ನಿಧಿಗಾಗಿ ಮಗು ಬಲಿ ಯತ್ನ ಪ್ರಕರಣ: ಇಬ್ಬರ ಬಂಧನ

ಬೆಂಗಳೂರು ಗ್ರಾಮಾಂತರ, ಜನವರಿ, 06,2026 (www.justkannada.in): ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಮಗುವೊಂದನ್ನು ವಾಮಾಚಾರಕ್ಕೆ ಬಲಿ ಕೊಡಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ತಮಾನ ವರದಿಯನ್ನು ಆಧರಿಸಿ ತಡರಾತ್ರಿ ಪ್ರಕರಣದಲ್ಲಿ ಭಾಗಿಯಾದ ಎ1 ಮತ್ತು ಎ4 ಆಪಾದಿತರಾದ ಸೈಯದ್ ಇಮ್ರಾನ್ ಮತ್ತು ಮಂಜುಳ ಇವರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ  ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಸಹಾಯವಾಣಿ-1098ಗೆ ಜನವರಿ 3ರಂದು ಬೆಳಗ್ಗೆ 11.30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಪಟ್ಟಣದಲ್ಲಿ 01 ವರ್ಷದ ಗಂಡು ಮಗುವನ್ನು ವಾಮಾಚಾರಕ್ಕೆ ಬಲಿ ಕೂಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರಿಂದ ಅನಾಮಧೇಯವಾಗಿ ದೂರು ಸ್ವೀಕೃತವಾಗಿತ್ತು.

ಈ ದೂರನ್ನಾಧರಿಸಿ ಮಧ್ಯಾಹ್ನ 12.30 ಗಂಟೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹೊಸಕೋಟೆ ಇವರು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸದರಿ ಸ್ಥಳದಲ್ಲಿ ಹೊಸಕೋಟೆ ತಾಲ್ಲೂಕು, ಸೂಲಿಬೆಲೆ ಹೋಬಳಿ, ಸೂಲಿಬೆಲೆ ಪಟ್ಟಣದ ಜನತಾ ಕಾಲೋನಿಯಲ್ಲಿ ಸೈಯದ್ ಇಮ್ರಾನ್ ಮತ್ತು ನಜ್ಜಾ ಕೌಸರ್ ದಂಪತಿಗಳು ವಾಸವಾಗಿರುವುದು ಕಂಡು ಬಂದಿರುತ್ತದೆ.

ತದನಂತರ, ಪರಿಶೀಲಿಸಲಾಗಿ ಮನೆಯ ನೆಲ ಮಹಡಿ ಕೊಠಡಿಯಲ್ಲಿ ಗುಂಡಿ ಆಗೆದು ಪೂಜೆಗೆ ತಯಾರಿ ಮಾಡಿಕೊಂಡಿರುವುದು ಗಮನಿಸಲಾಗಿರುತ್ತದೆ. ಮಗುವು ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮಗುವನ್ನು ಕರೆತರುವಂತೆ ದಂಪತಿಗಳಿಗೆ ತಿಳಿಸಿದರೂ ಸಹ ಮಗುವನ್ನು ಕರೆತರಲು ಹಿಂದೇಟು ಹಾಕಿರುತ್ತಾರೆ. ತದನಂತರ ಕುಟುಂಬದ ಸದಸ್ಯರೊಬ್ಬರು ಮಗುವನ್ನು ಕರೆತಂದಿರುತ್ತಾರೆ. ಕೂಡಲೇ ಮಗುವನ್ನು ವಶಕ್ಕೆ ಪಡೆದು ರಕ್ಷಣೆ ಮತ್ತು ಪಾಲನೆ ಹಾಗೂ ಪೋಷಣೆಗಾಗಿ ಸರ್ಕಾರಿ ಶಿಶು ಮಂದಿರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಶಕ್ಕೆ ನೀಡಲಾಗಿದೆ

ಮಗುವಿನ ಬಗ್ಗೆ, ವಿಚಾರಿಸಲಾಗಿ, ಮಗುವು ಸೈಯದ್ ಇಮ್ರಾನ್ ಮತ್ತು ನಜ್ಞಾ ಕೌಸರ್ ದಂಪತಿಗಳ ಮಗುವಾಗಿರುವುದಿಲ್ಲ. ಕೂಲಂಕುಷವಾಗಿ ವಿಚಾರಿಸಿದಾಗ ಮಗುವು ಜೈವಿಕವಾಗಿ ಕೋಲಾರ ಮೂಲದ ಮಂಜುಳ ಮತ್ತು ರಾಮಪ್ಪ ದಂಪತಿಗಳಿಗೆ ಸೇರಿದ ಮಗುವಾಗಿರುತ್ತದೆ ಸದರಿ ಮಗುವನ್ನು 08 ತಿಂಗಳ ಹಿಂದೆ ದತ್ತು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ

