್ಲಿ, ಚಾಕಶೆಟ್ಟಿಹಳ್ಳಿ ಎಂಬ ಗ್ರಾಮವಿದೆ. ಶಾಸನಗಳಲ್ಲಿ ದಾಸರ ಸೆಟ್ಟಿಹಳ್ಳಿ ಎಂದು ಉಲ್ಲೇಖಗೊಂಡಿರುವ ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಂಭುಲಿಂಗೇಶ್ವರ ದೇವಾಲಯವಿದೆ. ಈ ದೇವಾಲಯದ ಬಲಪಾರ್ಶ್ವದಲ್ಲಿ ಪೂರ್ವ ದಿಕ್ಕಿಗೆ ಮುಖಮಾಡಿ ನಿಲ್ಲಿಸಿರುವ ಹೊಯ್ಸಳರ ವೀರಬಲ್ಲಾಳನ ಕಾಲದ ವೀರಗಲ್ಲನ್ನು ಪತ್ತೆಹಚ್ಚಲಾಯಿತು. ಇದು ‘ಸೋಪುಗಲ್ಲಿನಲ್ಲಿ’ ಕೆತ್ತಲ್ಪಟ್ಟಿದ್ದು ಮೂರು ಹಂತಗಳಲ್ಲಿ ಶಿಲ್ಪಪಟ್ಟಿಕೆಗಳು ಹಾಗೂ ಅವುಗಳ ಮಧ್ಯದ ಎರಡು ಪಟ್ಟಿಕೆಯಲ್ಲಿ ಶಾಸನದ ಪಾಠಗಳನ್ನು ಒಳಗೊಂಡಿದೆ.

ಪುರಾತತ್ವಜ್ಞರಾದ ಪ್ರೊ.ರಂಗರಾಜು ಎನ್.ಎಸ್. ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಚಾಕಶೆಟ್ಟಿಹಳ್ಳಿ ಗ್ರಾಮಕ್ಕೆ ಕ್ಷೇತ್ರಕಾರ್ಯಾನ್ವೇಷಣೆ ಕೈಗೊಂಡ ಸಂದರ್ಭದಲ್ಲಿ ಈ ವಿಶೇಷವಾದ ವೀರಗಲ್ಲು ಕಂಡುಬಂದಿತು. ಇದರ ಅರ್ಧಭಾಗ ಭೂಮಿಯಲ್ಲಿ ಹುದುಗಿತ್ತು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೆಶಕರಾದ ಪೆÇ್ರ.ಎನ್.ಎಂ.ತಳವಾರ್ ಅವರ ನೇತೃತ್ವದಲ್ಲಿ ಕಛೇರಿ ಅಧೀಕ್ಷಕರಾದ ಲಿಂಗರಾಜು ಎಚ್. ಸಿ. ಹಿರಿಯ ಸಂಶೋಧಕ ಡಾ. ಶಶಿಧರ ಸಿ.ಎ. ಕಿರಿಯ ಸಂಶೋಧಕ ಡಾ.  ರಕ್ಷಿತ್ ಎ. ಪಿ. ಅವರನ್ನು ಒಳಗೊಂಡ ತಂಡವು ಸ್ಥಳೀಯ ಮುಖಂಡರಾದ ಜಯಶಂಕರಮೂರ್ತಿ, ಬಸಪ್ಪ ಅವರ ಅನುಮತಿ ಪಡೆದು ದಿನಾಂಕ: 06/01/2023ರಲ್ಲಿ ವೀರಗಲ್ಲು ಪೂರ್ಣ ಪ್ರಮಾಣದಲ್ಲಿ ಕಾಣುವಂತೆ ಭೂಮಿಯನ್ನು ಅಗೆದು ಹೊರತೆಗೆದು ಶಾಸನದ ಪಡಿಯಚ್ಚನ್ನು ತೆಗೆದುಕೊಳ್ಳಲಾಯಿತು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೆಶಕ ಪ್ರೊ.ಎನ್.ಎಂ.ತಳವಾರ್ ಅವರ ನೇತೃತ್ವದ ತಂಡದಲ್ಲಿ ಕಛೇರಿ ಅಧೀಕ್ಷಕ ಲಿಂಗರಾಜು ಎಚ್. ಸಿ., ಹಿರಿಯ ಸಂಶೋಧಕರಾದ ಡಾ.ಶಶಿಧರ ಸಿ.ಎ. ಕಿರಿಯ ಸಂಶೋಧಕರಾದ ಡಾ. ರಕ್ಷಿತ್ ಎ. ಪಿ. ಜಯಶಂಕರಮೂರ್ತಿ, ಶಿವಪ್ರಸಾದ್, ಕಾಂತರಾಜು.

