ಕನ್ನಡದ ಭವಿಷ್ಯದ ಬಗ್ಗೆ ಆತಂಕ ಬೇಡ- ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್

kannada t-shirts

ಬೆಂಗಳೂರು,ಡಿಸೆಂಬರ್,8,2022(www.justkannada.in): ‘ಕನ್ನಡಕ್ಕೆ ಆತಂಕವಿದೆ. ಕನ್ನಡ ಮೂಲೆಗುಂಪಾಗುತ್ತದೆ ಎನ್ನುವ ಆತಂಕ ಸುಳ್ಳು’ ಎಂದು ಖ್ಯಾತ ಚಲನಚಿತ್ರ ನಿರ್ದೇಶಕರಾದ ಯೋಗರಾಜ ಭಟ್ ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಹಾಗೂ ‘ಬ್ಲಾಸಮ್ ಬುಕ್ ಹೌಸ್’ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಖ್ಯಾತ ಕಿರುತೆರೆ ನಟಿ ರಂಜನಿ ರಾಘವನ್ ಅವರ ‘ಸ್ವೈಪ್ ರೈಟ್’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ಭಾಷೆ ಹುಟ್ಟಿದಾಗಿನಿಂದಲೂ ಭಾಷೆ ಮೂಲೆಗುಂಪಾಗುತ್ತಿದೆ ಎನ್ನುವ ಮಾತೂ  ಕೇಳಿಬರುತ್ತಿದೆ. ಬೆಂಗಳೂರು ದಾಟಿದರೆ ಕನ್ನಡ ನೆಮ್ಮದಿಯಾಗಿಯೇ ಇದೆ. ಬೆಂಗಳೂರಿನಲ್ಲಿ ಮಾತ್ರ ನಾವು ಅನಗತ್ಯ ಗೊಂದಲಕ್ಕೆ ಒಳಗಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಮಹಾಪ್ರಾಣ ಕಿತ್ತುಹಾಕಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಮಹಾಪ್ರಾಣ ಇರಬೇಕೇ, ಇಲ್ಲದಿರಬೇಕೇ ಎನ್ನುವುದಕ್ಕಿಂತ ಕನ್ನಡ ಮಾತನಾಡುತ್ತ ಇರಬೇಕು ಎನ್ನುವುದೇ ಮುಖ್ಯವಾಗಬೇಕು ಎಂದು ಯೋಗರಾಜ ಭಟ್  ಅವರು ಕಿವಿಮಾತು ಹೇಳಿದರು.

ರಂಜನಿ ರಾಘವನ್ ಅವರ ಬರಹ ಸ್ತ್ರೀ ಸಮುದಾಯಕ್ಕೆ ಸಹಜವಾಗಿ ಇರುವ ಕಥನ ಕಲೆಯ ಹಿರಿಮೆಯನ್ನು ತೋರಿಸುತ್ತದೆ. ಕಥನ ಕಲೆ ರಂಜನಿ ಅವರಿಗೆ ಸಿದ್ಧಿಸಿದೆ ಎಂದರು.

ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ,  ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಕಾಲದಲ್ಲಿ ರಂಜನಿ ರಾಘವನ್ ಅವರು ದೊಡ್ಡ ಸಂಖ್ಯೆಯ ಓದುಗರನ್ನು ತಮ್ಮ ಬರಹದ ಮೂಲಕ ಸೃಷ್ಟಿಸಿದ್ದಾರೆ ಎಂದು ಪ್ರಶಂಸಿಸಿದರು. ಡಿಜಿಟಲ್ ಮಾಧ್ಯಮದ ಕಾಲಘಟ್ಟದಲ್ಲಿ ನಾವೆಲ್ಲರೂ ಕಲ್ಪನೆಯ ಲೋಕವನ್ನು ಕಳೆದುಕೊಂಡಿದ್ದೇವೆ. ಬುದ್ದಿ ಪ್ರಚೋದಕವಾಗಿರಲು ಓದು ಅತಿ ಮುಖ್ಯ ಎಂದರು.

ಚಿತ್ರ ನಿರ್ದೇಶಕ ಮಂಸೋರೆ ಅವರು ಮಾತನಾಡಿ,  ಚಿತ್ರ ನಿರ್ಮಿಸಿ ಅದರ ವಿತರಣೆ ಗೊತ್ತಾಗದೆ ಕಂಗಾಲಾಗುವಂತೆ ಪುಸ್ತಕ ಪ್ರಕಟಿಸಿ ಅದನ್ನು ಓದುಗರ ಬಳಿಗೆ ಕೊಂಡೊಯ್ಯುವ ದಾರಿ ಗೊತ್ತಾಗದೆ ಕಂಗಾಲಾಗುವ ಸ್ಥಿತಿ ಕನ್ನಡ ಪ್ರಕಾಶನ ರಂಗಕ್ಕೆ ಬಾರದಿರಲಿ ಎಂದು ಆಶಿಸಿದರು.

ಖ್ಯಾತ ನಟಿ ರಂಜನಿ ರಾಘವನ್ ಅವರು ಮಾತನಾಡಿ,  ಬರವಣಿಗೆ ನನಗೆ ಮುಕ್ತ ಸ್ವಾತಂತ್ರ್ಯದ ಅನುಭವವನ್ನು ಕೊಟ್ಟಿದೆ. ನನ್ನ ಕತೆಗಳನ್ನು ಓದಿ ಮೆಚ್ಚಿದ ಕಾರಣದಿಂದಾಗಿ ನನ್ನಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಜೋಗಿ, ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್ , ಬ್ಲಾಸಮ್ ಬುಕ್ ಹೌಸ್ ನ ಮಾಯಿಗೌಡ, ಹೇಮಾ, ನಟ ಶ್ರೀನಿವಾಸ ಪ್ರಭು ಅವರು ಉಪಸ್ಥಿತರಿದ್ದರು.

Key words: Don’t -worry – future – Kannada-Film director- Yogaraj Bhat

website developers in mysore