ಬೆಂಗಳೂರು, ಅಕ್ಟೋಬರ್,17,2025 (www.justkannada.in): ಆಯುಷ್ಮಾನ್ ಯೋಜನೆಯ ಜೊತೆಗೆ ಇಎಸ್ ಐ ಯೋಜನೆಯನ್ನು ಜೋಡಿಸಲಾಗುತ್ತಿದೆ. ಆಗ ಇಎಸ್ ಐ ಯೋಜನೆಯಡಿ ಬರುವವರು ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪೀಣ್ಯ ಕೈಗಾರಿಕಾ ಸಂಘ ಆಯೋಜನೆ ಮಾಡಿದ್ದ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಇಎಸ್ ಐ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಸೇರಿದಂತೆ ಕೆಲವು ರೋಗಗಳಿಗೆ ಚಿಕಿತ್ಸೆ ಇಲ್ಲದೆ ಬೇರೆ ಕಡೆ ಕಳುಹಿಸಲಾಗುತ್ತಿದೆ. ಹಾಗಾಗಿ ಆಯುಷ್ಮಾನ್ ಯೋಜನೆಯ ಜೊತೆಗೆ ಇಎಸ್ ಐ ಯೋಜನೆಯನ್ನು ಒಗ್ಗೂಡಿಸಲಾಗುತ್ತಿದೆ. ಹಾಗೆ ಮಾಡಿದರೆ ಎಲ್ಲಾ ಕಾರ್ಮಿಕರು ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.
ಕಳೆದ ವರ್ಷ ಇಪಿಎಫ್ 7 ಕೋಟಿ ಹೊಸ ಸದಸ್ಯರು ನೋಂದಣಿಯಾಗಿದ್ದಾರೆ. ಪ್ರತಿ ವರ್ಷ ನೋಂದಣಿ ಏರಿಕೆ ಕಾಣಬೇಕು. ಭವಿಷ್ಯ ನಿಧಿ ಹೊಂದಿದ ಕಾರ್ಮಿಕರಿಗೆ ಇಪಿಎಫ್ ಎಟಿಎಂ ಕಾರ್ಡ್ ನೀಡುವ ಯೋಜನೆ ತರಲಾಗುತ್ತಿದೆ. ಎಟಿಎಂ ಮೂಲಕ ಕಾರ್ಮಿಕ ತನ್ನ ನಿಧಿಯಲ್ಲಿನ ಶೇ 75 ರಷ್ಟು ಹಣವನ್ನು ಅಗತ್ಯಗಳಿಗೆ ಬಳಸಿಕೊಳ್ಳಬಹುದು. ಶೇ.25 ರಷ್ಟು ಹಣ ಸದರಿ ಕಾರ್ಮಿಕನ ನಿಧಿಯಲ್ಲಿ ಇರಬೇಕಾಗುತ್ತದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಇಎಸ್ ಐ ಆಸ್ಪತ್ರೆಗಳಲ್ಲಿ ಗರಿಷ್ಠ 25,000 ರೂ ವೇತನ ಪಡೆಯುವ ಕಾರ್ಮಿಕರಿಗಷ್ಟೇ ಸೀಮಿತವಾಗಿದ್ದು ಅದರ ಮಿತಿಯನ್ನು ಹೆಚ್ಚಿಸುವ ಸಂಬಂಧ ಎರಡು ಸುತ್ತಿನ ಮಾತುಕತೆ ನಡೆದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ದೇಶದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆ ದುಪ್ಪಟ್ಟಾಗಿದೆ. ಬೇಡಿಕೆ ಇರುವ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶದಲ್ಲಿ ಕಾರ್ಮಿಕರಿಗೇನು ಕಡಿಮೆ ಇಲ್ಲ, ಆದರೆ ಕೌಶಲ್ಯ ತರಬೇತಿ ಪಡೆದ ಕಾರ್ಮಿಕರ ಅಗತ್ಯವಿದೆ. ತರಬೇತಿ ಹೊಂದಿದ ಕಾರ್ಮಿಕರಿಗೆ ವಿದೇಶಗಳಲ್ಲೂ ಬೇಡಿಕೆ. ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆಗೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ 23,000 ರೂ ಕನಿಷ್ಟ ವೇತನ ಮಾಡುವಂತೆ ಆದೇಶ ಹೊರಡಿಸಿದ್ದು, ಅದರ ವಿರುದ್ಧ ಪೀಣ್ಯ ಕೈಗಾರಿಕಾ ಸಂಘ ಹೈಕೋರ್ಟ್ ಮೊರೆ ಹೋಗಿ ಸದರಿ ಆದೇಶಕ್ಕೆ ತಡೆಯಾಜ್ಞೆ ತರಲಾಗಿದೆ. ಜೊತೆಗೆ 23 ಸಾವಿರ ರೂಪಾಯಿ ಕನಿಷ್ಠ ವೇತನ ಜಾರಿಯಾದಲ್ಲಿ ರಾಜ್ಯದಲ್ಲಿರುವ ಇಎಸ್ ಐ ಆಸ್ಪತ್ರೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ ದಾನಪ್ಪ ತಿಳಿಸಿದರು.
ಇಎಸ್ ಐ ಆಸ್ಪತ್ರೆಗಳಲ್ಲಿ ಗರಿಷ್ಟ 25,000 ರೂಪಾಯಿ ವೇತನ ಪಡೆಯುವ ಕಾರ್ಮಿಕ ವರ್ಗದವರಿಗೆ ಮಾತ್ರ ಲಭ್ಯವಾಗುತ್ತಿದ್ದು, ಈ ಸೌಲಭ್ಯವನ್ನು ಗರಿಷ್ಠ 35,000 ರೂ. ಗಳಿಗೆ ಏರಿಕೆ ಮಾಡಬೇಕೆಂದು ಕೇಂದ್ರ ಕಾರ್ಮಿಕ ಸಚಿವರಲ್ಲಿ ಮನವಿ ಸಲ್ಲಿಸಿದರು.
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ದಾನಪ್ಪ ಡಿ.ಪಿ, ಹಿರಿಯ ಉಪಾಧ್ಯಕ್ಷ ಪಾಟೀಲ್ ಡಿ.ಎಚ್, ಉಪಾದ್ಯಕ್ಷ ಚಂದ್ರಶೇಖರ್. ಎಂ, ಕಾರ್ಯದರ್ಶಿ ಬೀರಪ್ಪ. ಬಿ, ಜಂಟಿ ಕಾರ್ಯದರ್ಶಿ ತಿಮ್ಮಯ್ಯ. ಬಿ, ಖಜಾಂಚಿ ಎ.ಪಿ.ಸೆಲ್ವಕುಮಾರ್, ಜಂಟಿ ಖಜಾಂಚಿ ಎಂ.ಆರ್.ರಂಗಸ್ವಾಮಿ, ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ಅಸ್ರಣ್ಣ, ಬಿ.ಮುರುಳೀಕೃಷ್ಣ, ನಿಕಟಪೂರ್ವ ಕಾರ್ಯದರ್ಶಿ ಮಲ್ಲೇಶ್ ಗೌಡ ಸೇರಿದಂತೆ ನೂರಾರು ಕೈಗಾರಿಕೋದ್ಯಮಿಗಳು ಹಾಜರಿದ್ದರು.
Key words: ESI, scheme, Ayushman, Union Minister, Shobha Karandlaje