ಟ್ಯಾಟೂ ಸಹಾಯದಿಂದ ಹತ್ಯೆಯಾದ ಪತ್ನಿಯ ಗುರುತು ಪತ್ತೆ: ಓಲಾ ಕ್ಯಾಬ್ ಚಾಲಕನೇ ಕೋಲ್ಕತ್ತಾ ಮಾಡೆಲ್ ಹಂತಕ

ಬೆಂಗಳೂರು:ಆ-24:(www.justkannada.in) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ ಬಳಿ ಕೊಲೆಯಾಗಿದ್ದ ಕೋಲ್ಕತ್ತಾ ಮೂಲದ ಮಾಜಿ ಮಾಡೆಲ್ ಹತ್ಯೆಯ ರಹಸ್ಯ ಬೇದಿಸುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇವಲ 500 ರೂ.ಗಾಗಿ ಓಲಾ ಕ್ಯಾಬ್ ಚಾಲಕನೇ ಕೋಲ್ಕತ ಉಪನಗರದ ಪೂಜಾಸಿಂಗ್ ದೇ (32) ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ. ಹೆಗ್ಗನಹಳ್ಳಿ ಸಮೀಪದ ಸಂಜೀವಿನಿನಗರ ನಿವಾಸಿ ಓಲಾ ಕ್ಯಾಬ್ ಚಾಲಕ ಎಚ್.ಎಂ. ನಾಗೇಶ್ (22) ಬಂಧಿತ ಆರೋಪಿ.

ಕೋಲ್ಕತದ ಪೂಜಾಸಿಂಗ್ ಮಾಡೆಲಿಂಗ್ ಬಿಟ್ಟ ಬಳಿಕ ಇವೆಂಟ್ ಮ್ಯಾನೇಜ್​ವೆುಂಟ್ ನಡೆಸುತ್ತಿದ್ದಳು. ಆಕೆಯ ಪತಿ ಸೌದೀಪ್ ದೇ, ಕೋಲ್ಕತದಲ್ಲಿ ಕಾಲ್​ಸೆಂಟರ್ ಕಂಪನಿ ನಡೆಸುತ್ತಿದ್ದಾರೆ. ಈವೆಂಟ್ ಮ್ಯಾನೇಜ್​ವೆುಂಟ್ ಕಾರ್ಯಕ್ರಮದ ಸಲುವಾಗಿ ಜು.30ರಂದು ಕೋಲ್ಕತದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದ ಪೂಜಾ ಕ್ರೆಸೆಂಟ್ ರಸ್ತೆ ಕಚೇರಿಯೊಂದಕ್ಕೆ ತೆರಳಿದ್ದಳು. ಕೆಲಸ ಮುಗಿಸಿ ಸಂಜೆ 5.30ಕ್ಕೆ ಮೊಬೈಲ್​ನಲ್ಲಿ ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಹೊಸೂರು ರಸ್ತೆ ಪರಪ್ಪನ ಅಗ್ರಹಾರ ಕಡೆಗೆ ತೆರಳುತ್ತಿದ್ದಾಗ ಚಾಲಕ ನಾಗೇಶ್​ಗೆ, ಮತ್ತೆ ಬೆಳಗಿನ ಜಾವ 4 ಗಂಟೆಗೆ ಕೆಐಎಗೆ ಹೊರಡಬೇಕಿದೆ. ಆಪ್​ನಲ್ಲಿ ಬುಕ್ ಮಾಡುವುದಿಲ್ಲ. ನೀವೇ ಬಂದು ಪಿಕ್ ಮಾಡುತ್ತೀರಾ ಎಂದು ಕೇಳಿದ್ದಳು. ಅದಕ್ಕೆ ನಾಗೇಶ್ ಒಪ್ಪಿಕೊಂಡಿದ್ದ. ಅದರಂತೆ ಬೆಳಗಿನ ಜಾವ 4 ಗಂಟೆಗೆ ಕೆಐಎಗೆ ತೆರಳುವಂತೆ ಹೇಳಿದ್ದಾರೆ.

ಸ್ವಲ್ಪ ದೂರ ಹೋಗುತ್ತಿದ್ದಂತೆ ಪೂಜಾ ನಿದ್ದೆಗೆ ಜಾರಿದ್ದಳು. ಆಕೆ ಬಳಿ ಬಹಳ ಹಣ ಇರಬೇಕೆಂದುಕೊಂಡ ಕ್ಯಾಬ್ ಚಾಲಕ ನಾಗೇಶ್, ದೊಡ್ಡಜಾಲ ಕಡೆಗೆ ಕಾರು ತಿರುಗಿಸಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಆಕೆಯ ತಲೆಗೆ ರಾಡ್​ನಿಂದ ಹಲ್ಲೆ ನಡೆಸಿದ್ದ. ಆಗ ಆಕೆ ಪ್ರಜ್ಞೆ ತಪ್ಪಿದ್ದಳು. ಪೊಲೀಸರಿಗೆ ದೂರು ನೀಡಬಹುದೆಂಬ ಭಯದಿಂದ ನಾಗೇಶ್ ಕಾರು ಚಲಾಯಿಸಿಕೊಂಡು ಕೆಐಎ ಬಳಿಯ ಕಾಡುಯರಪ್ಪನಹಳ್ಳಿಗೆ ಬಂದಾಗ ಪೂಜಾ ಎಚ್ಚರಗೊಂಡು ಕಾರಿನಿಂದ ಇಳಿದು ಓಡಲು ಯತ್ನಿಸಿದ್ದಾಳೆ. ಆಗ ನಾಗೇಶ್, ಚೂರಿಯಿಂದ ಆಕೆಯ ಕತ್ತು, ಎದೆ, ಹೊಟ್ಟೆಗೆ 22 ಬಾರಿ ಚುಚ್ಚಿದ್ದು. ಕೆಳಗೆ ಬಿದ್ದ ಆಕೆಯ ತಲೆಯ ಮೇಲೆ ಅಲ್ಲಿಯೇ ಸಿಕ್ಕ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಹತ್ಯೆ ಮಾಡಿ ಮೊಬೈಲ್, ಬ್ಯಾಗ್ ಕದ್ದು ಪರಾರಿ ಆಗಿದ್ದ.