ದತ್ತು ಪಕ್ರಿಯೆ ಕುರಿತು ಪರಿಶೀಲಿಸಲಾಗಿ ಸದರಿ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳವಡಿಸದೆ ಕಾನೂನು ಬಾಹಿರವಾಗಿ ದತ್ತು ಪಡೆದಿರುವುದು ಕಂಡುಬಂದಿತ್ತು. ದಿನಾಂಕ:04.01.2026 ರಂದು ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರಿ ಶಿಶು ಮಂದಿರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿ ನಿಯಮಾನುಸಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಗುವಿನ ರಕ್ಷಣೆ ಮತ್ತು ಪೋಷಣೆಗೆ ಅಗತ್ಯ ಕ್ರಮವಹಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲು ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದರು.

ಮಗುವಿನ ಜೈವಿಕ ಪೋಷಕರಾದ ಮಂಜುಳ ಮತ್ತು ರಾಮಪ್ಪ ಇವರನ್ನು ವಿಚಾರಿಸಲಾಗಿ 02.04.2025 ರಂದು ಜಾಲಪ್ಪ ಆಸ್ಪತ್ರೆಯಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಇದರಲ್ಲಿ ಗಂಡು ಮಗುವನ್ನು ಕಾನೂನು ಬಾಹಿರವಾಗಿ ಸೈಯದ್ ಇಮ್ರಾನ್ ಮತ್ತು ನಜಾ ಕೌಸರ್ ದಂಪತಿಗಳಿಗೆ ನೀಡಿರುವುದು ಕಂಡುಬಂದಿದೆ.

ಪ್ರಕರಣದ ಕುರಿತಂತೆ, ದಿನಾಂಕ:04.1.01.2026 ರಂದು ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಮತ್ತು ಪ್ರಕರಣದಲ್ಲಿ ಭಾಗಿಯಾದ ಸೈಯದ್ ಇಮ್ರಾನ್, ನಮ್ಮಾ ಕೌಸರ್, ಜೈವಿಕ ಪೋಷಕರಾದ ರಾಮಪ್ಪ, ಮಂಜುಳ, ಮಗುವಿನ ಜನನ ಪತ್ರ ನೀಡಲು ಸಹಕರಿಸಿದ ಶ್ರೀರಂಗ ಆಸ್ಪತ್ರೆ ಸೂಲಿಬೆಲೆ, ಮುಖ್ಯ ನೊಂದಣಾಧಿಕಾರಿಗಳು ಸೂಲಿಬೆಲೆ ವೃತ್ತ ಹೊಸಕೋಟೆ, ದತ್ತು ಪತ್ರಕ್ಕೆ ಸಹಿ ಹಾಕಿರುವ ವಕೀಲರಾದ ಅಂಬರೀಶ್ ಹಾಗೂ ಮಗುವನ್ನು ನಿಧಿ ಅಸೆಗಾಗಿ ಬಲಿಕೊಡಲು ಯತ್ನಿಸಿದವರ ವಿರುದ್ಧ ಪೊಲೀಸ್ ಠಾಣೆ ಹೊಸಕೋಟೆ ಉಪವಿಭಾಗ ಇಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ದೂರನ್ನು ದಾಖಲಿಸಿರುತ್ತಾರೆ. ದೂರಿನ ಆಧಾರದ ಮೇಲೆ ದಿನಾಂಕ:04.01.2026 ರಂದು ಪೊಲೀಸ್ ಠಾಣೆ ಹೊಸಕೋಟೆ ಉಪವಿಭಾಗ ಇಲ್ಲಿ ಎಫ್ಐಆರ್ ಸಂಖ್ಯೆ:02/2026 ಪ್ರಕರಣ ದಾಖಲಿಸಲಾಗಿದೆ.

ಸಹಾಯವಾಣಿ 1098 ಸಂಪರ್ಕಿಸಿ

ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರಕರಣದ ಹಾದಿ/ದಿಕ್ಕು ಬದಲಿಸಲು ಅನುವಾಗದಂತೆ ಹಾಗೂ ಯಾವುದೇ ರೀತಿಯ ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ಹಾಗೂ ಮಕ್ಕಳ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ-1098, ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಮತೆಯ ತೊಟ್ಟಿಲನ್ನು ಸಾರ್ವಜನಿಕರು ಸಂಪರ್ಕಿಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Two, arrested ,attempted, child, Murder  case ,money