ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ: ಕೇಂದ್ರದಿಂದ ಪ್ರವಾಹ ಪರಿಹಾರ ವಿಳಂಬ ಕುರಿತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಪ್ರತಿಕ್ರಿಯಿಸಿದ್ದು ಹೀಗೆ…..

ಬೆಂಗಳೂರು,ಸೆ,23,2019(www.justkannada.in):  ರಾಜ್ಯದ  ನೆರೆ ಸಂತ್ರಸ್ತರಿಗೆ  ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ವಿಳಂಬ ವಿಚಾರ ಕುರಿತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಕೇಂದ್ರದಿಂದ ಪ್ರವಾಹ ಪರಿಹಾರ ವಿಳಂಬವಾಗಿಲ್ಲ, ಪರಿಹಾರ‌ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಕೇಂದ್ರದ ಗೃಹ ಇಲಾಖೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ, ದೇಶಾದ್ಯಂತ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆರೆ ಆಗಿತ್ತು. ಅದ್ದರಿಂದ ಎಲ್ಲಾ ರಾಜ್ಯಗಳಿಂದಲೂ ವರದಿ ತರಿಸಿಕೊಳ್ಳಲಾಗ್ತಿದೆ. ಕರ್ನಾಟಕದಲ್ಲೂ ಸಾಕಷ್ಟು ನಷ್ಟ ಆಗಿರುವ ಬಗ್ಗೆ ಕೇಂದ್ರದ ಬಳಿ ಮಾಹಿತಿ ಇದೆ. ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರಗಳ ಬಳಿ ಸಿಆರ್ ಎಫ್ ನಿಧಿ ಇದೆ. ಈಗ ಈ‌ ನಿಧಿಯನ್ನ ರಾಜ್ಯ ಸರ್ಕಾರಗಳು ಸಧ್ಯಕ್ಕೆ ವೆಚ್ಚ ಮಾಡ್ತಿವೆ. ಕೇಂದ್ರ ಬಳಿಕ ಇದರ ಮರು ಪಾವತಿ ಮಾಡಲಿದೆ. ಕೇಂದ್ರದಿಂದ ಪರಿಹಾರ‌ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಕಿಶನ್ ರೆಡ್ಡಿ ತಿಳಿಸಿದರು.

ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ಕುರಿತು  ಮಾತನಾಡಿದ ಕೇಂದ್ರ ಸಚಿವ ಕಿಶನ್ ರೆಡ್ಡಿ, ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದೆ. ಭವಿಷ್ಯದ ದಿನಗಳಲ್ಲಿ ಅಮೆರಿಕ- ಭಾರತ ದೇಶಗಳ ನಡುವೆ ಸಂಬಂಧ ಇನ್ನಷ್ಟು ಉತ್ತಮಗೊಳ್ಳಲಿದೆ. ಜಗತ್ತಿನ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಾಯಕರು ಒಂದೇ ವೇದಿಕೆಯಲ್ಲಿದ್ರು.ಜಾಗತಿಕ ಭಯೋತ್ಪಾದಕತೆ ವಿರುದ್ಧ ಉಭಯ ದೇಶಗಳ ನಾಯಕರು ಸಮರ ಸಾರುವ ಬಗ್ಗೆ ಮಾತಾಡಿದ್ರು. ಇಸ್ಲಾಮಿಕ್ ಭಯೋತ್ಪಾದನೆ, ಗಡಿ ಸಮಸ್ಯೆ ಕುರಿತು ಇಬ್ಬರೂ ಚರ್ಚೆ ನಡೆಸಿದ್ರು. ಭಯೋತ್ಪಾದನೆ ವಿರುದ್ಧದ ಇಬ್ಬರ ಸಂಕಲ್ಪ ಇನ್ನಷ್ಟು ಬಲಗೊಂಡಿದೆ ಎಂದು ತಿಳಿಸಿದರು.

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿಯವ್ರು ಕರ್ನಾಟಕ, ಬೆಂಗಳೂರಿನ ಕುರಿತೂ ಪ್ರಸ್ತಾಪಿಸಿದ್ದಾರೆ. ಪ್ರಧಾನಿಯವ್ರ ಏಳು ದಿನಗಳ ಅಮೆರಿಕ ಪ್ರವಾಸ ಫಲಪ್ರದವಾಗಲಿದೆ. ಎರಡೂ ದೇಶಗಳಿಗೆ ಈ ಪ್ರವಾಸದಿಂದ ಆರ್ಥಿಕತೆಯ ಲಾಭವಾಗಲಿದೆ. ಎರಡೂ ದೇಶಗಳ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ. ಇದರ ಸಂಪೂರ್ಣ ಹೆಗ್ಗಳಿಕೆ ನಮ್ಮ ಪ್ರಧಾನಿಗೆ ಸಲ್ಲಲಿದೆ. ಭಾರತದ ಆಚೆಗೆ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಭಾರತೀಯ ಮೂಲದ ಜನ ಸೇರಿದ್ರು. ನಿನ್ನೆ ಸೇರಿದ್ದ ಜನ ಇತಿಹಾಸ ಸೃಷ್ಟಿಸಿದ್ದಾರೆ. ಸ್ವಾತಂತ್ರ್ಯ ನಂತರ ದೇಶದಾಚೆಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅನಿವಾಸಿ ಭಾರತೀಯರು ಸೇರಿದ್ದು ಇದೇ ಮೊದಲು ಎಂದು ಕಿಶನ್ ರೆಡ್ಡಿ ತಿಳಿಸಿದರು.

Key words: Union Minister- Kishan Reddy – clarified – delay – flood relief – Center.