ಸಾಮಾನ್ಯವಾಗಿ ವೀರಗಲ್ಲುಗಳು ಹೋರಾಟ ಮಾಡಿ ಮಡಿದ ವೀರರ ಸ್ಮರಣಾರ್ಥವಾಗಿ ನಿಲ್ಲಿಸಲ್ಪಟ್ಟಿರುತ್ತವೆ. ಮಹಾಸತಿ ಕಲ್ಲುಗಳು ಮಡಿದ ಪತಿಯನ್ನನುಸರಿಸಿ ಪತ್ನಿಯು ಸತಿಯಾಗಿರುವುದರ ಸ್ಮರಣಾರ್ಥ ನಿಲ್ಲಿಸಲ್ಪಟ್ಟಿರುತ್ತವೆ. ಆದರೆ ಪ್ರಸ್ತುತ ವೀರಗಲ್ಲು ತನ್ನ ಪತ್ನಿಯನ್ನು ಕೊಂದು ಪತಿಯು ಸಹ ಮಡಿದಿರುವುದರ ಸ್ಮರಣಾರ್ಥವಾಗಿ ನಿಲ್ಲಿಸಲ್ಪಟ್ಟಿದೆ. ಈ ರೀತಿಯ ಸ್ಮಾರಕ ಶಾಸನಶಿಲ್ಪಗಳು ಹೊಯ್ಸಳರ ಕಾಲದಲ್ಲಿಯೇ ಆಗಲಿ ಬೇರೆ ಯಾವುದೇ ರಾಜಮನೆತನಗಳ ಕಾಲದಲ್ಲಿ ಇದೂವರೆಗೆ ಕಂಡುಬಂದಿಲ್ಲ. ಜೊತೆಗೆ ಕರ್ನಾಟಕದಾದ್ಯಂತ ಹಲವಾರು ಹಳ್ಳಿಗಳಲ್ಲಿ ವೀರಗಲ್ಲುಗಳು ಮತ್ತು ಮಹಾಸತಿಕಲ್ಲುಗಳು ಕಂಡುಬರುತ್ತವೆ. ಆದರೆ “ಥಂನ್ನ ಹೆಂಡತಿಯನಿ¾Âದು”(ಚುಚ್ಚಿ ಕೊಂದು) ಪತಿಯು ಮರಣ ಹೊಂದಿರುವ ಶಾಸನ ಹಾಗೂ ಶಿಲ್ಪ ದೊರೆತಿರುವುದು ಇದೇ ಮೊದಲು. ಹಾಗಾಗಿ ಪ್ರಸ್ತುತ ವೀರಗಲ್ಲು ಶಾಸನಶಿಲ್ಪ ಬಹಳ ವಿಶೇಷವಾಗಿದೆ.

ಶಾಸನದ ಪಾಠ

ಮೊದಲನೇ ಪಟ್ಟಿಕೆ

  1. ಸ್ವಸ್ತಿ ಸಮಸ್ತ ಭುವನಾಶ್ರಯಂ ಶ್ರೀಪ್ರಿತ್ವಿವಲ್ಲಭಂ ಮಹಾರಾಜಾಧಿರಾಜ ಪ

೨.ರಮೇಸ್ವರಂ ದ್ವಾರಾವತಿಪುರವರಾದಿಸ್ವರಂ ಯಾದವ ಕುಳಾಂಬರ ದ್ಯುಮಣಿ    ಸಂಮ್ಯಕ್ತ ಚೂ

೩.ಡಾಮಣಿ ಮಲೆರಾಜರಾಜ ಮಲೆಪರೋಳು ಗಂಡ ಗಂಡರೋಳುಗಂಡ ಕದನ ಪ್ರಚಂಡ ಏಕಾಂಗ

೪. ವೀರ ಅಸಾಯಸೂರ ಸನಿವಾರ ಸಿದ್ಧಿ ಗಿರಿದುರ್ಗ್ಗಮಲ್ಲ ಚಲದಂಕರಾಮ ನಿಸ್ಸಂಕ ಮ

ಎರಡನೇ ಪಟ್ಟಿಕೆ

೫. ಲ್ಲ ಪ್ರತಾಪ ದಕ್ಷಿಣಚಕ್ರವರ್ತ್ತಿ ವೀರಬಲ್ಲಾಳ ದೇವರು ಪ್ರಿತ್ವಿರಾಜ್ಯಂಗೆಯ್ಯುತ್ತಿರೆ ಸಕವರಿಷ

