ವಿದ್ಯಾರ್ಥಿಗಳಿಗೆ ಅಗತ್ಯ ಅಧ್ಯಯನ ಮತ್ತು ಪ್ರಾತ್ಯಕ್ಷಿಕೆ ಸಂಪನ್ಮೂಲ  ಒದಗಿಸಲು ಮುಕ್ತ ವಿವಿಯಿಂದ ಸ್ಟುಡಿಯೋ ನಿರ್ಮಾಣ-ಪ್ರೊ. ಎಸ್.ವಿದ್ಯಾಶಂಕರ್.

ಮೈಸೂರು,ಡಿಸೆಂಬರ್,23,2021(www.justkannada.in): ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ತರಹದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಗತ್ಯ ಅಧ್ಯಯನ ಮತ್ತು ಪ್ರಾತ್ಯಕ್ಷಿಕೆ ಸಂಪನ್ಮೂಲ ಒದಗಿಸಲು ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಸ್ಟುಡಿಯೋ ನಿರ್ಮಿಸಿದೆ ಎಂದು ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.

ಕರಾಮುವಿ ಕಾವೇರಿ ಸಭಾಂಗಣದಲ್ಲಿ ಕೆಎಸ್‌ಒಯು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆನ್‌ಲೈನ್‌ ಪಾಠಗಳು ಹಾಗೂ ಇ-ಸಂಪನ್ಮೂಲ ಎಷ್ಟು ಉಪಯುಕ್ತ ಎಂಬುದನ್ನು ಕೊರೊನಾ ಸಂದರ್ಭದ ಲಾಕ್‌ ಡೌನ್ ತೋರಿಸಿಕೊಟ್ಟಿದೆ. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾರ್ಥಿಗಳಿಗೆ ಆನ್‌ಲೈನ್‌ ತರಬೇತಿ ಶಿಬಿರ ಹಾಗೂ ತರಗತಿಗಳನ್ನು ನಡೆಸಿದೆವು. ಇದಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಉನ್ನತ ಶಿಕ್ಷಣ ಸಚಿವರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇದರಿಂದ ಸ್ಫೂರ್ತಿಗೊಂಡು ಹೆಚ್ಚು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಅಧ್ಯಯನ ಸಂಪನ್ಮೂಲ ಒದಗಿಸಲು ಕೆಎಸ್‌ಒಯುನಲ್ಲಿ ಸ್ಟುಡಿಯೋ ನಿರ್ಮಿಸಲಾಗಿದೆ. ಇದರ ಮೂಲಕ ಇ-ಕಟೆಂಟ್ ಒದಗಿಸಲಾಗುವುದು, ಚಿತ್ರೀಕರಿಸಿದ ಉಪನ್ಯಾಸಗಳು ಪ್ರಾತ್ಯಕ್ಷಿಕೆಗಳನ್ನು ಚಿತ್ರೀಕರಿಸಿ ವಿಶ್ವವಿದ್ಯಾಲಯದ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಮಾಹಿತಿ ನಮ್ಮ ವೆಬ್‌ಸೈಟ್‌ ನಲ್ಲೂ ಲಭ್ಯವಿರಲಿದೆ. ಎಲ್ಲಾ ವಿದ್ಯಾರ್ಥಿಗಳು ಉಚಿತವಾಗಿ ಇದರ ಸೌಲಭ್ಯ ಪಡೆಯಬಹುದು ಎಂದು ವಿವರಿಸಿದರು.

ಸ್ಟುಡಿಯೋ ನಿರ್ಮಾಣಗೊಂಡು ಈಗಾಗಲೇ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿದ್ದೇವೆ. ದಿನದ 20 ಗಂಟೆ ಕಾಲ ಉಪನ್ಯಾಸ, ಪಾಠ ಬೋಧಿಸಲು ಸಿದ್ಧವಿದ್ದು, ಸ್ಟುಡಿಯೋ ಉದ್ಘಾಟನೆಯ ಬಳಿಕ ಪ್ರಸಾರ ಮಾಡಲಾಗುವುದು. ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥನಾರಾಯಣ ಅವರು ಸ್ಟುಡಿಯೋ ಉದ್ಘಾಟಿಸಲಿದ್ದಾರೆ ಎಂದರು.

