ಮೈಸೂರು,ಡಿಸೆಂಬರ್,24,2025 (www.justkannada.in): ಉಳುಮೆ ಮಾಡುತ್ತಿದ್ದ ವೇಳೆ ಎರಡು ಹುಲಿಗಳು ದಾಳಿಯಿಂದ ಅದೃಷ್ಟವಶಾತ್ ಚಾಲಕ ಹಾಗೂ ದನಗಾಹಿ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಣಸೂರು ತಾಲೂಕಿನ ಹನಗೋಡು ಸಮೀಪದ ನೇಗತ್ತೂರಿನ ಶೆಟ್ಟಹಳ್ಳಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯದಂಚಿನಲ್ಲಿ ಜಮೀರ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ವರ್ಷಿತ್ ಎಂಬವವರು ಟ್ರ್ಯಾಕ್ಟರ್ ನಲ್ಲಿ ಮಂಗಳವಾರ ಮಧ್ಯಾಹ್ನ ಉಳುಮೆ ಮಾಡುತ್ತಿದ್ದರು. ಈ ವೇಳೆ ಅರಣ್ಯದಲ್ಲಿ ಕಾಣಿಸಿಕೊಂಡ ಎರಡು ಹುಲಿಗಳ ಪೈಕಿ ಒಂದು ಹುಲಿ ಒಮ್ಮೆಲೆ ಟ್ರ್ಯಾಕ್ಟರ್ ಮೇಲೆ ದಾಳಿಗೆ ಮುಂದಾಯಿತು. ಗಾಬರಿಗೊಂಡ ಚಾಲಕ ವರ್ಷಿತ್ ಭಯದಿಂದ ಕೂಗುತ್ತ ಎಕ್ಸಿಲೇಟರ್ ಹೆಚ್ಚಿಸಿ ಹೊಲದಲ್ಲಿ ಟ್ರ್ಯಾಕ್ಟರನ್ನು ಅಡ್ಡಾದಿಡ್ಡಿ ಓಡಾಡಿಸಿ ಹುಲಿಯನ್ನು ಹಿಮ್ಮೆಟ್ಟಿಸಿದರು.
ಸಮೀಪದ ಪಕ್ಕದ ಹಳ್ಳದಲ್ಲಿ ಜಾನುವಾರು ಮೇಯಿಸುತ್ತಿದ್ದ ದನಗಾಹಿ ಅಸ್ಲಂ ಮೇಲೆ ದಾಳಿ ಮಾಡಲು ನುಗ್ಗಿತು. ಅವರು ಸನಿಹದಲ್ಲೇ ಇದ್ದ ಪಂಪ್ ಸೆಟ್ ಮನೆ ಸೇರಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ಪಕ್ಕದಲ್ಲೇ ಎತ್ತು ಇದ್ದುದರಿಂದ ಅದರ ಮೇಲೆ ದಾಳಿ ನಡೆಸಿ, ಕುತ್ತಿಗೆಗೆ ಗಾಯಗೊಳಿಸಿ ಪಕ್ಕದ ಕಾಡಿನೊಳಕ್ಕೆ ಹೋಗಿದೆ.
ಜೀಪ್ ಗೆ ಹಸು ಕಟ್ಟಿದ್ದ ಅರಣ್ಯ ಇಲಾಖೆ: ಹುಲಿ ದಾಳಿ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದರೂ ತಡವಾಗಿ ಬಂದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ರೈತರು, ಹೊಸ ಎತ್ತು ಕೊಡಿಸಬೇಕು ಎಂದು ಆಗ್ರಹಿಸಿ ಅರಣ್ಯ ಇಲಾಖೆ ಜೀಪ್ ಗೆ ಗಾಯ ಗೊಂಡಿದ್ದ ಎತ್ತನ್ನು ಕಟ್ಟಿಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಆರ್ ಎಫ್‌ಒ ಸುಬ್ರಮಣ್ಯ ಅವರು ರೈತರನ್ನು ಸಮಾಧಾನ ಪಡಿಸಿದರು.
ದೇಹ ನಡುಗುತ್ತಿದೆ ವರ್ಷಿತ್:
ಹುಲಿ ಕಂಡು ಒಮ್ಮೆಲೆ ಮೈಯೆಲ್ಲ ನಡುಗಿತು. ಆಘಾತಕ್ಕೊಳಗಾದ ನಾನು ಕಿರುಚಿಕೊಂಡೆ. ಹುಲಿ ಹತ್ತಿರ ಬರುತ್ತಲೇ ಇತ್ತು. ಟ್ರ್ಯಾಕ್ಟರನ್ನು ಅಡ್ಡಾದಿಡ್ಡಿ ಓಡಿಸಿ ಅದನ್ನು ಗಾಬರಿಗೊಳಿಸಿದೆ. ಅದೃಷ್ಟವಶಾತ್ ಬದುಕಿರುವೆ’ ಎಂದು ಹುಲಿ ದಾಳಿ ಘಟನೆಯನ್ನು ಚಾಲಕ ವರ್ಷಿತ್ ಎಂದು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರು.
ಅಸ್ಲಂ ಮೇಲೆ ದಾಳಿ ನಡೆಸಲು ಮುಂದಾಗುತ್ತಿದ್ದಂತೆ ಪಕ್ಕದಲ್ಲಿದ್ದ ಪಂಪ್ ಸೆಟ್ ಕೊಠಡಿಗೆ ಸೇರಿ ಅವರು ಬಚಾವಾದರು. ಮೇಯಲು ಕಟ್ಟಿ ಹಾಕಿದ್ದ ಹಸುವಿನ ಮೇಲೆ ದಾಳಿ ನಡೆಸಿ ಸ್ವಲ್ಪ ದೂರ ಎಳೆದೊಯ್ಯತು. ಕಾಡಿನೊಳಗೆ ಹೋಗುತ್ತಿದ್ದ ಹುಲಿಯ ಫೋಟೋವನ್ನು ಧೈರ್ಯಮಾಡಿ ಕ್ಲಿಕ್ಕಿಸಿದೆ. ಮತ್ತೊಂದು ಹುಲಿಯ ಜೊತೆಯಾಗಿ ಕಾಡಿನೊಳಗೆ ವಾಪಸ್ ಹೋಯಿತು ಎಂದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸಿಎಫ್ ಲಕ್ಷ್ಮಿಕಾಂತ್ , ಎರಡು ಹುಲಿಗಳಿವೆ ಎಂದು ಚಾಲಕ ವರ್ಷಿತ್ ಮಾಹಿತಿ ನೀಡಿದ್ದಾರೆ. ಇದು ಮೇಟಿಂಗ್ ಸಮಯವಾಗಿದ್ದರಿಂದ ಬಹುತೇಕ ಗಂಡು-ಹೆಣ್ಣು ಹುಲಿ ಇರಬಹುದೆಂದು ಅಂದಾಜಿಸಲಾಗಿದೆ. ಸ್ಥಳದಲ್ಲಿ 4 ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಲಾಗಿದೆ. ಇಂದಿನಿಂದಲೇ(ಬುಧವಾರ) ಕೂಂಬಿಂಗ್ ಆರಂಭಿಸಲಾಗುವುದು ಎಂದಿದ್ದಾರೆ.
Key words: Two tigers, attack, Tractor, driver, boy, escape