೬. 1131 ವಿಭವ ಸಂವತ್ಸರ ಮಾಘ ಸುದ್ಧ ೧೧ದಂ ಬ್ರಿಹವಾರದಂ ದಾಸರ

೭. ಸೆಟ್ಟಿಹಳಿಯ ಸ್ತಾನಿಕ ವೈಶ್ಯಕುಲದ ರಾಮಜೀಯನ ಮಗ(ಂ) ಮಸಣಯ್ಯ ಥಂನ್ನ ಹೆಂ

೮. ಡತಿಯನಿಱಿದು ಸತಂಗೆ ಪರೋಕ್ಷ ವಿನೆಯಂ ಮಾಡಿ ಕಲ್ಲನಿರಿಸಿ ಕವಿಳಾಸಕೆ ಸಂದಂ

ವೀರಗಲ್ಲು ಶಿಲ್ಪದ ವಿಶೇಷತೆ

ಮಸಣಯ್ಯನು ತನ್ನ ಹೆಂಡತಿಯನ್ನು ಇರಿಯುವುದರ ಜೊತೆಗೆ ತಾನು ಇರಿದುಕೊಳ್ಳುತ್ತಿರುವ ದೃಶ್ಯ

ಶಾಸನದ ಸಾರಾಂಶ…

ಶಾಸನವು ಶುಭಸೂಚಕವಾದ ಸ್ವಸ್ತಿ ಎಂಬ ಪದದೊಂದಿಗೆ ಆರಂಭವಾಗಿದ್ದು, ಮೊದಲ ಪಟ್ಟಿಕೆಯಲ್ಲಿ ಹೊಯ್ಸಳ ದೊರೆಯಾದ ಎರಡನೇ ಬಲ್ಲಾಳನ ಬಿರುದುಗಳಾದ ಸಮಸ್ತ ಭುವನಾಶ್ರಯ, ಶ್ರೀಪೃಥ್ವಿವಲ್ಲಭ, ಮಹಾರಾಜಾಧಿರಾಜ, ಪರಮೇಶ್ವರ, ದ್ವಾರಾವತಿ ಪುರವರಾಧೀಶ್ವರ, ಯಾದವ ಕುಳಾಂಬರಮಣಿ, ಸಂಯುಕ್ತ ಚೂಡಾಮಣಿ, ಮಲೆರಾಜರಾಜ ಮಲೆಪರೊಳ್ ಗಂಡ, ಗಂಡರೊಳ್ ಗಂಡ, ಕದನ ಪ್ರಚಂಡ, ಏಕಾಂಗ ವೀರ, ಅಸಹಾಯ ಶೂರ, ಸನಿವಾರ ಸಿದ್ದಿ, ಗಿರಿದುರ್ಗಮಲ್ಲ, ಚಲದಂಕರಾಮ, ನಿಸ್ಸಂಕಮಲ್ಲ ಪ್ರತಾಪ, ದಕ್ಷಿಣ ಚಕ್ರವರ್ತಿ ಎಂಬ ಬಿರುದುಗಳನ್ನು ಹೊಂದಿದೆ.

ಎರಡನೇ ಶಾಸನ ಪಟ್ಟಿಕೆಯಲ್ಲಿ ಸಕವರುಷ 1131 ವಿಭವ ಸಂವತ್ಸರ ಮಾಘ ಶುದ್ಧ 11ರ (ಬ್ರಿಹವಾರ=ಬೃಹಸ್ಪತಿವಾರ) ಗುರುವಾರದಂದು (ಈ ದಿನಾಂಕವನ್ನು ಕ್ರಿಸ್ತ ಶಕೆಗೆ ಪರಿವರ್ತಿಸಿದಾಗ 1209 ಫೆಬ್ರವರಿ 17ಕ್ಕೆ ಸರಿ ಹೊಂದುತ್ತದೆ.) ದಾಸರ ಶೆಟ್ಟಿಹಳ್ಳಿಯ ಸ್ಥಾನಿಕನೂ, ವೈಶ್ಯರ(ವ್ಯಾಪಾರಿ) ಕುಲದವನೂ ಆದ ರಾಮಾಜೀಯ ಎಂಬುವನ ಮಗ ಮಸಣಯ್ಯನು ತನ್ನ ಹೆಂಡತಿಯನ್ನಿ¾Âದು(ಇರಿದು-ಚುಚ್ಚಿ) ಸತ್ತನು. ಮಸಣಯ್ಯ ಮತ್ತು ಈತನ ಹೆಂಡತಿಯು ಕೈಲಾಸವಾಸಿಯಾದ ಸ್ಮರಣಾರ್ಥವಾಗಿ ಈ ಕಲ್ಲನ್ನು ನಿಲ್ಲಿಸಲಾಗಿದೆ. ದಕ್ಷಿಣ ಭಾರತದಲ್ಲೆಡೆಯೂ ಸಾಮ್ರಾಜ್ಯ ವಿಸ್ತರಿಸಿದ್ದ ಹೊಯ್ಸಳ ದೊರೆ 2ನೇ ವೀರಬಲ್ಲಾಳನ ಕಾಲದಲ್ಲಿ ಈ ಶಾಸನ ಶಿಲ್ಪವು ಕೆತ್ತಲ್ಪಟ್ಟಿದೆ. (2ನೇ ವೀರಬಲ್ಲಾಳನ ಆಳ್ವಿಕೆಯ ಕಾಲ ಕ್ರಿ.ಶ. 1173 ರಿಂದ 1220)

