ಹುಲಿ ದಾಳಿಗೆ ಒಂದು ಹಸು ಬಲಿ, ಎರಡು ಹಸುಗಳಿಗೆ ಗಾಯ: ಕ್ಯಾಮರಾ ಕಣ್ಣಿಗೆ ಸೆರೆಯಾದ ವ್ಯಾಘ್ರ

ಮೈಸೂರು.ಜುಲೈ,,5,2025 (www.justkannada.in): ಹುಲಿ ದಾಳಿಗೆ ಒಂದು ಹಸು  ಬಲಿಯಾಗಿ ಎರಡು ಹಸುಗಳು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆಲ ದಿನಗಳಿಂದ ಕಾಡು ತೊರೆದು ನಾಡಿನಲ್ಲಿಯೇ ಅಡ್ಡಾಡುತ್ತಿದ್ದ ವ್ಯಾಘ್ರ ಹೆಡಿಯಾಲ ಸುತ್ತಮುತ್ತಲ ಈರೇಗೌಡನ ಹುಂಡಿ ಅಂಜನಾಪುರ ಗ್ರಾಮಗಳ ಬಳಿ ವ್ಯಾಘ್ರನ ಬಾರಿ ಗಾತ್ರದ ಹೆಜ್ಜೆ ಗುರುತುಗಳು ಪ್ರತ್ಯಕ್ಷವಾಗಿದ್ದವು. ಸ್ಥಳಕ್ಕೆ ಭೇಟಿ ನೀಡಿ ಹೆಡಿಯಾಲ ಅರಣ್ಯ ಇಲಾಖೆಯ ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಹುಲಿಯ ಹೆಜ್ಜೆ ಗುರುತುಗಳ ಓಡಾಟವನ್ನು ಗಮನಿಸಿ ಮಡುವಿನಹಳ್ಳಿ ಸಮೀಪದ ಜಮೀನ್ ಒಂದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾಮರ ಅಳವಡಿಸಿ ಬಾರಿ ಗಾತ್ರದ ವ್ಯಾಘ್ರ ಕ್ಯಾಮರ ಕಣ್ಣಿಗೆ ಸೆರೆಯಾಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಿಸಿಎಫ್ ಪ್ರಭಾಕರ್  ಅವರ ಗಮನಕ್ಕೆ ತರಲಾಗಿತ್ತು .

ನಿನ್ನೆ ಮಧ್ಯಾಹ್ನ ಸರಿಸುಮಾರು ಒಂದು ಗಂಟೆಯ ಸಮಯದಲ್ಲಿ ಹುಲಿರಾಯ  ಮಡುವಿನಹಳ್ಳಿ ಗ್ರಾಮದ  ನಿಜಲಿಂಗಪ್ಪ ಎಂಬುವರಿಗೆ ಸೇರಿದ ಒಂದು ಹಸುವನ್ನು ಬಲಿಪಡೆದು ಮಹೇಶ್ ಎಂಬ ರೈತರಿಗೆ ಸೇರಿದ ಮತ್ತೆರಡು ಹಸುಗಳ ಮೇಲೂ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ಉಪವಲಯ ಅರಣ್ಯ ಅಧಿಕಾರಿಗಳಾದ ಕಾರ್ತಿಕ್, ಕಿರಣ್ ಸ್ಥಳ ಪರಿಶೀಲಿಸಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಮೇಲಾಧಿಕಾರಿಗಳು,  ಇತ್ತ ಗಮನ ಹರಿಸಿ, ಹುಲಿಗಳನ್ನು ಸೆರೆ ಹಿಡಿಯುವಂತೆ  ಒತ್ತಾಯಿಸಿದ್ದಾರೆ.vtu

Key words: tiger, attack, cow, Death, injured