ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನ ತಪ್ಪಿಸಲು ಸಂಚಾರಿ ಪೊಲೀಸರಿಂದ ದೇಹಕ್ಕೆ-ಧರಿಸುವ ಕ್ಯಾಮೆರಾಗಳ ಬಳಕೆ.

ಬೆಂಗಳೂರು, ಡಿಸೆಂಬರ್ 31, 2021 (www.justkannada.in): ಮುಂದಿನ 90 ದಿನಗಳೊಳಗೆ ಬೆಂಗಳೂರು ನಗರದ ಸಂಚಾರ ವಿಭಾಗದ ಪೊಲೀಸರು ‘ಸ್ಮಾರ್ಟ್’ ಆಗಲಿದ್ದಾರೆ. ಉತ್ತಮ ಸಂಚಾರ ನಿರ್ವಹಣೆ ಹಾಗೂ ಸಂಚಾರಿ ಪೊಲೀಸರ ಹೊಸ ಬೀಟ್ ವ್ಯವಸ್ಥೆಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಲವು ವಿನೂತನ ತಾಂತ್ರಿಕ ಸಾಧನಗಳನ್ನು ಅನಾವರಣಗೊಳಿಸಿದರು.

ಮುಖ್ಯಮಂತ್ರಿಗಳು ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳಿಗೆ ದೇಹಕ್ಕೆ-ಧರಿಸುವ ಕ್ಯಾಮೆರಾಗಳನ್ನು ವಿತರಿಸುವುದರ ಜೊತೆಗೆ ಎಎನ್‌ಪಿಆರ್ ಕ್ಯಾಮೆರಾಗಳು, ಎಸ್‌ಎಂಎಸ್ ಚಲಾನ್ ವ್ಯವಸ್ಥೆ ಹಾಗೂ ನಾಗರಿಕರಿಗೆ ರಿಯಲ್-ಟೈಮ್ ಸಂಚಾರಿ ಮಾಹಿತಿಯನ್ನು ಒದಗಿಸುವ ಸಲುವಾಗಿ ಎರಡು ಮೊಬೈಲ್ ಫೋನ್ ಆ್ಯಪ್‌ಗಳನ್ನು ಉದ್ಘಾಟಿಸಿದರು.

ಸಂಚಾರಿ ಪೊಲೀಸರು ಇನ್ನು ಮುಂದೆ ಸಂಚಾರ ನಿಯಂತ್ರಣ ನಿಯಮಗಳನ್ನು ಜಾರಿಗೊಳಿಸಲು ೨೦೨೮ ದೇಹಕ್ಕೆ ಧರಿಸುವ ಕ್ಯಾಮೆರಾಗಳು, ೨೫೦ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ಎಎನ್‌ಪಿಆರ್) ಕ್ಯಾಮೆರಾಗಳು ಹಾಗೂ ೮೦ ಕೆಂಪು ದೀಪ ಉಲ್ಲಂಘನೆ ಪತ್ತೆಹಚ್ಚುವ (ಆರ್‌ಎಲ್‌ವಿಡಿ) ಕ್ಯಾಮೆರಾಗಳನ್ನು ಬಳಸಲಿದ್ದಾರೆ. ಈ ಡಿಜಿಟಲ್ ತಂತ್ರಜ್ಞಾನದ ಬಳಕೆಯು ಸಂಚಾರಿ ನಿಯಮಗಳನ್ನು ಜಾರಿಗೊಳಿಸುವಲ್ಲಿ ಪಾರದರ್ಶಕತೆಯನ್ನು ತರುವುದರ ಜೊತೆಗೆ, ಸಂಚಾರ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸರಿಗೆ ದೃಶ್ಯ ಸಾಕ್ಷ್ಯಾಧಾರಗಳನ್ನು ಕಲ್ಪಿಸಲಿದೆ.

ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು, ಈ ದೇಹಕ್ಕೆ-ಧರಿಸುವ ಕ್ಯಾಮೆರಾಗಳು ಹಾಗೂ ಇತರೆ ಉಪಕರಣಗಳ ಒಟ್ಟು ವೆಚ್ಚ ರೂ.೩೨ ಕೋಟಿ ಎಂದಿದ್ದಾರೆ. ಸಂಚಾರ ನಿಯಂತ್ರಣ ಕೊಠಡಿಗಳಲ್ಲಿ ಹೆಚ್ಚಿನ ತಾಂತ್ರಿಕ ಸುಧಾರಣೆಗಳನ್ನು ತಂದಾಗ ಮಾತ್ರ ಸ್ಮಾರ್ಟ್ ಸಂಚಾರಿ ನಿಯಮಗಳ ಅನುಷ್ಠಾನ ಸಾಧ್ಯ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ತಿಳಿಸಿದರು. ಜೊತೆಗೆ ರಿಯಲ್-ಟೈಂ ಅಪ್‌ ಡೇಟ್‌ ಗಳನ್ನು ಒದಗಿಸಲು ಸಂಚಾರ ನಿರ್ವಹಣಾ ಕೇಂದ್ರ, ಸಂಚಾರ ಪೊಲೀಸ್ ಹೆಡ್‌ಕ್ವಾಟರ್ಸ್ ಗಳನ್ನು ಬಲಪಡಿಸುವುದಾಗಿಯೂ ತಿಳಿಸಿದರು.

ಬೆಂಗಳೂರು ನಗರದಲ್ಲಿರುವ ರಸ್ತೆಗಳು ಎಷ್ಟೇ ಬಲಿಷ್ಠವಾಗಿದ್ದರೂ ಸಹ ವಾಹನಗಳ ಅಧಿಕ ಒತ್ತಡವನ್ನು ತಡೆದುಕೊಳ್ಳುವಷ್ಟು ಸುಸ್ಥಿರತೆಯನ್ನು ಹೊಂದಿಲ್ಲ ಎಂದರು. “ಪ್ರತಿ ದಿನ ಬೆಂಗಳೂರಿನ ರಸ್ತೆಗಳಲ್ಲಿ ೩,೦೦೦ ದ್ವಿಚಕ್ರವಾಹನಗಳು ಹಾಗೂ ೫,೦೦೦ ದೊಡ್ಡ ವಾಹನಗಳು ಸಂಚರಿಸುತ್ತವೆ. ಇತರೆ ನಗರಗಳಿಂದ ಹೆವಿಡ್ಯೂಟಿ ವಾಹನಗಳೂ ಸಹ ಸಂಚರಿಸುತ್ತಿರುತ್ತವೆ. ದಿನನಿತ್ಯದ ಉಪಯೋಗಕ್ಕಾಗಿ ಅನೇಕ ದೊಡ್ಡ ಟ್ರಕ್‌ ಗಳು ಸಹ ದಿನನಿತ್ಯ ಸಂಚರಿಸುತ್ತವೆ. ನಾವು ಹೆವಿಡ್ಯೂಟ್ ವಾಹನಗಳು ಸಂಚರಿಸುವಂತಹ ೧೨ ರಸ್ತೆಗಳನ್ನು ಗುರುತಿಸಿದ್ದೇವೆ ಹಾಗೂ ಅವುಗಳನ್ನು ತಡೆರಹಿತ ಸಿಗ್ನಲ್ ವ್ಯವಸ್ಥೆ ಇರುವಂತಹ ಅತ್ಯುತ್ತಮ ಗುಣಮಟ್ಟದ ರಸ್ತೆಗಳನ್ನಾಗಿ ಪರಿವರ್ತಿಸಲಿದ್ದು, ಸುಗಮ ಸಂಚಾರ ಹರಿವಿಗಾಗಿ ಇತರೆ ಸೌಲಭ್ಯಗಳನ್ನೂ ಕಲ್ಪಿಸಲಿದ್ದೇವೆ,” ಎಂದು ವಿವರಿಸಿದರು.

ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಗರ ಸಂಚಾರಿ ಪೊಲೀಸ್ ಮುಖ್ಯಸ್ಥರಾದ ಬಿ.ಆರ್. ರವಿಕಾಂತೇಗೌಡ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಉಪಸ್ಥಿತರಿದ್ದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Use -body-worn -cameras – Bangalore traffic police – avoid – traffic violations.