ಶಾಸನ ಪಾಠದ ಅರ್ಧಭಾಗವು ಸಂಪೂರ್ಣವಾಗಿ ಹೊಯ್ಸಳ ದೊರೆ 2ನೇ ವೀರಬಲ್ಲಾಳನ ಬಿರುದಾವಳಿಗಳನ್ನು ಹೊಂದಿದ್ದು, ಉಳಿದರ್ಧ ಭಾಗದಲ್ಲಿ ಸತಿಯಾದ ವೀರ ಮಾಸ್ತಿ ಮತ್ತು ಆಕೆಯ ಗಂಡ ಮಸಣಯ್ಯ ಹಾಗೂ ಆತನ ತಂದೆಯಾದ ರಾಮಾಜೀಯನ ನಾಮಧೇಯಗಳನ್ನು ಉಲ್ಲೇಖಿಸಿದೆ. ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ದಾಸರ ಶೆಟ್ಟಿಹಳ್ಳಿಯು ಹೊಯ್ಸಳರ ಕಾಲದಲ್ಲಿ ಒಂದು ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಇದಕ್ಕೆ ಸ್ಥಾನಿಕ(ಸ್ಥಾನಿಕ=ಹೊಯ್ಸಳರ ಕಾಲದ ಆಡಳಿತದಲ್ಲಿ ಪ್ರಮುಖ ಹುದ್ದೆ) ನಾಗಿದ್ದವನು ಮಸಣಯ್ಯ. (ಈತನು ಎರಡನೇ ಬಲ್ಲಾಳನಿಗೆ ಗರುಡನೂ ಆಗಿದ್ದಿರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಅವನ ಎಡಗಾಲಿನಲ್ಲಿ ‘ಗಂಡಪೆಂಡಾರ’ವೆಂಬ ಆಭರಣ ಧರಿಸಿರುವುದು ಕಂಡುಬರುತ್ತದೆ.) ಈ ಮಸಣಯ್ಯನು ಯುದ್ಧದಲ್ಲಿ ಕಾದಾಡಿ ಮಾರಣಾಂತಿಕವಾಗಿ ಗಾಯಗೊಂಡು ಮರಣ ಹೊಂದುವುದು ಖಚಿತವಾದ ನಂತರ ಆತನ ಮೇಲಿನ ಪತಿ ಪ್ರೇಮದಿಂದ(ಪತಿಯನ್ನು ಅಗಲಿ ಇರಲಾರದೆ) ಈ ವೀರಪತ್ನಿ ಸಹ ಮಸಣಯ್ಯನ ಜೊತೆ ಮರಣಿಸಲು ಇಚ್ಛಿಸಿ ತನ್ನನ್ನು ತಾನು ಚುಚ್ಚಿಕೊಳ್ಳುವುದರ ಜೊತೆಗೆ ಗಂಡನಿಂದಲೂ ಚುಚ್ಚಿಸಿಕೊಂಡು ಮರಣ ಹೊಂದಿದ್ದಾಳೆ. ಇವರಿಬ್ಬರ ತ್ಯಾಗದ ಸ್ಮರಣಾರ್ಥವಾಗಿ ಪ್ರಸ್ತುತ ವೀರಗಲ್ಲನ್ನು ನಿಲ್ಲಿಸಲಾಗಿದೆ.

