ಉದ್ಘಾಟನೆಗೂ ಮುನ್ನವೇ ಮೈಸೂರಿನ ಸಾಫ್ಟ್’ವೇರ್ ಪಾರ್ಕ್’ಗೆ ಭಾರೀ ಡಿಮ್ಯಾಂಡ್

ಮೈಸೂರು, ಜುಲೈ 17, 2022 (www.justkannada.in): ನವೋದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌’ಗೆ ಉದ್ಘಾಟನೆಗೂ ಮುನ್ನವೇ ಡಿಮ್ಯಾಂಡ್‌ ಸೃಷ್ಟಿಯಾಗಿದ್ದು, ಈಗಾಗಲೇ ಇಂಡಸ್ಟ್ರಿ ತೆರೆಯಲು 15 ಕಂಪನಿಗಳು ಮುಂದೆ ಬಂದಿವೆ.

ಉದ್ಯಮ ಆರಂಭಿಸುವ ಕನಸು ಹೊತ್ತವರು ಸಾಫ್ಟ್‌ವೇರ್‌ ಪಾರ್ಕ್ ಕೇಂದ್ರದಲ್ಲಿ ತಮ್ಮ ಕಚೇರಿ ಆರಂಭಿಸಬಹುದು. ಅಲ್ಲದೆ, ಉದ್ಯಮದ ಬೆಳವಣಿಗೆಗೆ ಸರಕಾರದಿಂದ ಸಹಾಯ, ಸಲಹೆ ಹಾಗೂ ಪೂರಕ ವಾತಾವರಣವೂ ಸಿಗಲಿದೆ. ದತ್ತಾಂಶ ಕೇಂದ್ರ, ನೂತನ ಟೆಕ್ನಾಲಜಿ ಹಾಗೂ ಅಂತರ್ಜಾಲ ಸೇವೆ ಕಡಿಮೆ ದರದಲ್ಲಿ ಲಭಿಸಲಿದೆ. ಇದರಿಂದ ಸಾಫ್ಟ್‌ವೇರ್‌ ರಫ್ತನ್ನು ಹೆಚ್ಚಿಸಬಹುದು.

ನಾನಾ ಕಾರಣಗಳಿಂದ ಮಂದವಾಗಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿ ಇದೀಗ ಚುರುಕುಗೊಂಡಿದ್ದು, ದಸರಾ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಎಸ್‌ಟಿಪಿಐ ಪ್ರಾದೇಶಿಕ ಅಧಿಕಾರಿ, ಸಿಪಿಡಬ್ಲ್ಯೂಡಿ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಎಸ್‌ಟಿಪಿಐ ಕೇಂದ್ರದ ಆವರಣವು 2.36 ಎಕರೆ ವಿಸ್ತಾರವಾಗಿದ್ದು, ಕಟ್ಟಡವು 40 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ.

ಏನಿದು ಸಾಫ್ಟ್ವೇರ್ಪಾರ್ಕ್?
ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಉದ್ದಿಮೆದಾರರಿಗೆ ವರದಾನವಾಗಲಿದೆ. ಈ ಪಾರ್ಕ್‌ನಲ್ಲಿ ನೆಲಮಹಡಿ ಸೇರಿದಂತೆ ಮೂರು ಅಂತಸ್ತಿನ ಕಟ್ಟಡ, 200 ವರ್ಕ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತ್ಯೇಕವಾಗಿ ಸಭಾಂಗಣ, ಮೀಟಿಂಗ್‌ ಹಾಲ್‌, ಕಾನ್ಫರೆನ್ಸ್‌ ಹಾಲ್‌, ಚರ್ಚಾ ಕೊಠಡಿ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನೂ ಕಲ್ಪಿಸುವ ಮೂಲಕ ಸಾಫ್ಟ್‌ವೇರ್‌ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.

