ಕಾವೇರಿ ಒಡಲನ್ನು ಬರಿದು ಮಾಡಿಯೇ ಸಿದ್ದ ಎಂದು ‘ಕೈ’ ಸರ್ಕಾರ ಸಂಕಲ್ಪ ತೊಟ್ಟಂತಿದೆ- ರಾಜ್ಯ ಬಿಜೆಪಿ ವಾಗ್ದಾಳಿ.

ಬೆಂಗಳೂರು,ಆಗಸ್ಟ್,21,2023(www.justkannada.in): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಘಟಕ,   ಕಾವೇರಿ ಒಡಲನ್ನು ಬರಿದು ಮಾಡಿಯೇ ಸಿದ್ದ ಎಂದು ರಾಜ್ಯದ  ಕಾಂಗ್ರೆಸ್ ಸರ್ಕಾರ ಸಂಕಲ್ಪ ತೊಟ್ಟಂತಿದೆ. ಕಾವೇರಿಗಾಗಿ ಹೋರಾಟ ನಡೆಯುತ್ತಿರುವಾಗಲೇ, ಕೇವಲ 4,900 ಕ್ಯೂಸೆಕ್ಸ್ ಒಳಹರಿವು ಇರುವಾಗ ತಮಿಳುನಾಡಿಗೆ 12,631 ಕ್ಯೂಸೆಕ್ಸ್ ಕಾವೇರಿ ಹರಿಸಿ ರಾಜ್ಯದ ರೈತರನ್ನೇ ಲೇವಡಿ ಮಾಡಲಾಗುತ್ತಿದೆ.  ಮುಂದಿನ ಬೇಸಿಗೆಯಲ್ಲ, ಚಳಿಗಾಲದಲ್ಲೇ ಕೆ.ಆರ್.ಎಸ್. ಬರಿದು ಮಾಡುವುದು ಸಿದ್ಧರಾಮಯ್ಯ  ಅವರ ಸರ್ಕಾರದ ದುಷ್ಟ ಗುರಿಯಂತಿದೆ ಎಂದು ವಾಗ್ದಾಳಿ ನಡೆಸಿದೆ.

ಜೀವಜಲ ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಇದುವರೆಗೆ ಮಾಡಿದ‌ ನಾಡದ್ರೋಹದ ಕೆಲಸಗಳು.

ಕಾಂಗ್ರೆಸ್‌ಗೆ ರಾಜ್ಯದ ರೈತರ ಹಿತಕ್ಕಿಂತಲೂ ಮುಖ್ಯವಾದದ್ದು ರಾಹುಲ್ ಗಾಂಧಿಗಾಗಿ ತಮಿಳುನಾಡು ಸರ್ಕಾರದ ಓಲೈಕೆ.

ತಮಿಳು‌ನಾಡು‌ ಸರ್ಕಾರಕ್ಕೆ ರಾಜಕೀಯ ಲಾಭ ಮಾಡಿಕೊಡಲು ಕಾವೇರಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಾದವನ್ನು ಮಂಡಿಸದೆ ಪಲಾಯನ.

ಮೇಕೆದಾಟು ಯೋಜನೆ ವಿರೋಧಿಸಿದ ಸ್ಟಾಲಿನ್‌ ಅವರಿಗೆ ಬೆಂಗಳೂರಿನಲ್ಲಿ‌ I.N.D.I.A. ಹೆಸರಲ್ಲಿ ಕೆಂಪು ಹಾಸಿನ ಸ್ವಾಗತ‌..!

ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದ  ಡಿಕೆಶಿವಕುಮಾರ್  ಅವರಿಂದು ತಮಿಳು‌ನಾಡು ಸರ್ಕಾರ ಹಾಕಿದ ಗೆರೆಯನ್ನೂ ದಾಟುತ್ತಿಲ್ಲ..! ಈಗಾಗಲೇ ಒಪ್ಪಂದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸಲಾಗಿದೆ…!

ಇವೆಲ್ಲದರ ಪರಿಣಾಮವಾಗಿ ರಾಜ್ಯದ ಅನ್ನದಾತರ ಬದುಕು ಕಸಿದುಕೊಂಡದ್ದೂ ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ‌ ಕುಡಿಯುವ ನೀರೂ ಇಲ್ಲದಂತಾಗುವ ಅಪಾಯ ಎದುರಾಗಿದೆ ಎಂದು ರಾಜ್ಯ ಬಿಜೆಪಿ ಹರಿಹಾಯ್ದಿದೆ.

Key words: tamilnadu-caveri water-congress-govrnament-bjp