ವೀರಗಲ್ಲು ಶಿಲ್ಪದ ಸಾರಾಂಶ

ಕರ್ನಾಟಕದ ಇತರ ಪ್ರದೇಶಗಳಲ್ಲಿ ದೊರೆಯುವ ಸ್ಮಾರಕ ಶಿಲೆಗಳಿಗಿಂತ ಪ್ರಬುದ್ಧ ನಿರೂಪಣಾ ಶೈಲಿಯನ್ನು, ಜೀವಂತ ಭಾವಾಭಿವ್ಯಕ್ತಿಯನ್ನು ನಾವು ಹೊಯ್ಸಳರ ಕಾಲದ ಸ್ಮಾರಕ ಶಿಲೆಗಳ ಶಿಲ್ಪಗಳಲ್ಲಿ, ಶಿಲ್ಪವಿನ್ಯಾಸ ಕ್ರಮದಲ್ಲಿ ಗುರುತಿಸಬಹುದು. ಪ್ರಸ್ತುತ ಶಾಸನ ಶಿಲ್ಪವು ಸೋಪುಗಲ್ಲಿನದ್ದಾಗಿದ್ದು ಯಾವುದೇ ರೀತಿಯ ಭಗ್ನವಾಗಿಲ್ಲದೆ ಸ್ಪಷ್ಟವಾಗಿರುವುದು ಕಂಡುಬರುತ್ತದೆ. ಇದು 4 ಅಡಿ 10 ಇಂಚು ಉದ್ದ, 3 ಅಡಿ ಅಗಲ, 6.5 ಇಂಚು ದಪ್ಪವಿದ್ದು, ಇದು ಮೂರು ಹಂತಗಳಲ್ಲಿ ಶಿಲ್ಪಪಟ್ಟಿಕೆಗಳನ್ನು ಹೊಂದಿದೆ. ಈ ಶಿಲ್ಪ ಪಟ್ಟಿಕೆಗಳ ಮಧ್ಯ ಭಾಗದಲ್ಲಿ ಎಂಟು ಸಾಲುಗಳಲ್ಲಿ ಬರೆಯಲ್ಪಟ್ಟಿರುವ ಹೊಯ್ಸಳರ ಕಾಲದ ಕನ್ನಡ ಲಿಪಿಯ ಶಾಸನ ಪಾಠವಿದೆ.

ಮೊದಲ ಹಂತ

ಕೆಳಭಾಗದ ಮೊದಲ ಪಟ್ಟಿಕೆಯಲ್ಲಿ ಎದುರಾಳಿ ಸೈನ್ಯದ ಇಬ್ಬರು ವೀರರು ಭರ್ಜಿಯನ್ನು ಹಿಡಿದು ಚುಚ್ಚುವ ಯತ್ನದಲ್ಲಿದ್ದಾರೆ. ಅವರ ಜೊತೆ ಹೋರಾಡುತ್ತಿರುವ ವೀರ ಮಸಣಯ್ಯನು ಆಡಳಿತದ ಪ್ರಮುಖ ಹುದ್ದೆಯಲ್ಲಿದ್ದ ಕಾರಣ ಉಳಿದಿಬ್ಬರು ಯೋಧರಿಗಿಂತ ಈತನ ವಸ್ತ್ರವಿನ್ಯಾಸ ಆಭರಣಗಳು ವೈಭವಯುತವಾಗಿದೆ. ಜೊತೆಗೆ ಆತನ ಕೊರಳಲ್ಲಿ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ವಿಜಯಮಾಲೆ ಇದೆ. ಈತನು ತನ್ನ ಎರಡೂ ಕೈಗಳಲ್ಲಿ ಆಯುಧಗಳನ್ನು ಹಿಡಿದಿದ್ದು ಯುದ್ಧದಲ್ಲಿ ಹೋರಾಡುತ್ತಿದ್ದಾನೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಚಾಕುವನ್ನು ಹಿಡಿದಿರುವ ಈತನ ಕೈಗಳಲ್ಲಿ ಕೈಗಡಗ, ತೋಳ್ಬಂದಿ, ಸೊಂಟದಲ್ಲಿ ಕಠೀಹಾರ, ಕೊರಳಲ್ಲಿ ಕಂಠಿಹಾರ, ಕಿವಿಯಲ್ಲಿ ಅಗಲವಾದ ಕುಂಡಲಗಳಿವೆ. ತಲೆಯ ಕೂದಲನ್ನು ಮುಡಿ ಕಟ್ಟಲಾಗಿದೆ.

