ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ-ಶಾಸಕ ಸಿ.ಟಿ ರವಿ.

ಚಿಕ್ಕಮಗಳೂರು,ಏಪ್ರಿಲ್,17,2023(www.justkannada.in):  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶಾಸಕ ಸಿ.ಟಿ ರವಿ,  ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದು ದುರದೃಷ್ಟಕರ. ಒಬ್ಬ ವ್ಯಕ್ತಿಗೆ ಒಂದು ಪಕ್ಷ ಏನೆಲ್ಲ ಸ್ಥಾನ ನೀಡಬಹುದು ಅದನ್ನೆಲ್ಲ ಕೊಟ್ಟಿದೆ. ಜಗದೀಶ್ ಶೆಟ್ಟರ್ ಪಕ್ಷ ತೊರೆದು ಯಾವ ಮೆಸೇಜ್ ನೀಡಿದ್ದಾರೆ. ಸೈದ್ಧಾಂತಿಕವಾಗಿ ಬಿಜೆಪಿ ಜೊತೆ ಶೆಟ್ಟರ್ ಇರ್ಲಿಲ್ವಾ? ವೈಯಕ್ತಿಕ ಲಾಭ ನಷ್ಟವನ್ನು ಹಾಕಿ‌ ನನಗೆ ಲಾಭ ಆದ್ರೆ ಮಾತ್ರ ಬಿಜೆಪಿ. ಇನ್ನೊಬ್ಬರಿಗೆ ಆದ್ರೆ ಬಿಜೆಪಿ ಅಲ್ಲ ಎಂಬ ಮನಸ್ಥಿತಿ ಆಶ್ಚರ್ಯ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಅವರಿಂದ ಇಂತಹದನ್ನ ನಿರೀಕ್ಷೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಸಮಸ್ಯೆ ಆದ್ರೆ ಸಮಾಧಾನವಾಗಿ ಬಗೆಹರಿಸುವವರು ಈ ನಿರ್ಣಯ ತೆಗೆದುಕೊಂಡಿದ್ದು ದುರಾದೃಷ್ಟಕರ. ಭಾರತೀಯ ಜನತಾ ಪಾರ್ಟಿಯಲ್ಲಿ ಬೆಳವಣಿಗೆಯ ಇತಿಹಾಸದಲ್ಲಿ ಇದ್ದ ಸ್ಥಾನ ಶೆಟ್ಟರ್ ಕಳೆದುಕೊಂಡಿದ್ದಾರೆ. ಜನಸಂಘದಿಂದ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ ಕುಟುಂಬ ಎಂಬ ಹೆಗ್ಗಳಿಕೆಯಿಂದ ದೂರ ಆಗಿದ್ದಾರೆ ಎಂದು ಸಿ.ಟಿ ರವಿ ಹೇಳಿದರು.

Key words: unfortunate -Jagdish Shettar -left -BJP – joined –Congress-MLA-CT Ravi