ಮುಕ್ತಭಂಡಾರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಐಎಎಸ್‌ ಅಧಿಕಾರಿ ಡಾ.ಎಂ.ಆರ್.ರವಿ, ಉದ್ಯೋಗ ಮಾಡಬೇಕೆಂಬ ಉದ್ದೇಶದಿಂದ ಬೋಧಕ ವೃತ್ತಿಗೆ ಬರಬೇಡಿ. ಮಕ್ಕಳಿಗೆ ಶಿಕ್ಷಣ ನೀಡುವ ಸಮಾಜದಲ್ಲಿ ಬದಲಾವಣೆ ಉದ್ದೇಶ ಹೊಂದಿದವರು ಉಪನ್ಯಾಸ ವೃತ್ತಿಗೆ ಬರಬೇಕು. ಒಬ್ಬ ಯಶಸ್ವಿ ಬೋಧಕ ಉತ್ತಮ ಸಂವಹನಕಾರನಾಗಿರಬೇಕು,ಓದುವ ಅವಶ್ಯವಿರಬೇಕು ಹಾಗೂ ಸಮಾಜದೊಂದಿಗೆ ನಿಕಟ ಸಂಬಂಧ ಹೊಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕೇಳುಗನಾಗಿರಬೇಕು. ತರಗತಿಯೊಳಗೆ ಸರ್ವಾಧಿಕಾರಿಯಾಗದೇ, ಪ್ರಜಾಪ್ರಭುತ್ತವಾದಿಯಾಗಿರಬೇಕು ಎಂದು ಸಲಹ ನೀಡಿದರು. ಬೋಧಕರ ಕಲಿಕೆಗೆ ಅಂತ್ಯ ಇರುವುದಿಲ್ಲ. ಆತನ ಕಲಿಕಾ ಪ್ರಕ್ರಿಯ ನಿರಂತರವಾಗಿರಬೇಕು ಎಂದರು.

ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಮಾತಾನಾಡಿ ಯಾರೇ ಆಗಲಿ ಮೊದಲು ನಮ್ಮ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕು. ವಿದ್ಯೆ ಮತ್ತು ಬುದ್ಧಿ ಬೇರೆಯಾಗಿದೆ. ಬುದ್ಧಿವಂತರಾದರೆ ಸಾಲದು ಪರಿಸ್ಥಿತಿಯನ್ನು ಹೇಗೆ ನಿಭಾಹಿಸುತ್ತೇವೆ ಎಂಬುದನ್ನು ಕಲಿಯಬೇಕು, ತಾವು ಒಟ್ಟು 27 ಹುದ್ದೆಗಳಿಗೆ ಆಯ್ಕೆಯಾಗಿ ಕಡೆಗೆ ಸಾರ್ವಜನಿಕ ಸೇವೆಯ ಹುದ್ದೆಯನ್ನು ಆಯ್ಕೆಮಾಡಿಕೊಂಡೆ, ಬದ್ಧತೆಯಿಂದ ಅಧ್ಯಯನ ನಡೆಸಿ ಎಂದು ಕಿವಿ ಮಾತು ಹೇಳಿದರು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆದು ಅತ್ಯುತ್ತಮ ಕೆಲಸ ಮಾಡಿದೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದ ಐಎಎಸ್ ಅಧಿಕಾರಿಗಳಾದ ಡಾ. ಎಂ.ಆರ್. ರವಿ, ಡಾ. ಜಿ.ಸಿ. ಪ್ರಕಾಶ್, ಪರೀಕ್ಷಾ ತಯಾರಿ ಬಗ್ಗೆ ಶಿಬಿರಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಶಿಬಿರಾರ್ಥಿಗಳ ಗೊಂದಲವನ್ನು ನಿವಾರಿಸಿದರು.

ವಿವಿಯ ಕುಲಸಚಿವ ಪ್ರೊ.ಆರ್.ರಾಜಣ್ಣ, ಹಣಕಾಸು ಅಧಿಕಾರಿ ಡಾ. ಎ. ಖಾದರ್‌ಪಾಷ, ಡೀನ್ ಡಾ. ರವಿ, ಕುಲಪತಿಗಳ ವಿಶೇಷಾಧಿಕಾರಿ ಪ್ರೊ. ದೇವರಾಜು, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಗಣೇಶ್ ಕೆ.ಜಿ.ಕೊಪ್ಪಲ್, ಸಿದ್ದೇಶ್‌ ಹೊನ್ನೂರು ಉಪಸ್ಥಿತರಿದ್ದರು.

Key words: OpenView -Studio – students – study – demonstration resources-KSOU-Pro. S. Vidyashankar