ಕೋಗಿಲು ಅತಿಕ್ರಮಣದಾರರಿಗೆ 2 ದಿನಗಳಲ್ಲಿ ಪರಿಹಾರ: ಇದು ತುಷ್ಟೀಕರಣದ ಶರವೇಗ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ

ನವದೆಹಲಿ,ಡಿಸೆಂಬರ್,30,2025 (www.justkannada.in):  ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಅತಿಕ್ರಮಣದಾರರಿಗೆ ಕೇವಲ ಎರಡೇ ದಿನದಲ್ಲಿ ಕಾಂಗ್ರೆಸ್ ಸರ್ಕಾರ ಪರಿಹಾರ ವ್ಯವಸ್ಥೆಗೆ ಮುಂದಾಗಿದೆ. ಈ ಮೂಲಕ ತುಷ್ಟೀಕರಣದ ಶರವೇಗ  ತೋರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೋಗಿಲು ಅತಿಕ್ರಮಣದಾರರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದಾಗಿ ಸರ್ಕಾರ ಘೋಷಿಸಿದೆ.  ಸಾಲ ಮತ್ತು ಸಬ್ಸಿಡಿ ನೀಡುವುದಾಗಿ ಹೇಳಿದ್ದು, ಇದೊಂದು ಬಾರಿ ಪರಿಹಾರ ಕಲ್ಪಿಸಲಾಗುತ್ತದೆ ಎಂದಿರುವುದು ವಿಪರ್ಯಾಸ. ಸರ್ಕಾರದ್ದು ಅದ್ಯಾವ ರೀತಿಯ ಪರಿಹಾರ ಕ್ರಮ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ರೈತರು, ಬೆಳೆಹಾನಿ ಸಂತ್ರಸ್ತರು ಮತ್ತು ಇತರೆ ನಿರಾಶ್ರಿತರು ಪರ್ಯಾಯ ವ್ಯವಸ್ಥೆ ಹಾಗೂ ಪರಿಹಾರಕ್ಕಾಗಿ ವರ್ಷಾನುಗಟ್ಟಲೆ ಕಾಯುತ್ತಿದ್ದಾರೆ. ಹಾಗೆಯೇ ಗೃಹಲಕ್ಷ್ಮಿ ಫಲಾನುಭವಿಗಳೂ ಗ್ಯಾರೆಂಟಿ ನಿಧಿಗಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರ ಕೋಗಿಲು ಅತಿಕ್ರಮಣದಾರರಿಗೆ ಮಾತ್ರ ಕ್ಷಣಾರ್ಧದಲ್ಲಿ ಪರಿಹಾರ, ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಮಿತಿಮೀರಿದ ಧರ್ಮ ಓಲೈಕೆ, ತುಷ್ಟೀಕರಣದ ಶರವೇಗ ಎಂದು ವಾಗ್ದಾಳಿ ನಡೆಸಿದರು.

Key words: Relief, encroachers, 2 days, Congress, Government, Union Minister, Pralhad Joshi