ಭೀಕರ ರಸ್ತೆ ಅಪಘಾತದಲ್ಲಿ ’ಮಗಳು ಜಾನಕಿ’ ಧಾರಾವಾಹಿ ನಟಿ ಸಾವು

ಬೆಂಗಳೂರು:ಜುಲೈ-19;(www.justkannada.in) ಚಿತ್ರದುರ್ಗದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜನಪ್ರಿಯ ದಾರಾವಾಹಿ ನಟಿಯೊಬ್ಬರು ಮೃತಪಟ್ಟಿದ್ದಾರೆ.

ಟಿ ಎನ್ ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಮಂಗಳಕ್ಕನ ಪಾತ್ರದಲ್ಲಿ ನಟಿಸುತ್ತಿದ್ದ ಶೋಭಾ ಎಂ.ವಿ ಎಂಬುವವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಒಟ್ಟು 6 ಜನರು ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾರಿನ ಮುಂದಿನ ಗಾಲಿ ಏಕಾಏಕಿ ಸ್ಫೋಟಗೊಂಡಿದೆ. ಪರಿಣಾಮ ಕಾರು ಡಿವೈಡರ್ ಹಾರಿ ಎದುರಿನ ರಸ್ತೆಗೆ ಬಿದ್ದಿದೆ. ಇದೇ ವೇಳೆ ಚಿತ್ರದುರ್ಗದಿಂದ ಹಿರೀಯೂರು ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಶೋಭಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮಗಳು ಜಾನಕಿಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಸದಾ ನಗುಮುಖದ, ಅಪಾರ ಪ್ರತಿಭೆಯ, ಸೌಜನ್ಯ ತುಂಬಿದ ಮಂಗಳಕ್ಕನ ಅನಿರೀಕ್ಷಿತ ಸಾವು ನನ್ನನ್ನು ದಿಗ್ಭ್ರಮೆಗೊಳಿಸಿದೆ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ’ಮಗಳು ಜಾನಕಿ’ ಕಲಾವಿದರ ತಂಡ ಕೂಡ ಮೃತ ಶೋಭಾರಿಗೆ ಸಂತಾಪ ವ್ಯಕ್ತಪಡಿಸಿದ್ದು, ಅನೇಕ ಚಲನಚಿತ್ರಗಳು-ಧಾರಾವಾಹಿಗಳಲ್ಲಿ ನಟಿಸಿರುವ ಇವರು ಅತ್ಯಂತ ಸಜ್ಜನರು, ಸೌಮ್ಯ ಸ್ವಭಾವದವರಾಗಿದ್ದರು. ತಮ್ಮ ಸಹಜ-ನೈಜ ನಟನೆಯಿಂದ ನಮ್ಮೆಲ್ಲರ ಮನ ಗೆದ್ದಿದ್ದ ಮಗಳು ಜಾನಕಿಯ ಮಂಗಳಕ್ಕ ಶೋಭಾ ಎಮ್‌.ವಿ. ಅವರು ಅಪಘಾತದಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ. ಮಗಳು ಜಾನಕಿ ಫೇಸ್‌ಬುಕ್‌ ಬಳಗವು ಅಗಲಿದ ಚೇತನಕ್ಕೆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತದೆ ಎಂದು ಸಂತಾಪ ಸೂಚಿಸಿದೆ.

ಭೀಕರ ರಸ್ತೆ ಅಪಘಾತದಲ್ಲಿ ’ಮಗಳು ಜಾನಕಿ’ ಧಾರಾವಾಹಿ ನಟಿ ಸಾವು

TV Serial,Magalu janaki,actress Shobha M V,dead,Road accident,Chitradurga