ನಾಳೆ ಚಾಮುಂಡಿ ಬೆಟ್ಟದಲ್ಲಿ ಆಷಾಢ ಸಂಭ್ರಮ: ಸಿದ್ಧತಾ ಕಾರ್ಯ ಪರಿಶೀಲಿಸಿದ ಡಿಸಿ ಡಾ.ಕೆ.ವಿ ರಾಜೇಂದ್ರ

ಮೈಸೂರು,ಜೂನ್,22,2023(www.justkannada.in): ನಾಳೆ ಆಷಾಢ ಮಾಸದ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಡದಲ್ಲಿ ವಿಶೇಷ ಪೂಜೆ ನೆರವೇರಲಿದ್ದು, ನಾಡ ದೇವತೆ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ದತೆ ಮಾಡಲಾಗಿದೆ.

ಚಾಮುಂಡಿ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸಕಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕಾರ್ಯ ಪ್ರವೃತ್ತರಾಗಿದ್ದು, ಇಂದು  ಸಿದ್ದತಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಭೇಟಿ ಪರಿಶೀಲನೆ ನಡೆಸಿದರು. ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ಸರದಿ ಸಾಲಿನಲ್ಲಿ ಹೋಗಲು ಬ್ಯಾರಿಕೇಡ್ ನಿರ್ಮಾಣದ ಸಿದ್ದತಾ ಸ್ಥಳ ಪರಿಶೀಲಿಸಿದರು. ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು. ಏನೇ ಆದರೂ ನೀವೇ ಜವಾಬ್ದಾರಿ ಎಂದು ದೇವಾಲಯದ ಆಡಳಿತ ಮಂಡಳಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ನಾಳೆ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಭಕ್ತರು ಶಾಂತಿಯುತವಾಗಿ ಬಂದು ದರ್ಶನ ಪಡೆಯಲು ಮನವಿ ಮಾಡಿಕೊಳ್ಳುತ್ತೇನೆ ಎಂದು  ಜಿಲ್ಲಾಧಿಕಾರಿ ಡಾ ಕೆ. ವಿ ರಾಜೇಂದ್ರ ಹೇಳಿದರು.

ಜಿಲ್ಲಾಧಿಕಾರಿ ಜೊತೆ ಪೋಲಿಸ್ ಆಯುಕ್ತ ಬಿ ರಮೇಶ್, ಡಿಸಿಪಿ ಮುತ್ತುರಾಜ್, ಜಾಹ್ನವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಕುರಿತು ಮಾತನಾಡಿದ ಪ್ರಧಾನ ಅರ್ಚಕರಾದ ಶಶಿ ದೀಕ್ಷಿತ್ ಅವರು, ಚಾಮುಂಡಿ ಬೆಟ್ಟ ಒಂದು ಪುರಾಣ ಪ್ರಸಿದ್ಧವಾದ ಸ್ಥಳ. ಎಂದಿನಂತೆ ನಾಳೆ ಆಷಾಢ ಮಾಸದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗಾಗಿ ನಾಳೆ ಎಂದಿನಂತೆ ಮುಂಜಾನೆ 3.30ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ. ಮಹಾ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರಗಳು ಇರುತ್ತದೆ. ಸರ್ಕಾರದ ಸುತ್ತೋಲೆಯಂತೆ ನಾವು ನಡೆದುಕೊಳ್ಳುತ್ತೇವೆ. ಸಾರ್ವಜನಿಕರು ಶಾಂತಿಯುತವಾಗಿ ದೇವರ ದರ್ಶನ ಮಾಡಿ ಹೋಗಬೇಕು ಎಂದು ಮನವಿ ಮಾಡಿದರು.

Key words: Tomorrow – ashada-Chamundi Hill-DC- Dr. KV Rajendra- inspected – preparatory work