ಈ ಬಾರಿಯ ದಸರಾ ರಜೆಯಲ್ಲಿ ಬದಲಾವಣೆ: ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಅಸಮಾಧಾನ

ಬೆಂಗಳೂರು, ಫೆಬ್ರವರಿ 16, 2020 (www.justkannada.in): ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ವೇಳಾಪಟ್ಟಿಯಲ್ಲಿ ವಿಜಯದಶಮಿಗೆ ರಜೆ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಶಿಕ್ಷಣ ಇಲಾಖೆ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಈ ಸಲದ ಬೇಸಿಗೆ ರಜೆ ಮೇ 28 ಕ್ಕೆ ಕೊನೆಗೊಂಡು, ಮೇ.29 ರಿಂದ ಹೊಸ ಶೈಕ್ಷಣಿಕ ವರ್ಷ ಶುರುವಾಗಲಿದೆ. ಮೊದಲನೇ ಅವಧಿ ಮೇ 29 ರಿಂದ ಅಕ್ಟೋಬರ್ 2 ರ ತನಕವೂ, ಎರಡನೇ ಅವಧಿಯು ಅಕ್ಟೋಬರ್ 26 ರಿಂದ ಏಪ್ರಿಲ್ 14 ರ ತನಕವೂ ಇರಲಿದೆ ಎಂದು ಸ್ಪಷ್ಟಪಡಿಸಿದೆ.

ಇವುಗಳ ನಡುವೆ, ರಜಾ ಅವಧಿಯನ್ನೂ ಉಲ್ಲೇಖಿಸಿದ್ದು, ಮಧ್ಯಂತರ ಅವಧಿಯ ರಜೆ ಅಕ್ಟೋಬರ್ 3 ರಿಂದ25 ಮತ್ತು ಬೇಸಿಗೆ ರಜೆ 2021 ಏಪ್ರಿಲ್15 ರಿಂದ ಮೇ.29 ರ ತನಕ ಇರಲಿದೆ ಎಂದಿದೆ.

ಆದರೆ. ಅ. 26 ರಂದು ವಿಜಯದಶಮಿ ಹಬ್ಬವಿದೆ. ಆ ದಿನ ಸರ್ಕಾರಿ ರಜೆ ಕೂಡ ಇದೆ. ಅದನ್ನು ಲೆಕ್ಕಿಸದೆಯೇ ವೇಳಾಪಟ್ಟಿ ರಚಿಸಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಶಿಕ್ಷಣ ಇಲಾಖೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಒಕ್ಕೂಟ ಒತ್ತಾಯಿಸಿದೆ.