ಈ ಶಿಲ್ಪ ಸನ್ನಿವೇಶದ ಪಕ್ಕದಲ್ಲಿ ವೀರಗತ್ತಿಯನ್ನು ನಿಲ್ಲಿಸಿದ್ದು ಅದು ಅಧೋಮುಖವಾಗಿದೆ. ಇದು ವೀರನು ಅಸ್ತಂಗತ ಆಗುತ್ತಿರುವುದನ್ನು ಸೂಚಿಸುತ್ತಿದೆ. ಮತ್ತೊಂದು ಉಬ್ಬುಶಿಲ್ಪವು ಒಂದು ಕೊಠಡಿಯೊಳಗೆ ನಡೆಯುತ್ತಿರುವ ಸನ್ನಿವೇಶದ ಚಿತ್ರಣವನ್ನು ಹೇಳುತ್ತಿದೆ. ಅಲಂಕಾರಿಕ ಮಂಚದ ಮೇಲೆ ಹಾಸಿಗೆ ಇದ್ದು ಇದರ ಮೇಲ್ಭಾಗದಲ್ಲಿ ಸತಿಪತಿಯರಿಬ್ಬರು (ಪತಿಯ ಹೆಸರು ಮಸಣಯ್ಯ) ವೀರಾಸನ ಭಂಗಿಯಲ್ಲಿ ಕುಳಿತಿದ್ದಾರೆ. ಇವರ ಮೈಮೇಲೆ ಅಲಂಕಾರಿಕ ಆಭರಣಗಳಾದ ಕೈಗಡಗ, ತೋಳ್ಬಂದಿ, ಕಾಲ್ಗಡಗ, ಕೊರಳಲ್ಲಿ ಸರ, ಕಿವಿಯಲ್ಲಿ ಕುಂಡಲಗಳನ್ನು ಧರಿಸಿದ್ದಾರೆ. ಇವರ ಉಡುಪು ನರಿಗೆಯಿಂದ ಕೂಡಿವೆ.  ಸತಿಯು ಬಲಗೈಯಲ್ಲಿ ಬಾಕುವಿನಿಂದ ತನ್ನ ಹೊಟ್ಟೆಗೆ ಇರಿದುಕೊಳ್ಳುತ್ತಿದ್ದು, ಎಡಗೈಯನ್ನು ಮೇಲೆತ್ತಿ ಈಕೆಯ ಪತಿಯು ಈಕೆಗೆ ಮತ್ತೊಂದು ಬಾಕುವಿನಿಂದ ತಿವಿಯಲು ಅವಕಾಶ ಕಲ್ಪಿಸಿದ್ದಾಳೆ. ವೀರನು ತನ್ನ ಬಲಗೈಲಿರುವ ಚಾಕುವಿನಿಂದ ಈಕೆಗೆ ತಿವಿಯುತ್ತಿದ್ದಾನೆ. ಎಡಗೈಲಿರುವ ಬಾಕುವಿನಿಂದ ತನ್ನ ಹೊಟ್ಟೆಗೆ ಚುಚ್ಚಿಕೊಳ್ಳುತ್ತಿದ್ದಾನೆ. ಈ ಶಿಲ್ಪಪಟ್ಟಿಕೆಯನ್ನು ಗಮನಿಸಿದಾಗ ಇವರಿಬ್ಬರು ಪರಸ್ಪರರ ಇಚ್ಛೆಯಂತೆ ಆತ್ಮಾಹುತಿ ಮಾಡಿಕೊಳ್ಳುತ್ತಿರುವುದು ತಿಳಿದುಬರುತ್ತದೆ. ಇವರ ಮಂಚದ ಕೆಳಭಾಗದಲ್ಲಿ ನೀರಿನ ಗಿಂಡಿ ಇದೆ. ಜೊತೆಗೆ ಮಂಚದಿಂದ ಇಳಿಯಲು ಮತ್ತು ಹತ್ತಲು ಹಾಕಿರುವ ಪೀಠವಿದೆ. ವೀರಗಲ್ಲಿನ ಕೆಳಭಾಗದ ಪಟ್ಟಿಕೆಯಲ್ಲಿರುವ ಶಿಲ್ಪಗಳೆಲ್ಲವೂ ಸಹ ಚಲನ ಭಂಗಿಯಲ್ಲಿ ಕೆತ್ತಲ್ಪಟ್ಟಿದ್ದು ಪ್ರಸ್ತುತವಾಗಿ ಘಟನೆಗಳು ನಡೆಯುತ್ತಿರುವಂತೆ ಶಿಲ್ಪಿಸಲ್ಪಟ್ಟಿವೆ.

ಎರಡನೆಯ ಹಂತ

ಈ ಪಟ್ಟಿಕೆಯಲ್ಲಿ ಅಪ್ಸರೆಯರಿಬ್ಬರು ದಂಪತಿಗಳನ್ನು ನಭೋಮಂಡಲದಲ್ಲಿ ಕರೆದೊಯ್ಯುತ್ತಿರುವ ದೃಶ್ಯವಿದೆ. ಪಟ್ಟಿಕೆಯ ಮಧ್ಯಭಾಗದಲ್ಲಿ ಸೂಕ್ಷ್ಮ ಅಲಂಕರಣೆಗಳಿಂದ ಕೂಡಿದ ಮಂಟಪದ ಒಳಗೆ ಸರ್ವಾಲಂಕರಣಭೂಷಿತರಾಗಿರುವ ಪತಿ ಪತ್ನಿಯರಿಬ್ಬರು ಅಂಜಲೀಹಸ್ತರಾಗಿ(ಕೈಮುಗಿದು) ವೀರಾಸನ ಭಂಗಿಯಲ್ಲಿ ಕುಳಿತಿದ್ದಾರೆ. ಈ ಮಂಟಪದ ಎರಡೂ ಪಾರ್ಶ್ವದಲ್ಲಿ ಸೂಕ್ಷ್ಮ ಅಲಂಕಾರಿಕ ಆಭರಣಗಳನ್ನು ಧರಿಸಿರುವ ಅಪ್ಸರೆಯರು ತಮ್ಮ ಕೈಗಳಲ್ಲಿ ಕಮಲದ ಹೂವು ಹಾಗೂ ಚಾಮರಗಳನ್ನು ಹಿಡಿದು ಸಕಲ ಗೌರವ, ವೈಭವಗಳೊಂದಿಗೆ ವೀರ ದಂಪತಿಗಳನ್ನು ಕೈಲಾಸಕ್ಕೆ ಕರೆದೊಯ್ಯುತ್ತಿದ್ದಾರೆ.

