ದಸರಾ ಗಜಪಡೆ ಮಾವುತ, ಕಾವಾಡಿ ಮಕ್ಕಳಿಗೆ “ ತಾತ್ಕಾಲಿಕ ಶಾಲೆ” ಆರಂಭ..

The Department of School Education has opened a temporary school for the children of the mahutas and kavadis who have arrived with the Dasara procession and camped in the palace premises. On the first day, 20 children attended.

vtu

ಮೈಸೂರು,ಆ. ೨೦,೨೦೨೫ :  ದಸರಾ ಮಹೋತ್ಸವದ ಗಜಪಡೆ ಜತೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತ, ಕಾವಾಡಿಗಳ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆ ಆರಂಭಿಸಿದೆ. ಮೊದಲ ದಿನವೇ ೨೦ ಮಕ್ಕಳು ಹಾಜರಾಗಿದ್ದರು.

ಆ.೪ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ ಮೊದಲ ತಂಡದ ೯ ಆನೆಗಳ ಮಾವುತ, ಕಾವಾಡಿಗಳ ಮಕ್ಕಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದರು. ಶಾಲೆ ಬಿಟ್ಟು ಪೋಷಕರೊಂದಿಗೆ ಬಂದಿರುವ ಮಕ್ಕಳಿಗೆ ಪಠ್ಯಕ್ರಮದ ಕಲಿಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಆನೆ ಬಿಡಾರದ ಬಳಿ ಟೆಂಟ್ ಶಾಲೆ ಆರಂಭಿಸುವ ಪದ್ದತಿಯಿತ್ತು. ಕಳೆದ ನಾಲ್ಕೈದು ವರ್ಷದಿಂದ ಟೆಂಟ್ ಶಾಲೆ  ಪದ್ದತಿ ಪರಿವರ್ತನೆಯಾಗಿ ತಾತ್ಕಾಲಿಕ ಶಾಲೆ ಎಂದು ಮಾರ್ಪಟ್ಟಿದೆ. ಈ ಬಾರಿ ತಾತ್ಕಾಲಿಕ ಶಾಲೆ ಔಪಚಾರಿಕವಾಗಿ ಆರಂಭಿಸಲಾಗಿದೆ.

ಸಾಮಾನ್ಯವಾಗಿ ದಸರಾ ಗಜಪಡೆ ಮಾವುತ, ಕಾವಾಡಿಗಳ ಮಕ್ಕಳು ನಾಚಿಕೆ ಸ್ವಭಾವದವರಾಗಿದ್ದು, ನಗರ ನಿವಾಸಿ, ಅಪರಿಚಿತರೊಂದಿಗೆ ಬೆರೆಯುವುದಿಲ್ಲ. ಅದರಲ್ಲೂ ಟೆಂಟ್ ಶಾಲೆಗೆ ಕಲಿಯಲು ಬನ್ನಿ ಎಂದರೂ ಮಕ್ಕಳು ಬರುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾವುತ, ಕಾವಾಡಿ ಮಕ್ಕಳು ತಾತ್ಕಾಲಿಕ ಶಾಲೆಗೆ ಬರಲು ಆಸಕ್ತಿ ತೋರುತ್ತಿರುವುದು ಗಮನಾರ್ಹ.

ಈ ತಾತ್ಕಾಲಿಕ ಶಾಲೆಗೆ ಮೂವರು ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಡಿಡಿಪಿಐ ಜವರೇಗೌಡ ಮಾರ್ಗದರ್ಶನದಲ್ಲಿ ದಕ್ಷಿಣ ವಲಯ ಬಿಇಒ ಎಂ.ಆರ್.ಅನಂತರಾಜು, ಬಿಆರ್‌ಸಿ ಎಂ.ಬಿ.ಶ್ರೀಕಂಠಸ್ವಾಮಿ ನೇತೃತ್ವದಲ್ಲಿ ತಾತ್ಕಾಲಿಕ ಶಾಲೆ ನಡೆಯಲಿದ್ದು, ಅದಕ್ಕಾಗಿ ದಕ್ಷಿಣ ಬಿಇಓ ಕಚೇರಿ ವತಿಯಿಂದ ವಿದ್ಯಾರಣ್ಯಪುರಂನ ರೆಹಮಾನಿಯಾ ಉರ್ದು ಶಾಲೆಯ ಶಿಕ್ಷಕಿ ನೂರ್‌ಫಾತಿಮ, ಕುಕ್ಕರಹಳ್ಳಿ ಶಾಲೆಯ ದಿವ್ಯ ಪ್ರಿಯದರ್ಶಿನಿ, ಚಾಮುಂಡಿಪುರಂ ವಿಎಂಇ ಬಾಲಬೋಧಿನಿ ಶಾಲೆಯ ಮೋಸಿನ್ ತಾಜ್ ಅವರನ್ನು ಈ ಬಾರಿಯ ತಾತ್ಕಾಲಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ನಿಯೋಜಿಸಲಾಗಿದೆ.

ಕಾಡಿನ ಸುಂದರ ಪರಿಸರದಲ್ಲಿರುವ ಮಾವುತ, ಕಾವಾಡಿಗಳ ಮಕ್ಕಳಿಗೆ ಸಾಮಾನ್ಯ ಶೈಲಿಯಲ್ಲಿ ಪಾಠ ಮಾಡಿದರೆ ಮನಮುಟ್ಟುವುದಿಲ್ಲ ಎಂಬುದನ್ನು ಗಮನಿಸಿದ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆಯಲ್ಲಿ ನಲಿ-ಕಲಿ ವಿಧಾನದ ಮೂಲಕ ವಿವಿಧ ಫಲಕ(ಚಾರ್ಟ್) ಪ್ರದರ್ಶಿಸಿ, ಅಕ್ಷರ ಕಲಿಸಲಾಗುತ್ತಿದೆ.

ತಾತ್ಕಾಲಿಕ ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಇಸ್ಕಾನ್ ಸಂಸ್ಥೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ಮಾವುತ, ಕಾವಾಡಿಗಳ ಮಕ್ಕಳಿಗೂ ಸರಬರಾಜು ಮಾಡಲಾಗುತ್ತದೆ.

ಗಜಪಡೆಯ ಎರಡನೇ ತಂಡದಲ್ಲಿ ಆ.೨೫ರಂದು ಆಗಮಿಸುವ ೫ ಆನೆಗಳ ಮಾವುತ, ಕಾವಾಡಿಗಳ ಮಕ್ಕಳೂ ಸೇರಿದಂತೆ ಇನ್ನಷ್ಟು ಮಕ್ಕಳು ಅರಮನೆಗೆ ಆಗಮಿಸಲಿದ್ದು, ಈ ಭಾರಿ ೪೦ ಮಕ್ಕಳು ತಾತ್ಕಾಲಿಕ ಶಾಲೆಯಲ್ಲಿ ಕಲಿಯುವ ಸಾಧ್ಯತೆ ಇದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

key word: “Temporary school”, opens, children, Dasara Gajapade, Mawutha, Kavadi

vtu

SUMMARY:

“Temporary school” opens for children of Dasara Gajapade Mawutha, Kavadi.

The Department of School Education has opened a temporary school for the children of the mahutas and kavadis who have arrived with the Dasara procession and camped in the palace premises. On the first day, 20 children attended.