ಬಜೆಟ್ ದಿನದಂದು ಗಣಪನಿಗೆ ನಮನ: ಇದುವರೆವಿಗೂ ಯಾರಿಗೂ ತಿಳಿಯದ ಹಣಕಾಸು ಸಚಿವಾಲಯದ ವಾಡಿಕೆ

ನವದೆಹಲಿ, ಫೆಬ್ರವರಿ 1, 2022 (www.justkannada.in): ಯಾವುದೇ ಹಣಕಾಸು ಸಚಿವಾಲಯಕ್ಕಾದರೂ ಬಜೆಟ್ ದಿನ ಬಹಳ ಮುಖ್ಯ, ಏಕೆಂದರೆ ಅದು ಸಂಸತ್ತಿನಲ್ಲಿ ವಿರೋಧಪಕ್ಷಗಳು ಹಾಗೂ ದೇಶದ ಸಮಸ್ತ ನಾಗರಿಕರು ಅವರ ಕಾರ್ಯದಕ್ಷತೆಯನ್ನು ಮೌಲ್ಯಮಾಪನ ಮಾಡುವ ಒಂದು ಬಹುಮುಖ್ಯ ಕಾರ್ಯಕ್ರಮ. ಪ್ರತಿ ಹಣಕಾಸು ಸಚಿವರೂ ಸಹ ತಮ್ಮ ದಿನವನ್ನು ಹಾಗೂ ಬಜೆಟ್ ಮಂಡನೆಗೆ ಸಂಸತ್ತಿಗೆ ತೆರಳುವ ಮುಂಚೆ, ನವದೆಹಲಿಯಲ್ಲಿರುವ ಸಂಸತ್ ಭವನದ ಹಣಕಾಸು ಸಚಿವಾಲಯದ ಉತ್ತರ ಬ್ಲಾಕ್‌ ನ ಕಾರಿಡಾರ್‌ ನಲ್ಲಿರುವ ಗಣೇಶ ಮೂರ್ತಿಗೆ ಹೂಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದು ಬಹಳ ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವ ವಾಡಿಕೆಯಾಗಿದೆ.

ಹಣಕಾಸು ಸಚಿವಾಲಯದಲ್ಲಿ ಬಹಳ ದೀರ್ಘ ಕಾಲದವರೆಗೂ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಓರ್ವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವ ಪ್ರಕಾರ, “ಇದೊಂದು ನಮ್ಮ ಹಣಕಾಸು ಸಚಿವಾಲಯದಲ್ಲಿ ಯಾರಿಗೂ ತಿಳಿಯದ ಹಾಗೂ ಎಲ್ಲಿಯೂ ದಾಖಲಾಗದಿರುವಂತಹ ಒಂದು ಸಂಪ್ರದಾಯವಾಗಿದೆ. ಆದರೆ ಮೊದಲಿನಿಂದಲೂ, ಯಾವುದೇ ಧರ್ಮ, ಜಾತಿ ಎನ್ನದೆ, ಪ್ರತಿ ಹಣಕಾಸು ಸಚಿವರೂ ಸಹ ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಬಜೆಟ್ ದಿನದಂದು, ಹಣಕಾಸು ಸಚಿವರು ಹಾಗೂ ಬಜೆಟ್ ತಂಡದ ಸದಸ್ಯರೂ ಒಳಗೊಂಡಂತೆ ನಾವೆಲ್ಲರೂ, ಬಜೆಟ್‌ ಗೆ ಸಂಬಂಧಪಟ್ಟ ದಾಖಲೆಗಳ ಮುದ್ರಣ ಕೆಲಸ ಆರಂಭವಾಗುವ ಮುಂಚೆ ಹಲ್ವಾ ಸಮಾರಂಭ ನಡೆಸುವಂತೆ, ಇದನ್ನು ಪಾಲಿಸುವುದು ವಾಡಿಕೆಯಾಗಿದೆ,” ಎಂದರು.

