ಚಾಮರಾಜನಗರ,ಜನವರಿ,16,2026 (www.justkannada.in): ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚೆಗೆ ತಾಯಿಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಅದರ ನಾಲ್ಕು ಮರಿಗಳನ್ನು ಹುಡುಕುವ ಕಾರ್ಯಾಚರಣೆ ಮುಂದುವರೆದಿತ್ತು. ಇದೀಗ ನಾಲ್ಕು ಮರಿಗಳ ಪೈಕಿ ಒಂದು ಹೆಣ್ಣು ಹುಲಿಮರಿಯನ್ನು ಸೆರೆ ಹಿಡಿಯಲಾಗಿದೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವಿಭಾಗದ ವ್ಯಾಪ್ತಿಯ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೀದೇವನಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿಗಳನ್ನು ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು, ಬೆಂಗಳೂರು ಇವರ ಅನುಮತಿಯೊಂದಿಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು.
ಅದರಂತೆ, ದಿನಾಂಕ 09-01-2026 ರಂದು ತಾಯಿ ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿತ್ತು. ನಂತರ ನಾಲ್ಕು ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಇಲಾಖೆ ಮುಂದುವರಿಸಿತ್ತು.
ಇದೀಗ ದಿನಾಂಕ 15-01-2026ರ ರಾತ್ರಿ ನಾಲ್ಕು ಹುಲಿ ಮರಿಗಳ ಪೈಕಿ ಒಂದು ಹೆಣ್ಣು ಹುಲಿಮರಿಯನ್ನು ಸೆರೆಹಿಡಿಯಲಾಗಿದ್ದು, ಅದರ ವಯಸ್ಸು ಅಂದಾಜು 10 ತಿಂಗಳಾಗಿದೆ ಎಂದು ಅಂದಾಜಿಸಲಾಗಿದೆ. ಸೆರೆ ಹಿಡಿದ ಹುಲಿ ಮರಿಯನ್ನು ಸುರಕ್ಷಿತ ಸ್ಥಳದಲ್ಲಿ ಇಡಲಾಗಿದ್ದು, ಅದರ ಆರೋಗ್ಯ ಸ್ಥಿತಿಯ ಬಗ್ಗೆ ನಿರಂತರ ನಿಗಾವಹಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಉಳಿದ ಮೂರು ಹುಲಿ ಮರಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಇಲಾಖೆಯ ಇಬ್ಬರು ಪಶು ವೈದ್ಯಾಧಿಕಾರಿಗಳು, ದುಬಾರೆ ಕ್ಯಾಂಪಿನ ನಾಲ್ಕು ಸಾಕಾನೆಗಳು, ಅರಣ್ಯ ಇಲಾಖೆಯ ಡ್ರೋನ್ ತಂಡಗಳು ಹಾಗೂ ಅಧಿಕಾರಿ–ಸಿಬ್ಬಂದಿಗಳು ಭಾಗವಹಿಸಿದ್ದರು.
ಗ್ರಾಮಸ್ಥರ ಸುರಕ್ಷತೆ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಕಾರ್ಯಾಚರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Key words: tiger, cubs, captured, Chamaraja nagar







