‘ವನಸಿರಿ’ ಕಾರ್ಯಕ್ರಮ ಪ್ರಶಂಸನೀಯ- ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಜುಲೈ 13,2022(www.justkannada.in): ಸ್ವಂತ ಜಮೀನಿನಲ್ಲಿ ಪ್ರತಿ ವರ್ಷ ಸಸಿಗಳನ್ನು ಬೆಳೆಸಿ ಅವುಗಳನ್ನು ಮೈಸೂರಿನ ಜನತೆಗೆ ನೀಡುವ ಕಾರ್ಯವನ್ನು ರಾಜೀವ್ ಅವರು ಮಾಡುತ್ತಾ ಬಂದಿದ್ದಾರೆ. ಇದೊಂದು ಅತ್ಯುತ್ತಮ ಕಾರ್ಯ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 25 ಸಾವಿರ ಸಸಿ ನೆಡುವ ‘ವನಸಿರಿ’ ಎಂಬ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಇಲಾಖೆ ವತಿಯಿಂದಲೂ ಸಸಿಗಳ ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಎರಡು ವರ್ಷದ ಹಿಂದೆ ಚಾಮುಂಡಿಬೆಟ್ಟದ ಸುತ್ತ 2 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅರಣ್ಯ ಇಲಾಖೆಯವರು 40 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ ಎಂದು ಹೇಳಿದರು.

ರಾಜೀವ್ ಅವರು ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡುವುದರ ಜೊತೆಗೆ ಪರಿಸರ, ಸ್ವಚ್ಛತೆ ಬಗ್ಗೆ ವಿಶೇಷ ಗಮನ ನೀಡಿದ್ದಾರೆ. ಮೈಸೂರಿನ ಸುತ್ತಮುತ್ತ ಗಿಡ ನೆಡುವುದರ ಜೊತೆಗೆ ಪೋಷಣೆ ಕೂಡ ಮಾಡುತ್ತಿದ್ದಾರೆ. ಜಿಲ್ಲಾಡಳಿತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೂಡ ರಾಜೀವ್ ಅವರ ಕಾರ್ಯಕ್ಕೆ ಕೈ ಜೋಡಿಸಿ ಮೈಸೂರಿನ ಪರಿಸರ, ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿದೆ ಎಂದರು.

ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಿರುವುದನ್ನು ಇಡೀ ದೇಶವೇ ಸ್ವಾಗತಿಸಿದೆ. ಎಷ್ಟರಮಟ್ಟಿಗೆ ಎಂದರೆ ನಾವೇ ರಾಜ್ಯಸಭೆಗೆ ಆಯ್ಕೆಯಾದ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದೆ. ಸುತ್ತೂರು ಶ್ರೀಗಳು ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ್ದರು. ಮಠದ ಕಾರ್ಯಕ್ಕೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಕೂಡ ಶ್ಲಾಘಿಸಿದರು. ರಾಜೀವ್ ಅವರ ಕಾರ್ಯ ಇತರರಿಗೂ ಮಾದರಿಯಾಗಲಿ. ಅವರ ಪರಿಸರ ಕಾಳಜಿ ಕಾರ್ಯ ಯಶಸ್ವಿಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ ವೀರೇಂದ್ರ ಹೆಗ್ಗಡೆ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ನಾಗೇಂದ್ರ, ಜಿ.ಟಿ.ದೇವೇಗೌಡ, ಮೂಡಾ ಅಧ್ಯಕ್ಷರಾದ ರಾಜೀವ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Key words: Vansiri-program-Minister- ST Somashekhar-KSOU