ಕೊನೆಗೂ ವರುಣಾದಿಂದಲೇ ಸಿದ್ಧರಾಮಯ್ಯ ಸ್ಪರ್ಧೆ: ಮೈಸೂರು ಜಿಲ್ಲೆಯ 11 ಕ್ಷೇತ್ರದಲ್ಲಿ 8ರಲ್ಲಿ ಫೈನಲ್..

Promotion

ಮೈಸೂರು,ಮಾರ್ಚ್,25,2023(www.juskannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು ಕೊನೆಗೂ ಮಾಜಿ ಸಿಎಂ ಸಿದ್ಧರಾಮಯ್ಯ ಅದೃಷ್ಟದ ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುತ್ತಿದ್ದಾರೆ.

ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆಗೆ ಮುಂದಾಗಿದ್ದು, ಒಂದೇ ಕ್ಷೇತ್ರದಿಂದ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿದೆ. ಇನ್ನು ತಿ.ನರಸೀಪುರದಲ್ಲಿ ಮಗನಿಗೆ ಕೊಕ್ ನೀಡಿ ಅಪ್ಪನಿಗೆ ಟಿಕೆಟ್ ನೀಡಲಾಗಿದ್ದು, ಸುನೀಲ್ ಬೋಸ್ ಬದಲಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಹೆಸರು ಫೈನಲ್ ಆಗಿದೆ. ಈ ಮೂಲಕ ಪುತ್ರ ಸುನೀಲ್ ಬೋಸ್ ಗೆ ಸ್ಥಾನ ಬಿಟ್ಟುಕೊಡಲು ಮುಂದಾಗಿದ್ದ ಹೆಚ್.ಸಿ ಮಹದೇವಪ್ಪ ಕೊನೆ ಕ್ಷಣದಲ್ಲಿ ತಾವೇ ಸ್ಪರ್ಧೆಗೆ ಮುಂದಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ- ಮಹದೇವಪ್ಪ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ಮಾಡಲಾಗಿದ್ದು ಮೈಸೂರು ಜಿಲ್ಲೆಯಲ್ಲಿ ಹಳೆ ಜೋಡಿ ಮತ್ತೆ ಮೋಡಿ ಮಾಡುತ್ತಾ ಕಾದುನೋಡಬೇಕಿದೆ.

ಇನ್ನು ನಂಜನಗೂಡು ಕ್ಷೇತ್ರದಿಂದ ಆರ್.ಧೃವ ನಾರಾಯಣ್ ಪುತ್ರ ದರ್ಶನ್ ಧೃವ ನಾರಾಯಣ್ ಗೆ ಟಿಕೆಟ್ ನೀಡಲಾಗಿದೆ. ಎನ್.ಆರ್.ಕ್ಷೇತ್ರದಿಂದ ತನ್ವೀರ್ ಸೇಠ್ ಗೆ ಟಿಕೆಟ್ ಫಿಕ್ಸ್ ಆಗಿದೆ. ತನ್ವೀರ್ ಸೇಠ್  ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಹೇಳಿ ತನಗೆ ಟಿಕೆಟ್ ಬೇಡ ಎಂದಿದ್ದರು. ಹೀಗಾಗಿ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಕೊನೆಗೂ ತನ್ವೀರ್ ಸೇಠ್‌ಗೆ ಟಿಕೆಟ್ ನೀಡಲಾಗಿದೆ.

ಮೈಸೂರು ಜಿಲ್ಲೆಯ 11 ಕ್ಷೇತ್ರದಲ್ಲಿ 8 ಕ್ಷೇತ್ರಗಳ ಟಿಕೆಟ್  ಫೈನಲ್ ಆಗಿದ್ದು ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿ ಉಳಿದಿದೆ. ಪಿರಿಯಾಪಟ್ಟಣದಿಂದ ಕೆ.ವೆಂಕಟೇಶ್, ಕೃಷ್ಣರಾಜ‌ನಗರದಿಂದ ಡಿ.ರವಿಶಂಕರ್‌ಗೆ, ಹುಣಸೂರು ಕ್ಷೇತ್ರದಿಂದ ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಟಿಕೆಟ್, ಹೆಗ್ಗಡದೇವನಕೋಟೆಯಿಂದ ಅನಿಲ್ ಗೆ ಟಿಕೆಟ್ ಖಾತ್ರಿಯಾಗಿದೆ.

Key words: Finally- Siddaramaiah- contest – Varuna- Final – 8 – constituencies – Mysore district..