ಮೈಸೂರಿಗೆ ಭರಪೂರ ಅವಕಾಶ

ರಾಜಾಧಾನಿ ಬೆಂಗಳೂರಿನ ನಂತರ ಮೈಸೂರು ವೇಗವಾಗಿ ಬೆಳೆಯುತ್ತಿದೆ. ದಶಪಥ ರಸ್ತೆ ಕಾಮಗಾರಿ ಮುಗಿದರೆ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸರಾಗವಾಗುತ್ತದೆ. 3 ಗಂಟೆ ಪ್ರಯಾಣ ಕೇವಲ ಒಂದೂವರೆ ಗಂಟೆಗೆ ಇಳಿಯುತ್ತದೆ. ಅಲ್ಲದೆ, ಸಾಫ್ಟ್‌ವೇರ್‌ ರಫ್ತಿನಲ್ಲೂ ಮೈಸೂರು ಮಂಜೂಣಿಯಲ್ಲಿದೆ. ವಿಮಾನ ರನ್‌ ವೇ ವಿಸ್ತರಣೆಯಾಗುತ್ತಿದೆ. ಈ ಎಲ್ಲದರ ಜತೆಗೆ ಎಸ್‌ಟಿಪಿಐ ಕೇಂದ್ರ ಸ್ಥಾಪನೆಯಾದರೆ ಮೈಸೂರಿಗೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ. ಹೊಸ ಹೊಸ ಸ್ಟಾರ್ಟ್‌ ಅಪ್‌ಗಳು ಆರಂಭವಾಗುತ್ತವೆ. ಇದು ನವೋದ್ಯಮಿಗಳ ಉತ್ತೇಜನಕ್ಕೆ ವಿಫುಲ ಅವಕಾಶ ನೀಡಲಿದೆ.

ಏನಿದು ಎಸ್ಟಿಪಿಐ?
ಬೆಂಗಳೂರು, ಭುವನೇಶ್ವರ, ಪುಣೆಯಲ್ಲಿ ಈಗಾಗಲೇ ಎಸ್‌ಟಿಪಿಐ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 1991ರಲ್ಲಿ ಸಾಫ್ಟ್‌ವೇರ್‌ ರಫ್ತನ್ನು ಉತ್ತೇಜಿಸಲು ಕೇಂದ್ರ ಸರಕಾರ ಸಾಫ್ಟ್‌ವೇರ್‌ ಪಾರ್ಕ್ ಆಫ್‌ ಇಂಡಿಯಾ ಸ್ಥಾಪನೆ ಮಾಡಿದೆ. ಇದುವರೆಗೆ ದೇಶದಲ್ಲಿ 62 ಕೇಂದ್ರಗಳಿದ್ದು, 1998ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮೈಸೂರಿನಲ್ಲಿ ಕೇಂದ್ರ ಸ್ಥಾಪಿಸಿದ್ದರು.

ಏನೆಲ್ಲಾ ಪ್ರಯೋಜನ?
1. ನವ ಉದ್ಯಮ ಆರಂಭಿಸುವ ಕನಸು ಹೊತ್ತವರಿಗೆ ಅನುಕೂಲ.
2. ಉದ್ಯಮದ ಬೆಳವಣಿಗೆಗೆ ಸರಕಾರದಿಂದ ಸಹಾಯ, ಸಲಹೆ ಹಾಗೂ ಪೂರಕ ವಾತಾವರಣ.

  1. ಸಾಫ್ಟ್‌ವೇರ್‌ ರಫ್ತು ಹೆಚ್ಚಳಕ್ಕೂ ಸಹಕಾರಿ
  2. ಮೈಸೂರಿಗೆ ಬಂಡವಾಳ ಹೂಡಿಕೆ ಹೆಚ್ಚಾಗುವ ಸಾಧ್ಯತೆ.
  3. ನವೋದ್ಯಮಿಗಳ ಉತ್ತೇಜನಕ್ಕೆ ವಿಫುಲ ಅವಕಾಶಎಸ್‌ಟಿಪಿಐ ಕೇಂದ್ರದ ಒಳಾಂಗಣ ಕಾಮಗಾರಿ ಮುಗಿದಿದೆ. ಸ್ಥಳ ಪರಿಶೀಲನೆ ನಡೆಸಿದ್ದೇನೆ. ಇಡೀ ಕಟ್ಟಡದ ಕಾಮಗಾರಿ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಮುಗಿಯಲಿದೆ. ನವೋದ್ಯಮಿಗಳ ಉತ್ತೇಜನಕ್ಕೆ ಈ ಕೇಂದ್ರದಿಂದ ವಿಫುಲ ಅವಕಾಶ ಸಿಗಲಿದೆ. ಮಾಹಿತಿ ತಂತ್ರಜ್ಞಾನ ಉದ್ಯಮ ಆರಂಭಕ್ಕೆ ಎಲ್ಲ ಸೌಲಭ್ಯಗಳು ಹೊಸ ನಾವಿನ್ಯ ಕೇಂದ್ರದಲ್ಲಿ ದೊರೆಯಲಿವೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

ಕೃಪೆ: ನಾಗರಾಜ್ನವೀಮನೆ, ವಿಜಯ ಕರ್ನಾಟಕ