ಯುಪಿಎಸ್ ಪರೀಕ್ಷೆಗೆ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸ್ಮಾರ್ಟ್ ಓದು ಅಗತ್ಯ- ಕಿರಣ್ ಕಾಮ್ಟೆ

ಮೈಸೂರು,ಮಾರ್ಚ್,27,2026 (www.justkannada.in):  ಯುಪಿಎಸ್ ಪರೀಕ್ಷೆ ಭೇದಿಸುವುದು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸ್ಮಾರ್ಟ್ ಓದು ಅಗತ್ಯ ಎಂದು ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶದ 53ನೇ ರ್ಯಾಂಕ್ ಪಡೆದು ಕರ್ನಾಟಕದ ಟಾಪರ್ ಆಗಿ ಐಎಎಸ್‌ ಗೆ ಆಯ್ಕೆಯಾಗಿರುವ ಕಿರಣ್ ಕಾಮ್ಟೆ ಅವರು ಯುವ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಮತ್ತು ಕೆಎಎಸ್ ತರಬೇತಿ ಶಿಬಿರದ ಶಿಬಿರಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಯುಪಿಎಸ್ಸಿ ಪ್ರಯಾಣದ ಅನುಭವವನ್ನು ಹಂಚಿಕೊಂಡು, ಈ ಪರೀಕ್ಷೆ ಅತ್ಯಂತ ಕಠಿಣವಾದದ್ದು. ಆದರೆ ಅಸಾಧ್ಯವಲ್ಲ. ಸರಿಯಾದ ಯೋಜನೆ. ತಂತ್ರ ಹಾಗೂ ನಿರಂತರ ಪರಿಶ್ರಮ ಇದ್ದರೆ ಯಾರಾದರೂ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

2020ರಿಂದ ಯುಪಿಎಸ್ಸಿ ಸಿದ್ಧತೆ ಆರಂಭಿಸಿದ್ದ ಅವರು, ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲವಾದರೂ ಹಿಮ್ಮೆಟ್ಟದೇ ಮುಂದುವರಿದದ್ದು ತಮ್ಮ ಯಶಸ್ಸಿಗೆ ಕಾರಣವಾಯಿತು ಎಂದು ತಿಳಿಸಿದರು. ಮೂರನೇ ಪ್ರಯತ್ನದಲ್ಲಿ ಪ್ರಿಲಿಮ್ಸ್ ಉತ್ತೀರ್ಣರಾದುದನ್ನು “ಮೊದಲ ಸಣ್ಣ ಗೆಲುವು” ಎಂದು ಅವರು ವಿವರಿಸಿದರು. ಆದರೆ ಮೇನ್ಸ್ ಹಂತದಲ್ಲಿ ಎದುರಾದ ಸವಾಲುಗಳನ್ನು ಅವರು ಮನದಟ್ಟಾಗಿ ಹಂಚಿಕೊಂಡರು.

ಯುಪಿಎಸ್ಸಿ ಪರೀಕ್ಷೆಯ ರಚನೆ ಕುರಿತು ವಿವರಿಸಿದ ಅವರು, ಪ್ರತಿ ವರ್ಷ ಸುಮಾರು 12ರಿಂದ 13 ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಾರೆ. ಪ್ರಿಲಿಮ್ಸ್ ಹಂತದ ಬಳಿಕ ಕೇವಲ ಸಾವಿರಾರು ಅಭ್ಯರ್ಥಿಗಳು ಮಾತ್ರ ಮೇನ್ ಹಂತಕ್ಕೆ ಆಯ್ಕೆಯಾಗುತ್ತಾರೆ ಎಂದು ಹೇಳಿದರು. ಮೇನ್ಸ್‌ನಲ್ಲಿ ಒಟ್ಟು 9 ಪೇಪರ್‌ಗಳಿದ್ದು, 1750 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಇದಕ್ಕೆ 275 ಅಂಕಗಳ ಸಂದರ್ಶನವನ್ನು ಸೇರಿಸಿ 2025 ಅಂಕಗಳ ಆಧಾರದ ಮೇಲೆ ಅಂತಿಮ ರ್ಯಾಂಕ್ ನಿಗದಿಯಾಗುತ್ತದೆ ಎಂದು ವಿವರಿಸಿದರು.