ಮೂರನೇ ಹಂತ

ಈ ಹಂತವು ವೀರ ದಂಪತಿಗಳು ಶಿವನ ಕೈಲಾಸದಲ್ಲಿರುವ ದೃಶ್ಯಗಳನ್ನು ಹೊಂದಿದ್ದು ಪಟ್ಟಿಕೆಯ ಮಧ್ಯಭಾಗದಲ್ಲಿ ಶಿವಲಿಂಗವಿದೆ. ಶಿವಲಿಂಗದ ಮೇಲ್ಭಾಗದಲ್ಲಿ ಧಾರಾಪಾತ್ರೆಯಿದೆ. ಈ ಲಿಂಗದ ಬಲಪಾಶ್ರ್ವದಲ್ಲಿ ಜಟಾಧಾರಿಯಾದ ಯತಿಯು ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ. ಆತನು ಕೌಪೀನಧಾರಿಯಾಗಿದ್ದು ತನ್ನ ಬಲಗೈಯಲ್ಲಿ ಶಿವಲಿಂಗಕ್ಕೆ ಆರತಿ ಮಾಡುತ್ತಿದ್ದಾನೆ. ಎಡಗೈಯಲ್ಲಿ ಘಂಟೆ ಬಾರಿಸುತ್ತಿದ್ದು, ಘಂಟೆಯ ಹಿಡಿಕೆಯಲ್ಲಿ ಶಿವನ ಆಯುಧವಾದ ತ್ರಿಶೂಲದ ಹಿಡಿಕೆ ಇದೆ. ಯತಿಯ ಹಿಂಭಾಗದಲ್ಲಿ ವೀರನು ಪದ್ಮಾಸನದಲ್ಲಿ, ವೀರಸತಿಯು ವೀರಾಸನದಲ್ಲಿ(ಬಲಗಾಲನ್ನು ಇಳಿಬಿಟ್ಟು)  ಅಂಜಲೀಹಸ್ತರಾಗಿ ಕುಳಿತಿದ್ದಾರೆ. ಶಿವಲಿಂಗದ ಎಡಭಾಗದಲ್ಲಿ ಕೌಪೀನ ಧರಿಸಿರುವ ಮತ್ತೊಬ್ಬ ಜಟಾಧಾರಿಯಾದ ಯತಿ ಓಲಗ ನುಡಿಸುತ್ತಿದ್ದಾನೆ. ಈತನ ಪಕ್ಕದಲ್ಲಿ ಶಿವಲಿಂಗಕ್ಕೆ ಅಭಿಮುಖವಾಗಿ ನಂದಿಯು ಕುಳಿತಿದೆ. ಈ ನಂದಿಯ ಕೊರಳಲ್ಲಿ ಘಂಟಾಮಾಲೆ ಮತ್ತು ಗೆಜ್ಜೆಸರ, ಮೈಮೇಲೆ ಅಲಂಕಾರಿಕ ಆಭರಣಗಳಿವೆ. ಇದು ಕೈಲಾಸದಲ್ಲಿ ಶಿವೈಕ್ಯವಾದ ಸತಿಪತಿಗಳಿಬ್ಬರನ್ನು ತೋರಿಸುವ ಸನ್ನಿವೇಶದ ಜೊತೆಗೆ ಶಿವನಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಿರುವಂತೆ ಚಿತ್ರಿಸಲ್ಪಟ್ಟಿದೆ. ಇದೇ ಪಟ್ಟಿಕೆಯ ಮೇಲ್ಭಾಗದ ಎರಡೂ ಪಾರ್ಶ್ವಗಳಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಗಳಿದ್ದು, ಇವು ವೀರ ಸತಿಪತಿಗಳಿಬ್ಬರ ತ್ಯಾಗ, ಬಲಿದಾನ ಸೂರ್ಯ ಚಂದ್ರರಿರುವವರೆಗೂ ಶಾಶ್ವತವಾಗಿರುತ್ತದೆ ಎಂಬುದನ್ನು ವ್ಯಕ್ತಪಡಿಸುತ್ತಿವೆ. ಈ ಪಟ್ಟಿಕೆಯ ಮೇಲ್ಭಾಗದಲ್ಲಿ ಕೀರ್ತಿಮುಖದ ಕೆತ್ತನೆ ಇದ್ದು, ಇದು ವೀರ ಸತಿಪತಿಯರ ಕೀರ್ತಿ ಅಜರಾಮರ ಎಂಬುದನ್ನು ಸಾರುತ್ತಿದೆ.

