ಶಾಸಕ ಎಂ.ಪಿ.ರೇಣುಕಾಚಾರ್ಯ ಪುತ್ರಿಗೆ ನಕಲಿ ಜಾತಿ ಪ್ರಮಾಣ ಪತ್ರ: ತನಿಖೆಗೆ ಆಗ್ರಹಿಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.

 

ಮೈಸೂರು,ಮಾರ್ಚ್,24,2022(www.justkannada.in): ಶಾಸಕ ಎಂ.ಪಿ.ರೇಣುಕಾಚಾರ್ಯ ಮಕ್ಕಳಿಗೆ ನಕಲಿ ಜಾತಿ ಪ್ರಮಾಣ ಪತ್ರ ಕೊಡಿಸಿ ಸರ್ಕಾರದ ಸವಲತ್ತನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಕುರಿತು ತನಿಖೆ ನಡೆಸುವಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಜಗತ್ಪ್ರಸಿದ್ಧ. ಮಣ್ಣಿನ ಮೇಲೆ ದೋಣಿ ನಡೆಸಿರುವ ವ್ಯಕ್ತಿ. ಈ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದಾರೆ. ಪುತ್ರ ಅಮೆರಿಕಾದಲ್ಲಿ ಇಂಜಿನಿಯರಿಂಗ್ ಮಾಡ್ತಿದ್ದಾರೆ, ಪುತ್ರಿ ಬೆಂಗಳೂರಿನಲ್ಲಿ ಪಿಯುಸಿ ಮಾಡ್ತಿದ್ದಾರೆ. ರೇಣುಕಾಚಾರ್ಯ ಇಬ್ಬರಿಗೂ ಎಸ್ಸಿ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಸರ್ಟಿಫಿಕೇಟ್ ಕೊಡಿಸಿ ಸರ್ಕಾರದ ಸವಲತ್ತನ್ನು ಪಡೆದಿದ್ದಾರೆ. ಫೇಕ್ ಸರ್ಟಿಫಿಕೇಟ್ ಪಡೆದಿರುವ ಈ ಎಲ್ಲಾ ದಾಖಲೆಗಳನ್ನು ಸಿಎಂ ಗೆ ಕಳುಹಿಸಿದ್ದೇನೆ ಎಂದರು.

ಎಸ್ಸಿ, ಎಸ್ಟಿಯ ಸೌಲಭ್ಯಗಳನ್ನ ಬಿಜೆಪಿ ಮುಖಂಡರು ಕಸಿಯುತ್ತಿದ್ದಾರೆ. ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಎಂದು ನಮೂದಾಗಿದೆ. ರೇಣುಕಾಚಾರ್ಯ ಅಣ್ಣ ಎಂ.ಪಿ.ದಾರಕೇಶ್ವರಯ್ಯ ಕೂಡಾ ಎಸ್ಸಿ ಸರ್ಟಿಫಿಕೇಟ್ ಪಡೆದಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು. ಇದೇ ಕೆಲಸ ಕಾಂಗ್ರೆಸ್ ನವರು ಮಾಡಿದ್ರೆ ಸುಮ್ನಿರ್ತಿದ್ರಾ.? ಇದು ಕ್ರಿಮಿನಲ್ ಅಫೆನ್ಸ್. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಮೌನವಹಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಹಾಗೂ ಎಸ್ಸಿ, ಎಸ್ಟಿ ಆಯೋಗಕ್ಕೆ ದೂರು ನೀಡುತ್ತೇವೆ. ಎಂ.ಪಿ.ರೇಣುಕಾಚಾರ್ಯ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದರ ಬಗ್ಗೆ ತನಿಖೆ ಆಗಬೇಕು. ಮಾತಿಗೆ ತಕ್ಕಂತೆ ರೇಣುಕಾಚಾರ್ಯ ರಾಜಿನಾಮೆ ನೀಡಬೇಕು. ಬಿಜೆಪಿಯ ದಲಿತ ನಾಯಕರು ಏನ್ಮಾಡ್ತಿದ್ದೀರಿ.? ನಿಮ್ಮ ಸಮುದಾಯಕ್ಕೆ ಅನ್ಯಾಯ ಆಗ್ತಿದ್ರೂ ಕಣ್ಮುಚ್ಚಿ ಕುಳಿತಿದ್ದೀರಿ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.

ಸರ್ಕಾರದ ಕುಮ್ಮಕ್ಕಿನಿಂದಲೇ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ.

ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಕೆಲ ಹಿಂದೂ ಸಂಘಟನೆಯವರು ಕಾನೂನಿನ ವಿರುದ್ಧವಾಗಿ ಕೆಲಸ ಮಾಡುತಿದ್ದಾರೆ. ಸರ್ಕಾರದ ಕುಮ್ಮಕ್ಕಿನಿಂದಲೇ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಹಾಕಲಾಗಿದೆ. ಇದು ರಾಜ್ಯದಿಂದ ಮುಸ್ಲಿಂ ಸಮುದಾಯವನ್ನೇ ಬಹಿಷ್ಕರಿಸುವ ಹುನ್ನಾರ. ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ, ದೇಶದ ಮರ್ಯಾದೆ ಹೋಗುತ್ತಿದೆ. ದುಬೈ, ಕುವೈತ್, ಅಬುಧಾಬಿ ಸೇರಿ ಅನೇಕ ರಾಷ್ಟ್ರಗಳಲ್ಲೂ ಹಿಂದುಗಳು ಕೆಲಸ ಮಾಡ್ತಿದ್ದಾರೆ. ಒಂದು ವೇಳೆ ಅಲ್ಲಿ ಅವರನ್ನ ಬಹಿಷ್ಕಾರ ಮಾಡಿದ್ರೆ ಅವರಿಗೆ ನೀವು ಕೆಲಸ ಕೊಡ್ತಿರಾ.? ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.

ಕಳೆದ 50 ವರ್ಷದಲ್ಲೇ ಹೆಚ್ಚಿನ ನಿರುದ್ಯೋಗ ಸಮಸ್ಯೆ ಇದೆ. ಇದನ್ನ ಡೈವರ್ಟ್ ಮಾಡಲು ಬೇರೆ ಬೇರೆ ವಿಷಯಗಳನ್ನು ಮಧ್ಯೆ ತರ್ತಿದ್ದಾರೆ. ಮಂಗಳೂರು ಕಮಿಷನರ್ ಏನ್ಮಾಡ್ತಿದ್ದೀರಿ. ನೀವೆನು ಬಿಜೆಪಿ ಏಜೆಂಟಾ.? ಈ ಬಗ್ಗೆ ಯಾಕೆ ಇನ್ನೂ ಕ್ರಮ ಆಗಿಲ್ಲ. ಹೋಂ ಮಿನಿಸ್ಟರ್ ಅರಗ ಜ್ಞಾನೇಂದ್ರ ಏನ್ಮಾಡ್ತಿದ್ದೀರಿ ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.

Key words: Fake-caste certificate – MLA -MP Renukaacharya- KPCC spokesperson- M Laxman