ಮೇನ್ಸ್ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಅತ್ಯಂತ ಮುಖ್ಯವಾಗಿದ್ದು. ಪ್ರತಿ ಪ್ರಶ್ನೆಗೆ ಸೀಮಿತ ಸಮಯದಲ್ಲಿ ಸ್ಪಷ್ಟ ಉತ್ತರ ಬರೆಯುವ ಅಭ್ಯಾಸ ಅಗತ್ಯ ಎಂದು ಅವರು ಹೇಳಿದರು. ಒಂದು 10 ಅಂಕಗಳ ಪ್ರಶ್ನೆಯನ್ನು ಸುಮಾರು 7-8 ನಿಮಿಷಗಳಲ್ಲಿ ಬರೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂದರ್ಶನ ಹಂತದ ಕುರಿತು ಮಾತನಾಡಿದ ಅವರು, ಇದು 25ರಿಂದ 30 ನಿಮಿಷಗಳ ವ್ಯಕ್ತಿತ್ವ ಪರೀಕ್ಷೆ. ಅಭ್ಯರ್ಥಿಯ ಶಿಕ್ಷಣ, ಹವ್ಯಾಸಗಳು. ಸಾಧನೆಗಳು ಸೇರಿದಂತೆ ಡಿಎಎಫ್ ಆಧರಿಸಿ ಪ್ರಶ್ನೆಗಳು ಕೇಳಲಾಗುತ್ತದೆ” ಎಂದು ಹೇಳಿದರು. ಸಂದರ್ಶನದಲ್ಲಿ ಆತ್ಮವಿಶ್ವಾಸ ಹಾಗೂ ಸ್ಪಷ್ಟ ಅಭಿವ್ಯಕ್ತಿ ಮುಖ್ಯವಾಗುತ್ತದೆ ಎಂದರು.

ತಮ್ಮ ಅಂತಿಮ ಪ್ರಯತ್ನದಲ್ಲಿ ಸಂದರ್ಶನ ಹಂತ ತಲುಪಿದ ಅನುಭವವನ್ನು ಹಂಚಿಕೊಂಡ ಅವರು, ಫಲಿತಾಂಶದ ನಿರೀಕ್ಷೆಯ ಸಮಯವು ಜೀವನದ ಅತ್ಯಂತ ಒತ್ತಡದ ಘಟ್ಟವಾಗಿತ್ತು ಎಂದು ಹೇಳಿದರು. ಅಂತಿಮ ಫಲಿತಾಂಶವೇ ನನ್ನ ಹಲವು ವರ್ಷಗಳ ಪರಿಶ್ರಮವನ್ನು ನಿರ್ಧರಿಸುವ ಕ್ಷಣವಾಗಿತ್ತು” ಎಂದು ಹೇಳಿದರು.

ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಮಾನ ಅವಕಾಶಗಳಿದ್ದು, ನಿರಂತರ ಪರಿಶ್ರಮ ಮತ್ತು ಶಿಸ್ತು ಇದ್ದರೆ ಯಾರಾದರೂ ಯಶಸ್ಸು ಸಾಧಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಪರೀಕ್ಷೆ ಕಷ್ಟವಾದರೂ ಅಸಾಧ್ಯವಲ್ಲ. ನಿರಂತರ ಅಭ್ಯಾಸ, ಪುನರಾವರ್ತನೆ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಕೀಲಿಕೈ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಇದೇ ಸಂದರ್ಭದಲ್ಲಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಕಿರಣ್ ಕಮತೆ ಅವರನ್ನು ಅಭಿನಂದಿಸಿ ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.

Key words: UPSC exam, hard work, Kiran Komte, KSOU