ಜು.31ರ ಬೆಳಗಿನ ಜಾವ ದಾರಿಹೋಕರು ಶವವನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ನಾಗೇಶ್​ನನ್ನು ಬಂಧಿಸಲಾಗಿದೆ. ಬಾಗಲೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಹೆಸರು,ವಿಳಾಸ ಸೇರಿ ಮಹಿಳೆ ಬಗ್ಗೆ ಸಣ್ಣ ಸುಳಿವೂ ಲಭ್ಯವಾಗಿರಲಿಲ್ಲ. ಮುಖಚಹರೆ ಮೇರೆಗೆ ಉತ್ತರ ಭಾರತ ಮತ್ತು ಪಶ್ಚಿಮ ಬಂಗಾಳಕ್ಕೆ ಸೇರಿದವಳೆಂದು ಶಂಕಿಸಿದ್ದರು.

ಅತ್ತ ಜು.31ಕ್ಕೆ ಕೋಲ್ಕತಕ್ಕೆ ವಾಪಸಾಗಬೇಕಿದ್ದ ಪೂಜಾ ಅಂದು ಮನೆಗೆ ಬಂದಿರಲಿಲ್ಲ. ಕರೆ ಮಾಡಿದರೆ ಸಂಪರ್ಕಕ್ಕೆ ಸಿಕ್ಕಿಲ್ಲ. ಗಾಬರಿಗೊಂಡ ಸೌದೀಪ್, ಪತ್ನಿಯ ಸ್ನೇಹಿತರಿಗೆ ಪರಿಚಯಸ್ಥರಿಗೆ ವಿಚಾರಿಸಿ ಕೊನೆಗೆ ಕೋಲ್ಕತ ಉಪನಗರ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲಿನ ಪೊಲೀಸರು, ಎಫ್​ಐಆರ್ ದಾಖಲಿಸುವ ಬದಲು ನಿರ್ಲಕ್ಷ್ಯದಿಂದ ಠಾಣಾ ಡೈರಿಯಲ್ಲಿ ಬರೆದಿಟ್ಟುಕೊಂಡು ಸುಮ್ಮನಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಗಲೂರು ಇನ್​ಸ್ಪೆಕ್ಟರ್ ಬಿ. ರಾಮಮೂರ್ತಿ ನೇತೃತ್ವದಲ್ಲಿ ವಿಶೇಷ ತಂಡ ಗಂಭೀರವಾಗಿ ತನಿಖೆ ನಡೆಸುತ್ತಿದ್ದಂತೆ ಒಂದೊಂದೆ ಮಾಹಿತಿ ಲಭ್ಯವಾಗಿದೆ. ಎರಡನೆ ತನಿಖಾ ತಂಡ ಕೋಲ್ಕತ್ತಾಗೆ ತೆರಳಿ ಎಲ್ಲಾ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಕೋಲ್ಕತ ಉಪನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆ ಆಗಿರುವ ಮಾಹಿತಿ ಲಭ್ಯವಾಗಿದೆ.

ದೂರುದಾರ ಸೌದೀಪ್ ದೇ ಅವರನ್ನು ಕರೆಸಿ ಶವದ ಪೋಟೋ ತೋರಿಸಲಾಗಿದೆ. ಆದರೆ, ಕೊಲೆಯಾದ ಮೇಲೆ ಮುಖ ಚಹರೆ ಬದಲಾಗಿದ್ದ ಕಾರಣ ಗುರುತು ಪತ್ತೆ ಕಷ್ಟವಾಗಿತ್ತು. ಕೊನೆಗೆ ಪೂಜಾಸಿಂಗ್ ಕೈ ಮೇಲೆ ಇದ್ದ ‘ಎಸ್’ ಟ್ಯಾಟೂ ಕಂಡು ಪತಿ ಸೌದೀಪ್ ಅದು ತನ್ನ ಪತ್ನಿ ಎಂಬುದನ್ನು ದೃಢಪಡಿಸಿದರು.

ಟ್ಯಾಟೂ ಸಹಾಯದಿಂದ ಹತ್ಯೆಯಾದ ಪತ್ನಿಯ ಗುರುತು ಪತ್ತೆ: ಓಲಾ ಕ್ಯಾಬ್ ಚಾಲಕನೇ ಕೋಲ್ಕತ್ತಾ ಮಾಡೆಲ್ ಹಂತಕ
Tattoo helps solve Kolkata model’s murder: Bengaluru Ola cabbie killed her