ಒಟ್ಟಾರೆಯಾಗಿ ಪ್ರಸ್ತುತ ವೀರಗಲ್ಲು ಶಿಲ್ಪವು ಹೊಯ್ಸಳರ ಕಾಲದಲ್ಲಿ ಆತ್ಮಬಲಿ ಮಾಡಿಕೊಂಡು ಮಡಿದಿರುವ ಈ ವೀರ ದಂಪತಿಗಳ ತ್ಯಾಗ, ಬಲಿದಾನಗಳು ಕನ್ನಡ ನಾಡಿನವೀರರ ಮತ್ತು ಮಹಾಸತಿಯರ ಕಲಿತನವನ್ನು ನಿರೂಪಿಸುವುದರ ಜೊತೆಗೆ ಹೊಯ್ಸಳರ ಕಾಲದಲ್ಲಿದ್ದ ಶಿಲ್ಪಿಗಳ ಪ್ರತಿಭೆ, ಕಲಾಪ್ರೌಢಿಮೆ, ಮತ್ತು ಅಂದಿನ ಜನರ ಮನಸ್ಸಿನಲ್ಲಿದ್ದ ಕೈಲಾಸದ ಕಲ್ಪನೆಯನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಚಾಗಶೆಟ್ಟಿಹಳ್ಳಿಯ ಸ್ಥಳಪುರಾಣದ ಬಗ್ಗೆ ಕ್ರಿ. ಶ. 12ನೇ ಶತಮಾನಕ್ಕೂ ಮೊದಲು ದಾಸರ ಸೆಟ್ಟಿಹಳ್ಳಿ ಎಂದು ಕರೆಯಲ್ಪಟ್ಟಿದ್ದ ಈ ಹಳ್ಳಿಯು ಕಾಲಾಂತರದಲ್ಲಿ ಚಾಗಶೆಟ್ಟಿಹಳ್ಳಿ ಎಂದು ಬದಲಾಗಿದೆ. ಬಹುಶಃ ಹೊಯ್ಸಳರ ಕಾಲದ ಈ ದಂಪತಿಗಳ ತ್ಯಾಗ ಬಲಿದಾನದ ಕುರುಹಾಗಿ ಈ ಗ್ರಾಮಕ್ಕೆ (ಚಾಗ=ತ್ಯಾಗ, ಸೆಟ್ಟಿ=ಶೆಟ್ಟಿ) ಚಾಗಶೆಟ್ಟಿಹಳ್ಳಿ ಎಂದು ಹೆಸರು ಬಂದಿರಬಹುದು. 12ನೇ ಶತಮಾನದ ನಂತರ ತ್ಯಾಗ ಎಂಬ ಶಬ್ದವು ಅಪಭ್ರಂಶಗೊಂಡು ಚಾಕ ಆಗಿದೆ. ಸೆಟ್ಟಿ ಎಂಬ ಶಬ್ದ ಅಪಭ್ರಂಶಗೊಂಡು ಶೆಟ್ಟಿ ಆಗಿರಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ. ಪ್ರಸ್ತುತ ಗ್ರಾಮವು ಈಗ ಚಾಕಶೆಟ್ಟಿಹಳ್ಳಿ ಎಂದು ಕರೆಯಲ್ಪಡುತ್ತಿದೆ.

ಶಾಸನಸ್ಥ ಕಲ್ಲನ್ನು ಭೂಮಿಯಿಂದ ಹೊರ ತೆಗೆಯಲು ಸಹಕರಿಸಿದ ಗ್ರಾಮಸ್ಥರಾದ ಜಯಶಂಕರಮೂರ್ತಿ, ಬಸಪ್ಪ, ಕೃಷ್ಣಾಚಾರಿ, ಮಂಜು, ಶಿವಪ್ರಸಾದ್, ಕಾಂತರಾಜು ಅವರಿಗೆ ಮತ್ತು ಕ್ಷೇತ್ರಕಾರ್ಯ ಸಂದಂರ್ಭದಲ್ಲಿ ಸಹಕರಿಸಿದ ಪಾಂಡವಪುರದ ನಮ್ಮ ಟೀ ಬ್ರೇಕ್ ಅಂಗಡಿಯ ಮಾಲೀಕರಾದ ರಮೇಶ್ ಅವರಿಗೆ ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಮತ್ತು ಅದರ ಅಂಗ ಸಂಸ್ಥೆಯಾದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕೃತಜ್ಞತೆಗಳನ್ನು ಸಲ್ಲಿಸಿದೆ.

Key words: Veeragallu – Detected-inscription – Hoysala- period-mandya