“ನಾನು ಹಲವು ವರ್ಷಗಳಿಂದ ಹಣಕಾಸು ಸಚಿವಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರತಿ ವರ್ಷ ಬಜೆಟ್ ನಡೆಯುವಾಗ, ಹಣಕಾಸು ಸಚಿವರು ಮತ್ತು ಬಜೆಟ್ ತಂಡಕ್ಕೆ ಗಣೇಶನ ಪೂಜೆಗೆಂದು ತಪ್ಪದೇ ಹೂಗಳನ್ನು ತರುತ್ತೇನೆ. ಗಣೇಶನಿಗೆ ಹೂಗಳನ್ನು ಅರ್ಪಿಸದೇ ಯಾವುದೇ ಹಣಕಾಸು ಸಚಿವರೂ ನೇರವಾಗಿ ಸಂಸತ್ತಿಗೆ ಹೋಗುವುದನ್ನು ನಾನು ಈವರೆಗೂ ನೋಡಿಲ್ಲ. ಮದುವೆ ಆಹ್ವಾನಪತ್ರಿಕೆ ಹಂಚುವುದನ್ನು ಆರಂಭಿಸುವ ಮುಂಚೆ ಮಾಡುವ ಹಾಗೇ, ಯಾವುದಾದರೂ ಒಳ್ಳೆಯ ಕೆಲಸ ಮಾಡುವುದಕ್ಕೆ ಮುಂಚೆ ಗಣೇಶನಿಗೆ ಪೂಜೆ ಮಾಡುವುದು ನಮ್ಮ ಸಂಪ್ರದಾಯ ಅಲ್ಲವೇ,” ಎಂದು ಸಚಿವಾಲಯದ ಉದ್ಯೋಗಿಯೊಬ್ಬರ ಅಭಿಪ್ರಾಯ.

ಹಣಕಾಸು ಸಚಿವಾಲಯದ ರಾಜ್ಯ ಸಚಿವ ಡಾ. ಭಗವತ್ ಕರದ್ ಅವರೂ ಸಹ ಮಂಗಳವಾರದಂದು ಉತ್ತರ ಬ್ಲಾಕ್‌ ಗೆ ತೆರಳುವ ಮುಂಚೆ ಗಣೇಶನಿಗೆ ಪೂಜೆ ಅರ್ಪಿಸಿದರು, ಅದೇ ರೀತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸಹ ಪಾಲಿಸಿದರು ಎಂದು ಅವರ ವೈಯಕ್ತಿಕ ಸಿಬ್ಬಂದಿಯೊಬ್ಬರು ತಿಳಿಸಿದರು.

ಹಾಗಾದರೆ ಪ್ರಣಬ್ ಮುಖರ್ಜಿಯವರು ಹಣಕಾಸು ಸಚಿವರಾಗಿದ್ದಾಗ ಬಜೆಟ್ ದಿನದಂದು ಏನು ಮಾಡುತ್ತಿದ್ದರು? ಎಂದು ಅವರ ಪುತ್ರಿ ಶರ್ಮಿಸ್ತಾ ಮುಖರ್ಜಿಯವರನ್ನು ಪ್ರಶ್ನಿಸಿದಾಗ, “ನಮ್ಮ ತಂದೆ ಬಜೆಟ್ ದಿನದಂದು ಮನೆಯಲ್ಲಿ ಯಾವುದೇ ರೀತಿ ವಿಶೇಷ ಪೂಜೆಯನ್ನೇನು ಮಾಡುವುದನ್ನು ನಾವು ನೋಡಿಲ್ಲ. ಆದರೆ ಅವರು ಬಹಳ ಧಾರ್ಮಿಕ ಸಂಪ್ರದಾಯದವರೇ ಆಗಿದ್ದರು. ಬೆಳಗಿನ ನಡಿಗೆ ಮತ್ತು ಪೂಜೆ ಇಲ್ಲದೇ ಎಂದಿಗೂ ಹೊರಗೆ ಹೋಗುತ್ತಿರಲಿಲ್ಲ. ಆಧರೆ ಬಜೆಟ್ ದಿನದಂದು ವಿಶೇಷವೇನೂ ಇರುತ್ತಿರಲಿಲ್ಲ,” ಎಂದು ಉತ್ತರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: union-budget-lord-ganesha