ಮೈಸೂರು, ಆಗಸ್ಟ್,1,2025 (www.justkannada.in): ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಹೆಚ್ಚುವರಿ ಸಂಪರ್ಕ ಸೇವೆ ಕಲ್ಪಿಸಲು ಬದ್ಧವಾಗಿರುವ ಕೇಂದ್ರ ಸರ್ಕಾರ, ಅತಿ ಕೂಡಲೇ ಮೈಸೂರು-ಕುಶಾಲನಗರ ಹೆದ್ದಾರಿಯ ಎರಡನೇ ಹಂತದ ಯೋಜನೆ ಚಾಲನೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಂಸದ ಯದುವೀರ್, 2023ರ ಜುಲೈ 19ರಂದು ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು. ಎರಡನೇ ಪ್ಯಾಕೇಜ್‌ನಲ್ಲಿ 22.70 ಕಿಲೋಮೀಟರ್ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಈಗಾಗಲೇ 14.522 ಕಿಲೋ ಮೀಟರ್ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಾಕಿ ಉಳಿದಿರುವ 8.178 ಕಿಲೋಮೀಟರ್ ಅರಣ್ಯ ಭೂಮಿ ಸ್ವಾಧೀನಕ್ಕೆ ಅರಣ್ಯ ಇಲಾಖೆಯ ಅನುಮೋದನೆ ಅಗತ್ಯವಿದೆ ಎಂದು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಯೋಜನೆಯ ಘೋಷಣೆಗೆ ಸಚಿವಾಲಯ ಮುಂದಾಗಬೇಕು. ಕಾಲಮಿತಿಯಲ್ಲಿ ಅರಣ್ಯ ಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕೂಡಲೇ ಯೋಜನೆಯ ಆರಂಭದ ದಿನಾಂಕ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದೇವೆ . ಮನವಿ ಪತ್ರ ಸ್ವೀಕರಿಸಿದ ನಂತರ ನಿತಿನ್ ಗಡ್ಕರಿ ಅವರು ಸೂಕ್ತ ಕ್ರಮ ಕೈಗೊಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.
ಹುಲಿ ಕಾರಿಡಾರ್ ರಕ್ಷಣೆಗೆ ತನಿಖೆಗಾಗಿ ಮಾರ್ಗಸೂಚಿ
ಕರ್ನಾಟಕದಲ್ಲಿ ದೀರ್ಘಕಾಲಿನ ಹುಲಿ ಆವಾಸಸ್ಥಾನ ಬಲಪಡಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಸಂಸದ ಯದುವೀರ್ ಈ ಕುರಿತು ಕೇಂದ್ರ ಅರಣ್ಯ ಸಚಿವರಿಗೆ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಈ ಉತ್ತರ ನೀಡಲಾಗಿದೆ.
ಮಹದೇಶ್ವರ ಬೆಟ್ಟಗಳ ಅಭಯಾರಣ್ಯದಲ್ಲಿ ಕಾಡು ಪ್ರಾಣಿಗಳ ಸಾವು, ವನ್ಯಜೀವಿ, ವಿಧಿ ವಿಜ್ಞಾನ, ವಿಷಶಾಸ್ತ್ರದ ಬಗ್ಗೆ ಮಾರ್ಗಸೂಚಿಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಕೋರಲಾಗಿತ್ತು ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.
ಪ್ರಾಜೆಕ್ಟ್ ಟೈಗರ್ ಯೋಜನೆಯಡಿಯಲ್ಲಿ ಹುಲಿ ಮೀಸಲು ಪ್ರದೇಶಗಳಲ್ಲಿ ಆವಾಸಸ್ಥಾನ ರಕ್ಷಣೆ, ಜಾಗೃತಿ, ಸಮುದಾಯ ಜಾಗರೂಕತೆಗೆ ಹೆಚ್ಚಿನ ಹಣ ಒದಗಿಸಲಾಗುತ್ತಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ ಎಂದರು.
Key words: MP Yaduveer, Meet, Union Ministers, Nithin gadgari