Sunday, August 23, 2026

BDA Apartments

Home Front Page ಲಸಿಕೆ ಕೊರತೆ ಇಲ್ಲ; ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಿ -ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್

ಲಸಿಕೆ ಕೊರತೆ ಇಲ್ಲ; ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಿ -ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್

ಬೆಂಗಳೂರು,ಜೂನ್,5,2021(www.justkannada.in): ಡೆಲ್ ಸಂಸ್ಥೆ, ಶಿಕ್ಷಣ ಫೌಂಡೇಶನ್ ಹಾಗೂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್ ಸಹಯೋಗದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ‌ ಹಾಕುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ‌ ಶನಿವಾರ ಚಾಲನೆ ನೀಡಿದರು.jk

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಸಿಎಂ ಅಶ್ವತ್ಥನಾರಾಯಣ ಅವರು ಖಾಸಗಿ ಸಂಸ್ಥೆಗಳ ಜತೆ ಸೇರಿಕೊಂಡು ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ವಿದ್ಯಾರ್ಥಿ ಸಮೂಹಕ್ಕೆ ನೀಡುತ್ತಿರುವುದು ಖುಷಿಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಕುರಿತು ಮಾತನಾಡಿದ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್, ಡೆಲ್‌ ಕಂಪನಿಯು ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಪ್ರಾಯೋಜಿಸಿದ್ದು, ಮೊದಲ ದಿನವೇ ಒಂದು ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಸರಕಾರಿ ಕಾಲೇಜುಗಳ 525 ವಿದ್ಯಾರ್ಥಿಗಳು, ಖಾಸಗಿ ಕಾಲೇಜುಗಳ 475 ವಿದ್ಯಾರ್ಥಿಗಳು ಲಸಿಕೆ ಪಡೆದರು ಎಂದು ಅವರು ತಿಳಿಸಿದರು.

ಲಸಿಕೆ ಬೇಡಿಕೆ ಹೆಚ್ಚುತ್ತಿರುವಂತೆ ಖಾಸಗಿ ಕಂಪನಿಗಳಿಂದ ಸುಮಾರು 3.5 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ಮುಖ್ಯಮಂತ್ರಿಯವರ ಸಲಹೆಗಾರರಾದ ಪ್ರಶಾಂತ್‌ ಪ್ರಕಾಶ್‌ ಅವರು ಕೊಡುಗೆಯಾಗಿ ಕೊಡಿಸುತ್ತಿದ್ದಾರೆ. ಇದನ್ನು ಅಗತ್ಯ ಇರುವವರಿಗೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಲಸಿಕೆ ನೀಡುವ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗುವುದು. ಕೇಂದ್ರ ಸಚಿವ ಸದಾನಂದಗೌಡರು ಹೇಳಿರುವಂತೆ ಈ ತಿಂಗಳು ದೇಶದಲ್ಲಿ 20 ಕೋಟಿ ಲಸಿಕೆ ತಯಾರಾಗುತ್ತಿದೆ. ಅದರ ನಂತರ ಈ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಅಗಸ್ಟ್‌ ಹೊತ್ತಿಗೆ 40 ಕೋಟಿ ಲಸಿಕೆ ತಯಾರಾಗಲಿದೆ. ಅದಾದ ಮೇಲೆ ನಮ್ಮ ದೇಶದಲ್ಲಿ ಲಸಿಕೆಯ ಬೇಡಿಕೆಗಿಂತ ಪೂರೈಕೆಯೇ ಜಾಸ್ತಿಯಾಗಲಿದೆ ಎಂದು ಅವರು ತಿಳಿಸಿದರು.

ಡಿಸೆಂಬರ್‌ ಹೊತ್ತಿಗೆ ಎಲ್ಲರಿಗೂ ಲಸಿಕೆ:

ಈವರೆಗೆ ಮೊದಲ ಡೋಸ್‌ ಪಡೆಯದ 45 ವಯೋಮಿತಿಯ ನಾಗರೀಕರು ಕೂಡಲೇ ಮುಂದೆ ಬಂದು ಲಸಿಕೆ ಪಡೆಯಬೇಕು. ಡಿಸೆಂಬರ್‌ ಒಳಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಹಾಕುವ ಸರಕಾರದ ಉದ್ದೇಶಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಇದರ ಜತೆಗೆ ಹೆಚ್ಚು ಜನರ ಸಂಪರ್ಕದಲ್ಲಿರುವ ಆದ್ಯತಾ ಗುಂಪು ಅಥವಾ ಮುಂಚೂಣಿ ಕಾರ್ಯಕರ್ತರಿಗೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಈ ಅಭಿಯಾನವೂ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಈ ವರ್ಗಕ್ಕೆ ಸೇರಿದ 17 ಲಕ್ಷಕ್ಕೂ ಹೆಚ್ಚು ಜನರಿಗೆ ರಾಜ್ಯ ವ್ಯಾಪಿ ಲಸಿಕೆ ಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಉಳಿದಂತೆ ಎಲ್ಲೆಡೆ ವೋಟರ್‌ ಐಡಿ, ಬಿಪಿಎಲ್‌ ಕಾರ್ಡ್‌ ಹೊಂದಿರುವವರನ್ನು ಹುಡುಕಿ ಲಸಿಕೆ ಕೊಡುವ ಕೆಲಸ ಆಗುತ್ತಿದೆ. ನಾವೇ ಅವರನ್ನು ತಲುಪಿ ಲಸಿಕೆ ನೀಡುವ ಪ್ರಯತ್ನ ನಡೆಯುತ್ತಿದೆ. ಮಹಾಮಾರಿಯನ್ನು ಎದುರಿಸಲು ಲಸಿಕೆ ಒಂದೇ ಪರಿಹಾರ ಎಂದರು ಡಿಸಿಎಂ ಅಶ್ವಥ್ ನಾರಾಯಣ್.

ಈ ಕಾರ್ಯಕ್ರಮದ ನಂತರ ಸದಾನಂದ ಗೌಡ ಮತ್ತು ಡಿಸಿಎಂ ಅವರು ಪ್ಯಾಲೇಸ್ ಗುಟ್ಟಹಳ್ಳಿಯ ವಿದ್ಯಾದಾಯಿನಿ ಶಾಲೆ ಹಾಗೂ ಮತ್ತಿಕೆರೆಯ ಜಯರಾಂ ಕೊಳೆಗೇರಿಯಲ್ಲಿ‌ ನಡೆಯುತ್ತಿದ್ದ ಲಸಿಕೆ ಕಾರ್ಯಕ್ರಮವನ್ನು ಪರಿಶೀಲಿಸಿದರು. ಸ್ಥಳೀಯರ ಜತೆ ಮಾತನಾಡಿದರು.

Key words: vaccine- no shortage-DCM -Dr.CN Ashwath narayan.